ಕೆಆರ್ ಎಸ್ ಡ್ಯಾಂ ಸುತ್ತಮುತ್ತ ಗಣಿಗಾರಿಕೆಗೆ ನಿರ್ಬಂಧ: ಹೈಕೋರ್ಟ್ ಆದೇಶ.

ಬೆಂಗಳೂರು, ಜನವರಿ 8,2024(www.justkannada.in):  ಕೆಆರ್​​​​ಎಸ್ ಅಣೆಕಟ್ಟೆಯ ಸುತ್ತಮುತ್ತ ಗಣಿಗಾರಿಕೆಗೆ ನಿರ್ಬಂಧ ವಿಧಿಸಿ ರಾಜ್ಯ ಹೈಕೋರ್ಟ್ ಆದೇಶ ಹೊರಡಿಸಿದೆ.

ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಿ ವರಾಳೆ, ನ್ಯಾಯಮೂರ್ತಿ ಕೃಷ್ಣ ದೀಕ್ಷಿತ್ ಅವರಿದ್ದ ಪೀಠ, ಕೆಆರ್​​​​ಎಸ್ ಡ್ಯಾಂ 20 ಕಿಲೋಮೀಟರ್ ವ್ಯಾಪ್ತಿಯಲ್ಲಿ ಗಣಿಗಾರಿಕೆಗೆ ನಿರ್ಬಂಧ  ಹೇರಿ ಆದೇಶಿಸಿದೆ. ಕೆಆರ್​​​​ಎಸ್ ಡ್ಯಾಂ ಬಳಿ ಹಲವು ಬಾರಿ ದೊಡ್ಡ ಶಬ್ದ ಕೇಳಿಬಂದಿದೆ. ಕೃಷ್ಣರಾಜಸಾಗರ ಅಣೆಕಟ್ಟು ಈಗಾಗಲೇ ಸಂಕಷ್ಟದಲ್ಲಿದೆ. ಅಣೆಕಟ್ಟೆಯ ಬಳಿ ಗಣಿಗಾರಿಕೆ ನಡೆಸಿದರೆ ಗಂಭೀರ ಪರಿಣಾಮವಾಗಲಿದೆ. ಕೆಆರ್ ಎಸ್ ಅಣೆಕಟ್ಟಿಗೆ ಐತಿಹಾಸಿಕ ಮೌಲ್ಯವಿದ್ದು,  ಮೈಸೂರು ಮಹಾರಾಜರು, ಸರ್ ಎಂ. ವಿಶ್ವೇಶ್ವರಯ್ಯರ ಕೊಡುಗೆ ಬಹಳಷ್ಟಿದೆ  ಎಂದು  ಹೈಕೋರ್ಟ್ ಹೇಳಿದೆ.

ಕೆಆರ್ ಎಸ್ ಜಲಾಶಯ ವೈಜ್ಷಾನಿಕ ಸಮೀಕ್ಷೆಗೆ ಆದೇಶಿಸಲಾಗಿದೆ.  ಕೆಆರ್ ಎಸ್ ಜಲಾಶಯದ ಸುರಕ್ಷತೆ ಮುಖ್ಯ. ಡ್ಯಾಂಗೆ ಏನಾದರೂ ಆದರೆ ಏನು ಗತಿ..? ಕೆಆರ್​​​​ಎಸ್ ಡ್ಯಾಂ ನಿರ್ಮಾಣಕ್ಕೆ ಜನರು ರಕ್ತ, ಬೆವರು ಹರಿಸಿದ್ದಾರೆ. ತೀ.ತಾ. ಶರ್ಮರ ಸರ್.ಎಂ. ವಿಶ್ವೇಶ್ವರಯ್ಯ ಕುರಿತ ಪುಸ್ತಕದಲ್ಲಿ ಈ ಬಗ್ಗೆ ಉಲ್ಲೇಖವಿದೆ. ಕೆಆರ್​​​​ಎಸ್ ​ಗೆ ಧಕ್ಕೆಯಾಗುವ ಯಾವುದೇ ಚಟುವಟಿಕೆಗೆ ಅವಕಾಶವಿಲ್ಲ. ಮೂರು ರಾಜ್ಯಗಳು ಕಾವೇರಿ ನೀರಿಗಾಗಿ ಹೋರಾಡುತ್ತಿವೆ. ಆದರೆ ಕೆಆರ್​​​​ಎಸ್ ಅಣೆಕಟ್ಟೆ ಸಂರಕ್ಷಣೆಗೆ ಪ್ರಯತ್ನಿಸುತ್ತಿಲ್ಲ. ಅಣೆಕಟ್ಟೆಗೆ ತೊಂದರೆಯಾದರೆ ಆಗುವ ಅನಾಹುತಗಳ ಅರಿವಿದೆಯೇ? ಅಣೆಕಟ್ಟೆಗೆ ತೊಂದರೆಯಾದರೆ ಇಡೀ ರಾಜ್ಯಕ್ಕೇ ಗಂಭೀರ ಆಪತ್ತು ಬರಲಿದೆ. ಹೀಗಾಗಿ ಕೆಆರ್​​​​ಎಸ್  ಡ್ಯಾಂ ಬಳಿ ಗಣಿಗಾರಿಕೆಗೆ ನಿರ್ಬಂಧ ವಿಧಿಸಲಾಗಿದೆ ಎಂದು  ಕೋರ್ಟ್ ತಿಳಿಸಿದೆ.

Key words: Ban – mining- around -KRS Dam- High Court- orders.