ಹಬ್ಬ, ಮದುವೆ, ಸಾರ್ವಜನಿಕ ಸಮಾರಂಭಗಳಲ್ಲಿ ಪಟಾಕಿ ಬಳಕೆ ನಿಷೇಧ- ಸಿಎಂ ಸಿದ್ಧರಾಮಯ್ಯ.

ಬೆಂಗಳೂರು, ಅಕ್ಟೋಬರ್,10,2023(www.justkannada.in): ಅತ್ತಿಬೆಲೆ ಪಟಾಕಿ ದುರಂತ ಸಂಭವಿಸಿದ ಬಳಿಕ ಎಚ್ಚತ್ತ ರಾಜ್ಯ ಸರ್ಕಾರ ಇದೀಗ ಹಬ್ಬ, ಮದುವೆ, ರಾಜಕೀಯ, ಸಾರ್ವಜನಿಕ ಸಮಾರಂಭಗಳಲ್ಲಿ  ಪಟಾಕಿ ಬಳಕೆಗೆ ನಿಷೇಧ ಹೇರಿದೆ.

ಈ ಕುರಿತು  ಮಾತನಾಡಿರುವ ಸಿಎಂ ಸಿದ್ಧರಾಮಯ್ಯ, ದೀಪಾವಳಿ ಹಬ್ಬದ ವೇಳೆ ಹಸಿರು ಪಟಾಕಿ ಮಾತ್ರ ಸಿಡಿಸಲು ಅವಕಾಶ ಇದೆ. ಇನ್ನುಳಿದಂತೆ ಗಣೇಶ ಹಬ್ಬ, ಮದುವೆ, ರಾಜಕೀಯ ಕಾರ್ಯಕ್ರಮಗಳಲ್ಲಿ ಪಟಾಕಿ ಹಚ್ಚುವುದನ್ನು ನಿಷೇಧಿಸಲಾಗಿದೆ. ಪಟಾಕಿ ಸಿಡಿಸುವಾಗ ಸುಪ್ರೀಂಕೋರ್ಟ್ ಆದೇಶ ಪಾಲನೆ ಕಡ್ಡಾಯವಾಗಿದ್ದು, ನಿಯಮ ಉಲ್ಲಂಘಿಸಿದರೆ ಕಠಿಣ ಕ್ರಮ ಕೈಗೊಳ್ಳಲು ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.

ಪಟಾಕಿ ಅಗ್ನಿ ದುರಂತ ತಡೆ ಸಂಬಂಧ ಅಧಿಕಾರಿಗಳ ಜೊತೆ ಚರ್ಚೆ ನಡೆಸಿ ಮುಂಜಾಗ್ರತಾ ಕ್ರಮಗಳ ಬಗ್ಗೆ ಮಾಹಿತಿ ಸಂಗ್ರಹಿಸಲಾಗಿದೆ. ರಾಮಸ್ವಾಮಿ ರೆಡ್ಡಿ ಎಂಬಾತ ಪಟಾಕಿ ಮಾರಾಟಕ್ಕೆ ಅನುಮತಿ ಪಡೆದಿದ್ದ. ಗೋಡೌನ್​ನಲ್ಲಿ ಮಿತಿ ಮೀರಿ ಪಟಾಕಿ ಸಂಗ್ರಹಕ್ಕೆ ಅನುಮತಿ ಪಡೆದಿರಲಿಲ್ಲ. ಹೀಗಾಗಿ ತಹಶೀಲ್ದಾರ್​, ಇನ್ಸ್​​ಪೆಕ್ಟರ್​,ಅಗ್ನಿಶಾಮಕ ಅಧಿಕಾರಿಯನ್ನು ಅಮಾನತ್ತಿಗೆ ಆದೇಶಿಸಲಾಗಿದ್ದು, ಜಿಲ್ಲಾಧಿಕಾರಿಗೆ ನೋಟಿಸ್ ನೀಡಲು ಸೂಚನೆ ನೀಡಲಾಗಿದೆ ಎಂದರು.

ಎಲ್ಲಾ ಪಟಾಕಿ ಅಂಗಡಿಗಳ ಮಳಿಗೆಗಳ ಲೈಸೆನ್ಸ್ ಪರಿಶೀಲಿಸಿ. ಲೈಸೆನ್ಸ್ ಕೊಟ್ಟವರಿಗೆ ನೋಟೀಸ್ ನೀಡಲು ಅಧಿಕಾರಿಗಳಿಗೆ  ಸೂಚನೆ ನೀಡಲಾಗಿದೆ.  ಹಸಿರು ಪಟಾಕಿ ನಿಯಮ ಉಲ್ಲಂಘಿಸಿದ್ರೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ ಎಂದು ಸಿಎಂ ಸಿದ್ಧರಾಮಯ್ಯ ತಿಳಿಸಿದರು.

Key words: Ban – firecrackers – festivals- weddings-public functions- CM- Siddaramaiah