ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಭಜರಂಗ ದಳ ನಿಷೇಧ ವಿಚಾರ: ನಿಮ್ಮ ಹಿಂದೂ ವಿರೋಧಿ ನಿಲುವಿಗೆ ಧಿಕ್ಕಾರ-ಸಚಿವ ಸುನೀಲ್ ಕುಮಾರ್ ಆಕ್ರೋಶ.

ಉಡುಪಿ,ಮೇ,2,2023(www.justkannada.in):  ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಭಜರಂಗ ದಳ ನಿಷೇಧ ಕುರಿತು ಅಂಶ ಸೇರಿಸಿರುವುದಕ್ಕೆ ಸಚಿವ ಸುನೀಲ್ ಕುಮಾರ್ ಟ್ವೀಟ್ ಮಾಡಿ ಆಕ್ರೋಶ ಹೊರ ಹಾಕಿದ್ದಾರೆ.

ಈ ಸಂಬಂಧ ಟ್ವೀಟ್ ಮಾಡಿರುವ ಸುನೀಲ್ ಕುಮಾರ್, ತನ್ನ ಪ್ರಣಾಳಿಕೆಯಲ್ಲಿ ಭಜರಂಗದಳವನ್ನು ನಿಷೇಧಿಸುವುದು ಸೇರಿದಂತೆ ಕಾನೂನು ಕ್ರಮ ತೆಗೆದುಕೊಳ್ಳುವ ವಿಚಾರವನ್ನು ಕಾಂಗ್ರೆಸ್ ಪ್ರಸ್ತಾಪಿಸಿದೆ. ಡಿಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯನವರೇ, ನಾವು ಪಿಎಫ್ ಐ ನಿಷೇಧ ಮಾಡಿದ್ದೇವೆಂಬ ಸಂಕಟ ಹಾಗೂ ದ್ವೇಷವನ್ನು ಭಜರಂಗದಳ ನಿಷೇಧದ ಮೂಲಕ ತೀರಿಸಿಕೊಳ್ಳಲು ಹೊರಟಿದ್ದೀರಾ? ಎಂದು ಕಿಡಿಕಾರಿದ್ದಾರೆ.

ನಿಮ್ಮ ಹಿಂದೂ ವಿರೋಧಿ ನಿಲುವಿಗೆ ಧಿಕ್ಕಾರ. ಭಜರಂಗದಳ ಎನ್ನುವುದು ಸಮಾಜ ವಿರೋಧಿ ಸಂಘಟನೆಯಲ್ಲ. ಹಿಂದು ಸಮಾಜದ ರಕ್ಷಣೆಗಾಗಿ, ಗೋಮಾತೆಯ ಹಿತಕ್ಕಾಗಿ, ಹಿಂದು ಸೋದರಿಯರ ಮಾನ ಸಮ್ಮಾನ ಸಂರಕ್ಷಣೆಗಾಗಿ ಎಂಥ ತ್ಯಾಗಕ್ಕೂ ಸಿದ್ದವಾಗಿರುವ ಕಾರ್ಯಕರ್ತರ ಪಡೆ. ಮುಸ್ಲಿಂ‌ ಓಲೈಕೆಗಾಗಿ ಭಜರಂಗದಳ ನಿಷೇಧಿಸುತ್ತೇವೆಂಬ ದಾಷ್ಟ್ಯವೇ ? ಎಂದು ಸುನೀಲ್ ಕುಮಾರ್  ಹರಿಹಾಯ್ದಿದ್ದಾರೆ.

ಭಜರಂಗ ದಳ ಹಾಗೂ ಪಿಎಫ್ ಐ ಅನ್ನು ಒಂದೇ ತಕ್ಕಡಿಯಲ್ಲಿ ಅಳತೆ ಮಾಡುವ ಕಾಂಗ್ರೆಸಿಗರ ಮನಸು ರೋಗಗ್ರಸ್ಥವಾಗಿದೆ. ಪಿಎಫ್ ಐ ಒಂದು ಭಯೋತ್ಪಾದಕ ಸಂಘಟನೆ ಎಂಬ ಕಾರಣಕ್ಕೆ ನಿಷೇಧ ಮಾಡಿದ್ದೇವೆ. ಭಜರಂಗದಳ ಹಿಂದು ಸಮಾಜ ಮತ್ತು ದೇಶ ಹಿತದ ಸಂಘಟನೆ. ದೇಶಪ್ರೇಮವನ್ನು ಕಾಂಗ್ರೆಸ್ ನಿಷೇಧಿಸುತ್ತದೆಯೇ ? ಎಂದು ಸುನೀಲ್ ಕುಮಾರ್ ವಾಗ್ದಾಳಿ ನಡೆಸಿದರು.

ತಾಕತ್ತಿದ್ದರೇ ಭಜರಂಗದಳ ಬ್ಯಾನ್ ಮಾಡಿ ತೋರಿಸಿ- ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ.

ಹಾಗಯೇ ಕಾಂಗ್ರೆಸ್ ನಿಲುವಿನ ಬಗ್ಗೆ ಕಿಡಿಕಾರಿರುವ ಕೇಂದ್ರ ಸಚಿವೆ ಶೋಭಾ ಕರಂಧ್ಲಾಜೆ, ತಾಕತ್ತಿದ್ದರೇ ಭಜರಂಗದಳ ಬ್ಯಾನ್ ಮಾಡಿ ತೋರಿಸಿ. ವಿನಾಶ ಕಾಲೇ ವಿಪರೀತ ಬುದ್ದಿ ಅನ್ನೋ ಗಾದೆ ಮಾತಿದೆ. ಬಜರಂಗದಳ ದೇಶದ ಪರ ಕೆಲಸ ಮಾಡುತ್ತಿರುವ ಸಂಘಟನೆ . ರಾಜ್ಯದಲ್ಲೂ ಕಾಂಗ್ರೆಸ್ ಗೆ ವಿನಾಶ ಕಾಲ ಬಂದಿದೆ ಎಂದು ಟಾಂಗ್ ನೀಡಿದರು.

Key words: Ban -Bajrang Dal -Congress –Manifesto- Minister -Sunil Kumar -outraged