ನಾಡಹಬ್ಬ ಮೈಸೂರು ದಸರಾ ಉದ್ಘಾಟನಾ ಸಮಾರಂಭದಲ್ಲಿ ಎಲ್ಲರೂ ಪಾಲ್ಗೊಳ್ಳಿ- ಸಚಿವ ವಿ. ಸೋಮಣ್ಣ ಸೂಚನೆ…

ಮೈಸೂರು, ಸೆ, 27,2019 (www.justkannada.in): ಚಾಮುಂಡಿ ಬೆಟ್ಟದಲ್ಲಿ ಸೆ. 29 ರಂದು  ಜರುಗುವ ನಾಡಹಬ್ಬ ಮೈಸೂರು ದಸರಾ ಮಹೋತ್ಸವ ಉದ್ಘಾಟನಾ ಸಮಾರಂಭದಲ್ಲಿ ದಸರಾ ಸಂಬಂಧಿತ ಎಲ್ಲ ಉಪ ಸಮಿತಿಗಳ ಪದಾಧಿಕಾರಿಗಳು ಹಾಗೂ ಸದಸ್ಯರು ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದು ವಸತಿ ಸಚಿವರೂ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ವಿ. ಸೋಮಣ್ಣ ಅವರು ಸೂಚಿಸಿದರು.

ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಡೆದ ದಸರಾ ಸಂಬಂಧಿತ ಎಲ್ಲ ಉಪ ಸಮಿತಿಗಳ ಪದಾಧಿಕಾರಿಗಳ ಸಭೆಯಲ್ಲಿ ವಿವಿಧ ಉಪಸಮಿತಿಗಳ ಕಾರ್ಯಚಟುವಟಿಕೆಗಳನ್ನ ಪರಾಮರ್ಶಿಸಿ, ಅವರು ಮಾತನಾಡಿದರು.

ಉಪ ಸಮಿತಿಗಳ ಎಲ್ಲ ಪದಾಧಿಕಾರಿಗಳು ಹಾಗೂ ಸದಸ್ಯರು ಉದ್ಘಾಟನಾ ಸನಾರಂಭದಲ್ಲಿ ಪಾಲ್ಗೊಳ್ಳಲು ಅನುಕೂಲವಾಗುವ ದೃಷ್ಟಿಯಿಂದ ಮೈಸೂರಿನಿಂದ ಚಾಮುಂಡಿ ಬೆಟ್ಟಕ್ಕೆ ಪ್ರತ್ಯೇಕ ಬಸ್ ವ್ಯವಸ್ಥೆ ಕಲ್ಪಿಸಲು ಚಿಂತಿಸಿರುವುದಾಗಿ ಸಚಿವ ವಿ.ಸೋಮಣ್ಣ ಹೇಳಿದರು.

ದಸರಾ ಸಿದ್ಧತೆ ಬಗ್ಗೆ ಮಾತನಾಡಿದ ಸಚಿವ ವಿ.ಸೋಮಣ್ಣ, ದಸರಾ ಸಿದ್ಧತೆಗಳು ಭರದಿಂದ ಸಾಗಿವೆ. ಹಲವು ಕಾರ್ಯಕ್ರಮಗಳ ರೂಪುರೇಷೆಗಳು ಅಂತಿಮ ಹಂತದಲ್ಲಿವೆ. ಈ ವೇಳೆ ಎಲ್ಲ ಉಪ ಸಮಿತಿಗಳ ಪದಾಧಿಕಾರಿಗಳು ಹಾಗೂ ಸದಸ್ಯರು ನಾಡಹಬ್ಬದ ಯಶಸ್ಸಿಗೆ ಶಕ್ತಿಮೀರಿ ಶ್ರಮಿಸಬೇಕು ಎಂದು ಕಿವಿಮಾತು ಹೇಳಿದರು.

ದಸರಾ ಕ್ರೀಡಾಕೂಟದಲ್ಲಿ ನಾಡಿನ ಮೂಲೆ ಮೂಲೆಗಳಿಂದ ಪಾಲ್ಗೊಳ್ಳುವ ಕ್ರೀಡಾಪಟುಗಳಿಗೆ ಮೈಸೂರು ಅರಮನೆ ಹಾಗೂ ಮೃಗಾಲಯಕ್ಕೆ ಉಚಿತ ಪ್ರವೇಶ ಕಲ್ಪಿಸುವುದಾಗಿ ತಿಳಿಸಿದರು. ದಸರಾ ಅಹ್ವಾನ ಪತ್ರಿಕೆಯನ್ನು ಸಮರ್ಪಕವಾಗಿ ನೀಡುವ ಮೂಲಕ ಎಲ್ಲರಿಗೂ ತಲುಪುವಂತೆ ನೋಡಿಕೊಳ್ಳಬೇಕು. ಎಲ್ಲೂ ಶಿಷ್ಟಾಚಾರಕ್ಕೆ ಲೋಪವಾಗದಂತೆ ಎಚ್ಚರಿಕೆ ವಹಿಸಿ ಎಂದು ಸಚಿವ ಸೋಮಣ್ಣ ಸಲಹೆ ಹೇಳಿದರು.

ಸಂಸದ ಪ್ರತಾಪ್ ಸಿಂಹ, ಶಾಸಕ ಎಲ್. ನಾಗೇಂದ್ರ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಪರಿಮಳ ಶ್ಯಾಂ, ಮೇಯರ್ ಪುಷ್ಪಲತ ಜಗನ್ನಾಥ್, ಜಿಲ್ಲಾಧಿಕಾರಿ ಅಭಿರಾಮ್ ಜಿ. ಶಂಕರ್, ಮಹಾನಗರ ಪಾಲಿಕೆ ಆಯುಕ್ತ ಗುರುದತ್ ಹೆಗ್ಡೆ, ಜಿಲ್ಲಾ ಪಂಚಾಯಿತಿ ಸಿಇಒ ಕೆ. ಜ್ಯೋತಿ, ಅಪರ ಜಿಲ್ಲಾಧಿಕಾರಿ ಪೂರ್ಣಿಮ, ಚಾಮುಂಡೇಶ್ವರಿ ವಿದ್ಯುತ್ ಕಂಪನಿ ವ್ಯವಸ್ಥಾಪಕ ನಿರ್ದೇಶಕ ಗೋಪಾಲಸ್ವಾಮಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

Key words: Attend – inaugural  function-mysore Dasara-  Minister V. Somanna