ಅಮೃತ ಸಿಂಚನ – 41: ದೇವನೊಬ್ಬ ಶಕ್ತಿ ಹಲವು!

ಮೈಸೂರು,ಮೇ,24,2021(www.justkannada.in):

ಅಮೃತ ಸಿಂಚನ – 41: ದೇವನೊಬ್ಬ ಶಕ್ತಿ ಹಲವು!

ಅದೊಂದು ಸಾರಿ ಖಲೀಮುಲ್ಲಾ ಎಂಬ ಮುಸ್ಲಿಂ ವ್ಯಕ್ತಿಯೊಬ್ಬ ಗುರುಗಳನ್ನು ಆಶ್ರಮದಲ್ಲಿ ಭೇಟಿಯಾದ. ಉಭಯ ಕುಶಲೋಪರಿಯ ನಂತರ ಆತ ಅಳುಕುತ್ತಾ ಅಳುಕುತ್ತಾ ಗುರುಗಳನ್ನು ಕೇಳಿಯೇಬಿಟ್ಟ: “ಗುರುಗಳೇ, ನನ್ನದೊಂದು ಜಿಜ್ಞಾಸೆ. ಕೇಳಲೋ ಬೇಡವೋ ಅಂತ ಅಳುಕು. ಆದರೂ ಕೇಳಿಯೇಬಿಡುತ್ತೇನೆ. ಏನೆಂದರೆ, ನಿಮ್ಮ ಹಿಂದೂಗಳದೆಲ್ಲಾ ಸರಿ. ಆದರೆ, ಅವರು ನೂರಾರು ದೇವರುಗಳನ್ನು ನಂಬುತ್ತಾರೆ. ನಮ್ಮ ಹಾಗೆ ಒಂದು ದೇವರನ್ನು ನಂಬೋಲ್ಲ. ಅದು ತಪ್ಪಲ್ವಾ?”jk

ಕಣ್ಣುಮುಚ್ಚಿಕೊಂಡು ಸ್ವಲ್ಪ ಸಮಯ ಸುಮ್ಮನಿದ್ದು ಗುರುಗಳು ಖಲೀಮುಲ್ಲಾಗೆ ಕೇಳಿದರು:

“ಖಲೀಮುಲ್ಲಾ ಸಾಹೇಬರೇ, ನೀವು ಒಂದು ಭಯಂಕರವಾದ ಕಾಡಿನಲ್ಲಿ ಒಂಟಿಯಾಗಿ ನಡೆದುಕೊಂಡು ಹೋಗುತ್ತಿರುತ್ತೀರಿ ಅಂತಿಟ್ಟುಕೊಳ್ಳಿ. ಆಗ ನಿಮಗೆ ಭಯವಾಗುತ್ತದಾ?”

“ಒಬ್ಬನೇ ಭಯಂಕರವಾದ ಕಾಡಿನಲ್ಲಿ ಹೋಗುತ್ತಿದ್ದರೆ ಭಯವಾಗದೆ ಇರುತ್ತದಾ ಗುರುಗಳೇ?”

“ಅಂತಹ ಸಂದರ್ಭದಲ್ಲಿ ಭಯವಾಗುತ್ತದೆ ಅಂತಾಯ್ತು…. ಆ ಸಮಯದಲ್ಲಿ ನಿಮ್ಮ ಜೊತೆಗೆ ಇನ್ನೊಬ್ಬ ಬಂದು ಸೇರಿಕೊಂಡರೆ?”

“ಇಬ್ಬರಿರುವುದರಿಂದ ಭಯ ಒಂದಿಷ್ಟು ಕಡಿಮೆ ಆಗ್ತದೆ.”

“ಇನ್ನೂ ನಾಲ್ಕಾರು ಜನ ನಿಮ್ಮೊಟ್ಟಿಗೆ ಬಂದು ಸೇರಿಕೊಂಡರೆ?”

“ಆಗ ಭಯವೇ ಇಲ್ಲದೆ ಧೈರ್ಯವಾಗಿ ನಾನು ನಡೆಯುತ್ತೇನೆ.”

ಹಾಂ, ಹಾಗೆಯೇ ನಾವು ಒಂದು ದೇವರನ್ನು ಮಾತ್ರ ನಂಬಿ ಕುಳಿತುಕೊಳ್ಳುವ ವರಲ್ಲ. ಗಣಪತಿಯನ್ನು ಬೇಡುತ್ತೇವೆ. ಅವನು ಕೈ ಬಿಟ್ಟರೆ ಶಿವನನ್ನು ಬೇಡುತ್ತೇವೆ. ಅವನೂ ಕೈಕೊಟ್ಟರೆ ವಿಷ್ಣು ಇದ್ದೇ ಇದ್ದಾನೆ. ಹೀಗೆ, ನಮಗೆ ಒಬ್ಬ ದೇವರು ಕೈಬಿಟ್ಟರೆ ಇನ್ನೊಬ್ಬ ಇದ್ದೇ ಇರುತ್ತಾನೆ. ಅದೇ ನಮಗೆ ಧೈರ್ಯ. ಆದರೆ, ನಿಮ್ಮ ಕತೆ ಆಗಲ್ಲ. ಅಲ್ಲಾಹು ನಿಮ್ಮ ಕೈಬಿಟ್ಟ ಎಂದರೆ ನಿಮ್ಮ ಕಥೆ ಮುಗಿದೇ ಹೋಯಿತು. ನಿಮಗೆ ಆಸರೆ ಇನ್ನಾರೂ ಇಲ್ಲ. ಒಬ್ಬನಿಗಿಂತ ಹೆಚ್ಚು ಜನ ಜೊತೆಗಿದ್ದರೆ ಧೈರ್ಯ ಜಾಸ್ತಿ ಅಂತ ನೀವೇ ಒಪ್ಪಿಕೊಂಡಿದ್ದೀರಿ. ಹಾಗೆಯೇ ಒಬ್ಬನಿಗಿಂತ ಹೆಚ್ಚು ಸಂಖ್ಯೆಯ ದೇವರುಗಳಿದ್ದಾಗ ನಮಗೆ ಧೈರ್ಯ ಜಾಸ್ತಿ, ಏನಂತೀರಿ?”amrita-sinchana-41-power-god-many

ಗುರುಗಳ ಮಾತಿಗೆ ಏನು ಹೇಳಬೇಕು ಅಂತ ಖಲೀಮುಲ್ಲಾಗೆ ಗೊತ್ತಾಗಲಿಲ್ಲ. ಕೊನೆಗೆ ಗುರುಗಳೇ ಹೇಳಿದರು:

“ಖಲೀಮುಲ್ಲಾಜೀ, ಬೇಸರ ಪಟ್ಟುಕೊಳ್ಳಬೇಡಿ. ನಮಗೂ ನಿಮ್ಮ ಹಾಗೆಯೇ ಇರುವುದೊಂದೇ ದೇವರು. ಅದನ್ನೇ ಋಗ್ವೇದದಲ್ಲಿ ‘ಏಕಂ ಸತ್ ವಿಪ್ರಾ: ಬಹುಧಾ ವದಂತಿ’ ಎಂಬ ಮಂತ್ರದಲ್ಲಿ ಸ್ಪಷ್ಟಪಡಿಸಿದ್ದಾರೆ. ಅದನ್ನೇ ಬಸವಣ್ಣನವರು ‘ದೇವನೊಬ್ಬ ನಾಮಹಲವು’ ಅಂತ ಕನ್ನಡಿಸಿದ್ದಾರೆ.”

“ಹಾಗಾದರೆ ಗುರುಗಳೇ, ಅಷ್ಟೊಂದು ಸಂಖ್ಯೆಯ ದೇವರುಗಳೆಲ್ಲಾ ಏನು?”

“ಅವೆಲ್ಲಾ ಇರುವ ಒಬ್ಬನೇ ದೇವನ ಅನೇಕಾನೇಕ ಶಕ್ತಿಗಳು. ಈಗ ನೋಡಿ, ದೇವರ ಸೃಷ್ಟಿ ಶಕ್ತಿಯನ್ನು ಬ್ರಹ್ಮನೆಂದು ಕರೆಯುತ್ತೇವೆ. ಅವನ ಕಾಪಾಡುವ ಶಕ್ತಿಯನ್ನು ವಿಷ್ಣು ಅಂತ ಕರೆಯುತ್ತೇವೆ. ಹಾಗೆಯೇ, ಅವನ ನಾಶಮಾಡುವ ಶಕ್ತಿಗೆ ಶಿವ ಅಂತ ಕರೆಯುತ್ತೇವೆ. ವಿಶ್ವದಲ್ಲಿನ ಸಕಲ ಚರಾಚರಗಳೂ ದೇವನ ಈ ಮೂರೂ ಶಕ್ತಿಗಳ ಕೈವಾಡದಿಂದ ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ. ಹಾಗೆಯೇ, ಆ ದೇವನ ಗಾಳಿಯ ಶಕ್ತಿಗೆ ವಾಯು ದೇವನೆಂದೂ, ಜಲ ಶಕ್ತಿಗೆ ವರುಣದೇವನೆಂದೂ, ಸುಡುವ ಶಕ್ತಿಗೆ ಅಗ್ನಿದೇವನೆಂದೂ ಹೇಳುತ್ತಾರೆ.”

ಗುರುಗಳ ಈ ವಿವರಣೆ ಯಿಂದ ಖಲೀಮುಲ್ಲಾಗೆ ಸಮಾಧಾನವಾಯಿತು.

“ಗುರುಗಳೇ, ಹೀಗೆ ಸಮಂಜಸವಾಗಿ ವಿವರಣೆ ಕೊಡುವುದು ಸಾಧ್ಯವಾದರೆ ತಪ್ಪು ತಿಳಿವಳಿಕೆಗೆ ಅವಕಾಶವೇ ಇಲ್ಲ. ಅಧಿಕ ಪ್ರಸಂಗದಿಂದ ಪ್ರಶ್ನಿಸಿದ್ದಕ್ಕೆ ದಯವಿಟ್ಟು ಕ್ಷಮಿಸಿರಿ”- ಅಂತ ಖಲೀಮುಲ್ಲಾ ಗುರುಗಳ ಕ್ಷಮೆ ಕೇಳಿಕೊಂಡ.

ಕ್ಷಮಿಸುವಂತಹ ತಪ್ಪೇ ನನ್ನೂ ನೀವು ಮಾಡಿಲ್ಲ. ಅನುಮಾನವನ್ನು ಪ್ರಶ್ನಿಸಿ ಪರಿಹರಿಸಿಕೊಂಡರಿ ಅಷ್ಟೇ. ನಮ್ಮಲ್ಲಿ ಪ್ರಶ್ನಿಸುವ, ಪರಿಹಾರ ಕಂಡುಕೊಳ್ಳುವ ಅವಕಾಶ ಎಲ್ಲರಿಗೂ ಇದೆ.”

ಈ ಮಾತಿನಿಂದ ಖಲೀಮುಲ್ಲಾ ಸಂತಸಗೊಂಡು ಗುರುಗಳಿಂದ ಬೀಳ್ಕೊಂಡ.

– ಜಿ. ವಿ. ಗಣೇಶಯ್ಯ.