ಅಮೃತ ಸಿಂಚನ – 36: “ಎಷ್ಟು ಪರ್ಸೆಂಟ್ ಬಂದಿದೆ ಪುಟ್ಟೀ?

Promotion

ಅಮೃತ ಸಿಂಚನ – 36: “ಎಷ್ಟು ಪರ್ಸೆಂಟ್ ಬಂದಿದೆ ಪುಟ್ಟೀ?

ಮೈಸೂರು,ಏಫ್ರಿಲ್,21,2021(www.justkannada.in): ಪಿಯುಸಿ ಪರೀಕ್ಷೆ ಮುಗಿದಿತ್ತು. ಫಲಿತಾಂಶ ಕೂಡ ಬಂದಿತು. ಕಡಿಮೆ ಅಂಕ ಪಡೆದ ತನ್ನ ಮಗಳನ್ನು ಆ ತಾಯಿ ಗುರುಗಳ ಹತ್ತಿರ ಕರೆದುಕೊಂಡು ಬಂದರು.jk

“ಗುರುಗಳೇ, ನನ್ನ ಮಗಳು ಈ ಸಾರಿಯ ಪಿಯುಸಿ ಪರೀಕ್ಷೆಯಲ್ಲಿ ಕಡಿಮೆ ಅಂಕ ಪಡೆದಿದ್ದಾಳೆ. ಪ್ರೊಫೆಷನಲ್ ಕೋರ್ಸಿಗ ಸೇರಿಸಲು  ಅಸಾಧ್ಯವಾಗಿದೆ. ಪೇಮೆಂಟ್ ಸೀಟು ನಮ್ಮ ಯೋಗ್ಯತೆಗೆ ಮೀರಿದ್ದು. ಏನು ಮಾಡಬೇಕೋ ತಿಳಿಯುತ್ತಿಲ್ಲ. ಮಾರ್ಗದರ್ಶನ ನೀಡಿ”- ಅಂತ  ಆ ತಾಯಿ ಕೇಳಿಕೊಂಡರು. ಮಗಳ ಮುಖವನ್ನು ಗುರುಗಳು ನೋಡಿದರು. ಅದು ಖಿನ್ನವಾಗಿತ್ತು.

“ಎಷ್ಟು ಪರ್ಸೆಂಟ್ ಬಂದಿದೆ ಪುಟ್ಟೀ?”- ಅಂತ ಗುರುಗಳು ಆತ್ಮೀಯವಾಗಿ  ಕೇಳಿದರು.

“61 ಪರ್ಸೆಂಟ್ ಬಂದಿದೆ ಗುರುಗಳೇ. ಗಣಿತದ ಲ್ಲಂತೂ ಜಸ್ಟ್ ಪಾಸು”- ಮಗಳ ಬದಲು ತಾಯಿ ಉತ್ತರಿಸಿದರು. ಮಗಳ ಮುಖ ನೆಲ ನೋಡುತ್ತಿತ್ತು.

” ಯಾಕೆ ಹೀಗಾಯ್ತು ಪುಟ್ಟೀ?”- ಗುರುಗಳ ಪ್ರಶ್ನೆ.

“ಗಣಿತದ ಪ್ರಶ್ನೆಪತ್ರಿಕೆ ತುಂಬಾ ಕಠಿಣ ಇತ್ತು ಗುರುಗಳೇ”- ಮಗಳು ಉಸುರಿದಳು.

ಅಂದಹಾಗೆ, ನಿನ್ನ ಸ್ನೇಹಿತೆ ಒಬ್ಬಳಿದ್ದಾಳಲ್ಲ, ನಿನ್ನ ಜೊತೆ ಆಗಾಗ ಆಶ್ರಮಕ್ಕೆ ಬರುತ್ತಿದ್ದಳಲ್ಲ. ಅವಳಿಗೆ ಎಷ್ಟು ಪರ್ಸೆಂಟ್ ಅಂಕ ಬಂದಿದೆ?

“ಗುರುಗಳೇ, ಅವಳಿಗೆ 96 ಪರ್ಸೆಂಟ್ ಬಂದಿದೆ.”

“ಗಣಿತದಲ್ಲಿ ಎಷ್ಟು ಬಂದಿದೆ?”

“99 ಪರ್ಸೆಂಟ್ ಗುರುಗಳೇ.”

“ಹೌದಾ?” ಗುರುಗಳು ಅಚ್ಚರಿ ಸೂಚಿಸಿದರು. ಸ್ವಲ್ಪ ಹೊತ್ತು ಮೌನವಾಗಿದ್ದು ನಂತರ ಕೇಳಿದರು:

“ಅಲ್ಲಮ್ಮಾ, ನೀವಿಬ್ಬರೂ ಒಂದೇ ಕಾಲೇಜಿನ ವಿದ್ಯಾರ್ಥಿಗಳಲ್ಲವಾ?”

“ಹೌದು ಗುರುಗಳೇ, ನಾವಿಬ್ಬರೂ ಅಕ್ಕಪಕ್ಕದಲ್ಲೇ ಕೂರುತ್ತಿದ್ದುದು.”

 

“ಅಂದಮೇಲೆ ನೋಡು ಪುಟ್ಟೀ, ನಿಮಗಿಬ್ಬರಿಗೂ ಒಂದೇ ರೀತಿ ಪಾಠ ಹೇಳಿ ಕೊಟ್ಟಿದ್ದಾರೆ ಅಂತಾಯಿತು ಅಲ್ವಾ? ಪರೀಕ್ಷೆಯಲ್ಲಿ ಕೂಡ ನಿನಗೆ ಕಠಿಣವಾದ ಪ್ರಶ್ನೆಪತ್ರಿಕೆಯ ಕೊಟ್ಟು ಅವಳಿಗೆ ಸುಲಭದ್ದು ಕೊಟ್ಟಿರಲಿಲ್ಲ ಅಲ್ವಾ? ಆದರೂ ಅವಳಿಗೆ ಹೆಚ್ಚು ಅಂಕ ಬಂದು ನಿನಗೆ ಕಡಿಮೆ ಬಂದಿದೆ ಅಂದರೆ ನೀನು ಕಷ್ಟಪಟ್ಟು ಸರಿಯಾಗಿ ಅಭ್ಯಾಸ ಮಾಡಿಲ್ಲ ಅಂತ ಅರ್ಥ ಆಗುತ್ತದಲ್ಲವಾ?”

“…………” ಹುಡುಗಿ ನಿರುತ್ತರ.

“ವಾಸ್ತವವಾಗಿ ಪ್ರಶ್ನೆಪತ್ರಿಕೆ ಕಷ್ಟ ಅನ್ನೋದೇ ಒಂದು  ಹುಸಿ ವಿಚಾರ. ನಿನಗೆ ಗೊತ್ತಿರುವ ಪ್ರಶ್ನೆಗಳೇ ಬಂದಿದ್ದರೆ ಪ್ರಶ್ನೆಪತ್ರಿಕೆ ಸುಲಭ ಅನ್ನುತ್ತಿದ್ದೆ. ಗೊತ್ತಿಲ್ಲ ದವು ಬಂದಾಗ ಕಷ್ಟ ಅನಿಸುತ್ತದೆ ಅಲ್ಲವೇ?”

“ವಾಸ್ತವವಾಗಿ ನಿನಗೆ ನಿನ್ನ ಅಪ್ಪ – ಅಮ್ಮ ಇರುವ ಅಲ್ಪ ವರಮಾನದಲ್ಲಿ ಒದಗಿಸಿದ ಸೌಲಭ್ಯಗಳು ಹೆಚ್ಚಾದವು ಅಂತ ಕಾಣುತ್ತೆ ಅಲ್ಲವಾ? ಜೊತೆಗೆ ಯಾರೋ ಸ್ನೇಹಿತರ ಹುಟ್ಟುಹಬ್ಬ, ಮದುವೆ-ಮುಂಜಿ, ಯಾರದೋ ಗೃಹಪ್ರವೇಶ ಅಂತೆಲ್ಲ ಸುತ್ತುತ್ತಿದ್ದೆ ಅಂತ ವರ್ತಮಾನ  ಬಂದಿದೆ. ಜೊತೆಗೆ ಮೊಬೈಲ್ ನಲ್ಲಿ  ಎಸ್ಎಂಎಸ್ ಮಾಡುವುದು, ಇಂಟರ್ನೆಟ್ ವೀಕ್ಷಣೆ, ಸಿನಿಮಾ ಇತ್ಯಾದಿ ಹವ್ಯಾಸಗಳು ಬೇರೆ ಅಂತೆ? ಈ ನಡುವೆ ನಿನಗೆ ಗಂಭೀರವಾಗಿ ಕುಳಿತು ಅಭ್ಯಸಿಸಲು ಸಮಯವೇ ಸಾಕಾಗುತ್ತಿರಲಿಲ್ಲ ಅಲ್ಲವಾ? ಹಾಗಾಗಿ ನಿನ್ನ ಜವಾಬ್ದಾರಿಯನ್ನು ಮರೆತೆ.ಈ ಎಲ್ಲ ಕಾರಣಗಳಿಂದ ನೀನು ಪರೀಕ್ಷೆಯಲ್ಲಿ ಕಡಿಮೆ ಅಂಕ ಪಡೆದಿರುವುದರಲ್ಲಿ ಆಶ್ಚರ್ಯವೇನೂ ಇಲ್ಲ ಬಿಡು. ಮುಂದೆ ಯಾವುದೇ ಕೋರ್ಸಿಗೆ ಸೇರಿದರೂ ಈ ಎಲ್ಲ  ಹವ್ಯಾಸಗಳನ್ನೂ ಬದಿಗಿಟ್ಟು ಮೈ ಬಗ್ಗಿಸಿ ಓದು, ಒಳ್ಳೆಯದಾಗಲಿ”- ಅಂತ ಗುರುಗಳು ಹುಡುಗಿಗೆ ಬುದ್ಧಿ ಹೇಳಿ ಹರಸಿ ಬೀಳ್ಕೊಟ್ಟರು.Amrita sinchana- 36:, “How Much Percent.

ಗುರುಗಳ ಮಾತುಗಳು ಈ ಹುಡುಗಿಯ ಮನಸ್ಸಿಗೆ ಚೆನ್ನಾಗಿ ನಾಟಿತು. ಅವಳು ಮುಂದೆ ಛಲದಿಂದ ಓದಿ, ಒಳ್ಳೆಯ ಅಂಕಗಳೊಂದಿಗೆ ಪದವಿ ಪಡೆದು, ಕಂಪನಿಯೊಂದರಲ್ಲಿ ಉತ್ತಮ ವೇತನದ ಕೆಲಸಕ್ಕೆ ಸೇರಿಕೊಂಡಳು.

Amrita sinchana- 36: “How Much Percent.