ಅಮೃತ ಸಿಂಚನ – 3: ಆಧ್ಯಾತ್ಮ ಸಾಧನೆಗೆ ಮುಪ್ಪೊಂದೇ ವರವಲ್ಲ!

Promotion

ಮೈಸೂರು,ಡಿಸೆಂಬರ್,19,2020(www.justkannada.in)

ಆಧ್ಯಾತ್ಮಸಾಧನೆಗೆ ವೃದ್ಧಾಪ್ಯ ಒಂದು ವರ ಹೌದಾದರೂ ಆ ವರವನ್ನು ಬಳಸಿಕೊಳ್ಳದಿದ್ದರೆ ಉಪಯೋಗವಿಲ್ಲ. ಹೀಗೆಂದ ಮಾತ್ರಕ್ಕೆ ಆಧ್ಯಾತ್ಮ ಸಾಧನೆಗಾಗಿ ಮುಪ್ಪು ಬರುವವರೆಗೂ ಕಾಯಬೇಕು ಎಂದು ತಿಳಿಯಬಾರದು!

“ಮುಪ್ಪು ಬಂದಮೇಲೆ ಆಧ್ಯಾತ್ಮ ಸಾಧನೆ ಮಾಡಿದರಾಯಿತು” ಅಂತ ಸುಮ್ಮನಿದ್ದಿದ್ದರೆ ಆದಿಶಂಕರರಾಗಲೀ, ಶ್ರೀಪಾದ ಶ್ರೀವಲ್ಲಭರಾಗಲೀ ಅಧ್ಯಾತ್ಮ ಸಾಧನೆ ಮಾಡಲು ಸಾಧ್ಯವೇ ಆಗುತ್ತಿರಲಿಲ್ಲ. ಏಕೆಂದರೆ, ಮುಪ್ಪು ಬರುವ ಮೊದಲೇ, ಯೌವ್ವನದಲ್ಲೇ ಈ ಇಬ್ಬರು ಮಹಾಪುರುಷರೂ ದೇಹತ್ಯಾಗ ಮಾಡಿ ನಡೆದಿದ್ದರು!

ಇದರರ್ಥ, ಮುಪ್ಪು ಬರುವ ವರೆಗೂ ಆಧ್ಯಾತ್ಮ ಸಾಧನೆ ಮಾಡಬಾರದೆಂದೇ ನೂ ಅಲ್ಲ. ಅಂದರೆ ಆಧ್ಯಾತ್ಮಸಾಧನೆಗೆ ಮುಪ್ಪೂ ಒಂದು ವರವೇ ವಿನಹ ಮುಪ್ಪೇ ವರ ಅಲ್ಲ!

ಹಿಂದೆ ನಮ್ಮ ರಾಜರುಗಳು, ಚಕ್ರವರ್ತಿಗಳು ತಮ್ಮ ಜೀವಿತದ ಕೊನೆಯ ಭಾಗದಲ್ಲಿ ತಮ್ಮ ಮಕ್ಕಳಿಗೆ ರಾಜ್ಯಭಾರವನ್ನು ವಹಿಸಿ ತಾವು ವಾನಪ್ರಸ್ಥಾಶ್ರಮ ವನ್ನು ಸ್ವೀಕರಿಸುತ್ತಿದ್ದುದು ಆಧ್ಯಾತ್ಮ ಸಾಧನೆಗಾಗಿಯೇ. ಚಿಕ್ಕವಯಸ್ಸಿನಿಂದಲೂ ಮಕ್ಕಳನ್ನು ಸನ್ಮಾರ್ಗದಲ್ಲಿ ಬೆಳೆಸಿದರೆ ಅವರಿಗೆ ಆಧ್ಯಾತ್ಮ ಸಾಧನೆ ಸುಲಭವಾಗುತ್ತದೆ. ಅಧ್ಯಾತ್ಮ ಸಾಧನೆ ಅಂದರೆ ಸಂಸಾರವನ್ನು ತ್ಯಜಿಸಿ ಕಾಡು ಸೇರುವುದಿಲ್ಲ. ಹಾಗಾದರೆ ಋಷಿಮುನಿಗಳು ಕಾಡನ್ನು ಏಕೆ ಸೇರಿಕೊಳ್ಳುತ್ತಿದ್ದರು ಅಂದರೆ ಆಧ್ಯಾತ್ಮಸಾಧನೆಗೆ ಕಾಡಿನ ಪ್ರಶಾಂತ ಪರಿಸರವು ಸಹಾಯಕ ಅಂತ. ಸಂಸಾರದ ಆಕರ್ಷಣೆಯು ತೀವ್ರವಾಗಿರುವಾಗ ಕಣ್ಣಿಗೆ ಕಾಣದ ಆಧ್ಯಾತ್ಮ ಚಿಂತನೆ ಹೇಗೆತಾನೆ ತಲೆಗೆ ಹೋದೀತು? ನನ್ನ ಸಹೋದ್ಯೋಗಿ ಮಹಿಳೆಯೊಬ್ಬರು ಒಮ್ಮೆ ನನ್ನೊಡನೆ ಹೇಳಿದ್ದು ಇನ್ನೂ ನೆನಪಿದೆ: ” ಗಣೇಶಯ್ಯನವರೇ, ಕಣ್ಣು ಮುಚ್ಚಿ ಧ್ಯಾನ ಮಾಡೋಣ ಅಂತ ಪ್ರಯತ್ನಿಸಿದರೆ ಕಣ್ಣು ಮುಚ್ಚಿದಾಗಲೆಲ್ಲ ಟೆಕ್ನಿಕಲ ರ್ ಸಿನಿಮಾಗಳೇ ಕಾಣಿಸುತ್ತವೆ. ಯಾವುದನ್ನು ಕುರಿತು ಧ್ಯಾನ ಮಾಡಬೇಕೋ ಅದು ಮರೆಯಾಗಿ ಹೋಗುತ್ತದೆ” ಅಂತ!

ಇದು ಅಂದುಕೊಂಡಷ್ಟು ಸುಲಭವಂತೂ ಅಲ್ಲ. ಗೀತೆಯಲ್ಲಿ ಕೃಷ್ಣ ಹೇಳಿದ್ದಾನಲ್ಲ “ಮರಣದ ಸಮಯದಲ್ಲಿ ಯಾರು ನನ್ನನ್ನು ನೆನೆಯುವರೋ ಅವರು ನನ್ನನ್ನೇ ಸೇರುತ್ತಾರೆ” ಅಂತ. ಆದರೆ ಜೀವಮಾನವಿಡೀ ಕೃಷ್ಣ ಕೃಷ್ಣ ಅಂತ ಕೃಷ್ಣನ ನಾಮಸ್ಮರಣೆಯನ್ನು ಅಭ್ಯಾಸ ಮಾಡಿಕೊಂಡಿದ್ದರೂ ಅವನಿಗೆ ಯೋಗ ಇಲ್ಲದಿದ್ದರೆ ಮರಣದ ಸಮಯದಲ್ಲಿ ಕೋಮಾಕ್ಕೆ ಜಾರಿಕೊಂಡಿರುತ್ತಾನೆ! ಕೋಮಾದಲ್ಲಿರುವಾಗ ವ್ಯಕ್ತಿಯೊಬ್ಬ ಹೇಗೆತಾನೆ ಕೃಷ್ಣನ ಸ್ಮರಣೆ ಮಾಡಲು ಸಾಧ್ಯ?