ಅಮೃತ ಸಿಂಚನ – 21: ಗುಪ್ತ ಭಾಷೆಯಾಗಿ ಕನ್ನಡ!

ಅಮೃತ ಸಿಂಚನ – 21: ಗುಪ್ತ ಭಾಷೆಯಾಗಿ ಕನ್ನಡ!

ಮೈಸೂರು,ಜನವರಿ,15,2021(www.justkannada.in): ನಮ್ಮ ಮನೆಯ ಎದುರು ಮನೆಯಲ್ಲಿ ಒಂದು ನೇಪಾಳೀ ಕುಟುಂಬ ಬಾಡಿಗೆಗೆ ಇತ್ತು. ಕುಟುಂಬದ ಸದಸ್ಯರಲ್ಲಿ ಅಪ್ಪ-ಅಮ್ಮ, ಸೊಸೆ – ಇಷ್ಟು ಜನರಿಗೆ ಸರಿಯಾಗಿ ಕನ್ನಡ ಬರುತ್ತಿರಲಿಲ್ಲ. ಹಿರಿಯ ಮಗನಿಗೆ ತಕ್ಕಮಟ್ಟಿಗೆ ಬರುತ್ತಿತ್ತು. ಆದರೆ ಹಿರಿಯ ಮಗನ ತಮ್ಮ ಕುಮಾರ್, ತಂಗಿ ಸೀತಾ ಹಾಗೂ ಹಿರಿಯ ಮಗನ ಇಬ್ಬರು ಪುಟಾಣಿ ಹೆಣ್ಣುಮಕ್ಕಳು ರೇಣು, ಮೀನಾ, ಕನ್ನಡಿಗರಷ್ಟೇ ಸುಲಲಿತವಾಗಿ ಕನ್ನಡವನ್ನು ಮಾತನಾಡುತ್ತಿದ್ದರು. ಮಂಗೋಲಿಯನ್ ಬುಡಕಟ್ಟಿನ ಮುಖಚಹರೆಯ ಇವರುಗಳು ಕನ್ನಡ ಮಾತನಾಡುವುದನ್ನು ಕೇಳಿದವರಿಗೆ ಅಚ್ಚರಿಯಾಗುತ್ತಿತ್ತು. ಕುಮಾರ್ ಅಂತೂ ವಿಷ್ಣುವರ್ಧನ್ ಸಿನಿಮಾಗಳನ್ನು ಬಹಳ ನೋಡುತ್ತಿದ್ದ.

ಕಾರಣಾಂತರಗಳಿಂದ ಈ ನೇಪಾಳೀ ಕುಟುಂಬವು ನೇಪಾಳವನ್ನು ಸೇರಿಕೊಂಡಿತು. ಇವರೆಲ್ಲ ನೇಪಾಳ ಸೇರಿ ವರ್ಷ ಕಳೆದ ಮೇಲೆ ಕುಮಾರ್ ಒಮ್ಮೆ ಮೈಸೂರಿಗೆ ಬಂದಿದ್ದ. ಬಂದವ ನಮ್ಮ ಮನೆಗೂ ಭೇಟಿಕೊಟ್ಟಿದ್ದ. ಅದೂ ಇದೂ ಉಭಯಕುಶಲೋಪರಿ ಮಾತುಗಳಾದಮೇಲೆ ನಾನು ಕೇಳಿದೆ: “ಅಲ್ಲಯ್ಯಾ ಕುಮಾರ್, ನೇಪಾಳ ಸೇರಿದಮೇಲೆ ನೀವೆಲ್ಲ ಕನ್ನಡವನ್ನು ಮರೆತೇಬಿಟ್ಟಿರಾ ಹೇಗೆ? ಅಲ್ಲಿ ಈ ಭಾಷೆಯ ಉಪಯೋಗವೇ ಇಲ್ಲವಲ್ಲ” ಅಂತ.

ಅದಕ್ಕವನು, “ಮರೆತಿಲ್ಲ ಅಂಕಲ್, ಅಕ್ಕಪಕ್ಕದವರಿಗೆ ಗೊತ್ತಾಗಬಾರದು ಅನ್ನುವ ಗುಟ್ಟಿನ ವಿಚಾರಗಳನ್ನು ಮಾತನಾಡಿಕೊಳ್ಳುವಾಗ ನಾವು ಕನ್ನಡವನ್ನೇ ಬಳಸುವುದು” ಅಂದ!

“ಎಲಾ ಇವರಾ! ಕನ್ನಡವನ್ನು ನೇಪಾಳದಲ್ಲಿ ಗುಪ್ತ ಭಾಷೆಯಾಗಿ ಬಳಸ್ತಾರಲ್ಲ” ಅಂತ ನನಗೆ ಅಚ್ಚರಿಯಾಗದಿರಲಿಲ್ಲ.

ಬುದ್ಧಿವಂತಿಕೆಯನ್ನು ಬಳಸಿದರೆ ಯಾವುದೂ ನಿರುಪಯುಕ್ತ ವಲ್ಲ.

– ಜಿ. ವಿ. ಗಣೇಶಯ್ಯ.

Amrita sinchana – 21. Kannada as a hidden language!