ಅಮೃತ ಸಿಂಚನ – 17: ಒಳಿತನ್ನು ಈ ಕೂಡಲೇ ಮಾಡಿಬಿಡಿ

ಅಮೃತ ಸಿಂಚನ – 17

ಒಳಿತನ್ನು ಈ ಕೂಡಲೇ ಮಾಡಿಬಿಡಿ

ಮೈಸೂರು,ಜನವರಿ,8,2021(www.justkannada.in):

ಯಾರಿಗಾದರೂ ಉಪಕಾರ ಮಾಡಬೇಕೆನಿಸಿದರೆ ಅಥವಾ ಯಾವುದಾದರೂ ಪುಣ್ಯದ ಕೆಲಸ ಮಾಡಬೇಕೆನಿಸಿದರೆ ನೀವು ಆ ಕೂಡಲೇ ಮಾಡಿಬಿಡಿ.jk-logo-justkannada-mysore

ಯಾಕೆ ಗೊತ್ತೆ ಒಳ್ಳೆಯ ಕಾರ್ಯ ಮಾಡುವುದನ್ನು ನಂತರ ಮಾಡಿದರಾಯಿತು ಅಂತ ನೀವು ಆ ಕೆಲಸ ಮಾಡುವುದನ್ನು ಮುಂದೂಡಿದರೆ ಮರುಕ್ಷಣವೇ ನೀವು ಮರಣಿಸಿಯೂ ಬಿಡಬಹುದು. ಯಾರಿಗೆ ಗೊತ್ತು, ಹಾಗೇನಾದರೂ ಆದರೆ ಉಪಕರಿಸುವ ಪುಣ್ಯಕಾರ್ಯ ಮಾಡುವ ಸದಾವಕಾಶಗಳಿಂದ ನೀವು ಅನ್ಯಾಯವಾಗಿ (ವೃಥಾ) ವಂಚಿತರಾಗಬೇಕಾಗುತ್ತದೆ!

“ಇನ್ನೊಂದು ಸ್ವಲ್ಪ ಹೊತ್ತಿನಲ್ಲಿ ನಾನು ಈ ಪ್ರಪಂಚದ ಮೇಲೆ ಜೀವಂತವಾಗಿ ಇರುತ್ತೇನೋ ಇಲ್ಲವೋ” ಎಂಬಂತಹ ಮನೋಭಾವದಿಂದ ನೀವು ಇದ್ದರೆ, ಅದು ಕೂಡಲೇ ಒಳ್ಳೆಯ ಕಾರ್ಯಗಳನ್ನು ಮಾಡಲು ನಿಮಗೆ ಸಾಧ್ಯವಾಗುತ್ತದೆ !

ಅದು ಹೇಗೆಂದರೆ, “ಹೇಗೂ ಸಾಯುತ್ತೇನಲ್ಲ, ಕೈಲಾದಷ್ಟೂ ಒಳ್ಳೆಯದು ಮಾಡಿಬಿಡೋಣ. ಅದಕ್ಕೆ ಇನ್ನು ಅವಕಾಶ ಸಿಗುತ್ತೋ ಇಲ್ಲವೋ” ಅಂತ ನಿಮಗೆ ಅನಿಸುವುದೇ ಒಳ್ಳೆಯ ಕಾರ್ಯಗಳನ್ನು ಮಾಡಲು ನಿಮಗೆ ದೊರೆಯುವ ಪ್ರೇರಣೆಯಾಗುತ್ತದೆ!

ಹಾಗೆಯೇ, ಯಾರಿಗೋ ತೊಂದರೆ ಕೊಡುವಂತಹ, ಪಾಪ ಮಾಡುವಂತಹ ಆಲೋಚನೆಯು ನಿಮ್ಮ ಮನಸ್ಸಿನಲ್ಲಿ ಬಂದರೆ, ಆಗ ನೀವು, “ನಾನು ಇನ್ನೂ ಬಹಳ ಕಾಲ ಬದುಕಿರುತ್ತೇನಲ್ಲ; ಈ ಕೆಲಸವನ್ನು ಮುಂದೆಂದಾದರೊಮ್ಮೆ ಮಾಡಿದರಾಯಿತು. ನನ್ನ ವೈರಿ ಎಲ್ಲಿಗೆ ಹೋಗುತ್ತಾನೆ?” ಎಂಬಂತಹ ಉದಾಸೀನ ಮನೋಭಾವವನ್ನು ತಳೆದು ಕೆಲಸವನ್ನು ನೀವು ಮಾಡದೆ ಮುಂದಕ್ಕೆ ಹಾಕಿದಲ್ಲಿ, ಮುಂದೊಂದು ದಿನ ಆ (ಮನೆಹಾಳು) ಕೆಲಸ ಮಾಡುವ ಬುದ್ಧಿಯು ನಿಮ್ಮಿಂದ ದೂರವಾಗಿ ಪಾಪ ಸಂಚಯನ ಮಾಡುವ ಅವಕಾಶವು ತಪ್ಪಿ ಹೋಗುವ ಸಂಭವವಿದೆ. ಇದರಿಂದ ನಿಮಗೇ ಲಾಭ!Amrita sinchana- 17.    Do this right away

ಲಂಚ ಪಡೆದ ಹಣದಿಂದ ನೀವು ಸುಖ ಪಡುತ್ತೇನೆ ಎಂದು ಭ್ರಮಿಸಿದರೆ, ಲಂಚದ ಹಣದಿಂದ ಈ ಜನ್ಮದಲ್ಲಿ ನೀವೆಷ್ಟು ಸುಖ ಪಡುತ್ತಿರೋ ಅದಕ್ಕಿಂತ ಹೆಚ್ಚಿನ ಕಷ್ಟವನ್ನು, ದುಃಖವನ್ನು ಮುಂದಿನ ಜನ್ಮದಲ್ಲಿ ನೀವು ಬಡ್ಡಿ ಸಮೇತ ಪಡಬೇಕಾಗುತ್ತದೆ! ಆದಕಾರಣ ಪುಣ್ಯ ಮಾಡಲು ಸಂತಸಪಡಿ, ಪಾಪ ಮಾಡಲು ನಾಚಿಕೊಳ್ಳಿ. ಪುಣ್ಯ ಮಾಡಲು ಸಾಧ್ಯವಾಗದಿದ್ದರೆ ಬೇಡ ಬಿಡಿ. ಪಾಪ ಮಾಡುವುದಕ್ಕೆ ಹೋಗಬೇಡಿ. ಇದು ನೀವು ಸಮಾಜಕ್ಕೆ ಮಾಡಬಹುದಾದ ಒಂದು ಬಹು ದೊಡ್ಡ ಉಪಕಾರ!

– ಜಿ. ವಿ. ಗಣೇಶಯ್ಯ.