ಅಮೇರಿಕಾದಲ್ಲಿ ಮೃತಪಟ್ಟ ಮೈಸೂರಿನ ಯುವಕ: ಪೋಷಕರ ನೆರವಿಗೆ ಮುಂದಾಗುವಂತೆ ವಿದೇಶಾಂಗ ಸಚಿವರಿಗೆ ಸಂಸದೆ ಪತ್ರ….

ಮೈಸೂರು,ನ,30,2019(www.justkannada.in):  ಅಮೇರಿಕಾದಲ್ಲಿ ಅಪರಿಚಿತನ ಗುಂಡಿನ ದಾಳಿಗೆ ಮೃತಪಟ್ಟ ಮೈಸೂರು ಯುವಕನ ಪೋಷಕರ ನೆರವಿಗೆ ಸಂಸದೆ ಶೋಭಾಕರಂದ್ಲಾಜೆ ಮುಂದಾಗಿದ್ದು, ಈ ಸಂಬಂಧ ಭಾರತೀಯ ವಿದೇಶಾಂಗ ಸಚಿವರಾದ ಎಸ್. ಜೈ ಶಂಕರ್   ಅವರಿಗೆ ಪತ್ರ ಬರೆದು ಅಗತ್ಯ ನೆರವು ನೀಡುವಂತೆ ಕೋರಿದ್ದಾರೆ.

ಗುರುವಾರ ರಾತ್ರಿ ಅಮೇರಿಕಾದ ಸ್ಯಾನ್ ಬರ್ನಾಡಿಯೋ, ಕ್ಯಾಲಿಫೋರ್ನಿಯಾದಲ್ಲಿ  ಅಪರಿಚಿತ ವ್ಯಕ್ತಿಯ ಗುಂಡಿಗೆ ಮೈಸೂರಿನ ಅಭಿಷೇಕ್ ಮೃತಪಟ್ಟಿದ್ದರು. ಈ ಸಂಬಂಧ ಮೈಸೂರಿನಲ್ಲಿ ನೆಲೆಸಿರುವ ಆತನ ಪೋಷಕರು ಮಗನ ಪಾರ್ಥೀವ ಶರೀರಕ್ಕಾಗಿ ದಿಕ್ಕು ತೋಚದೆ ಕಂಗಾಲಾಗಿದ್ದರು. ಮಾಧ್ಯಮಗಳಲ್ಲಿ ಈ ಬಗ್ಗೆ ಪ್ರಕಟವಾದ ಸುದ್ದಿಯನ್ನ ಆಧರಿಸಿ ಕಾರ್ಯೋನ್ಮುಖರಾದ ಸಂಸದೆ ಶೋಭಾ ಕರಂದ್ಲಾಜೆ, ಭಾರತದ ವಿದೇಶಾಂಗ ಸಚಿವ ಜೈ ಶಂಕರ್ ಅವರಿಗೆ  ಪತ್ರ ಬರೆದು ಮೃತ ಅಭಿಷೇಕ್ ಪೋಷಕರಿಗೆ  ಕೂಡಲೇ ಅಗತ್ಯ ನೆರವು ನೀಡುವಂತೆ ಮನವಿ ಮಾಡಿದ್ದಾರೆ.

ಇದಕ್ಕೂ ಮುನ್ನ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಮೈಸೂರು ಮೂಲದ ಹಿರಿಯ ಪತ್ರಕರ್ತ ಎಂ.ಬಿ ಮರಮಕಲ್  ದೂರವಾಣಿ ಮೂಲಕ  ಅಭಿಷೇಕ್ ಪೋಷಕರ ಜತೆ ಸಮಾಲೋಚಿಸಿದರು. ಈ ವೇಳೆ ಮೃತ ಅಭಿಷೇಕ್ ಪೋಷಕರು ಮಗನ ಅಂತ್ಯಸಂಸ್ಕಾರವನ್ನ ಅಮೇರಿಕಾದಲ್ಲೇ ಮಾಡುವ ಇಂಗಿತ ವ್ಯಕ್ತಪಡಿಸಿ ಮತ್ತೋರ್ವ ಪುತ್ರನಿಗೆ ವೀಸಾದ ಅವಶ್ಯಕತೆ  ಇರುವುದನ್ನ ಪ್ರಸ್ತಾಪಿಸಿ  ವೀಸಾ ದೊರಕಿಸಿಕೊಡುವಂತೆ ಕೇಳಿಕೊಂಡರು.

ಈ ವಿಷಯವನ್ನ ಮರಮಕಲ್ ಅವರು ಸಂಸದೆ ಶೋಭಾ ಕರಂದ್ಲಾಜೆ ಅವರ ಗಮನಕ್ಕೆ ತಂದಿದ್ದರು. ಈ ಹಿನ್ನೆಲೆಯಲ್ಲಿ  ವಿದೇಶಾಂಗ ಸಚಿವ ಜೈ ಶಂಕರ್ ಅವರಿಗೆ ದೂರವಾಣಿ ಮೂಲಕ  ಮಾತನಾಡಿದ ಸಂಸದೆ ಶೋಭಾ ಕರಂದ್ಲಾಜೆ, ಮೃತ ಅಭಿಷೇಕ್ ತಂದೆ ತಾಯಿಗೆ ಅಮೇರಿಕಾಗೆ ತೆರಳಲು ವೀಸಾ ಲಭ್ಯವಿದ್ದು ಮತ್ತೋರ್ವ ಪುತ್ರನಿಗೆ  ತುರ್ತು ವೀಸಾದ ಅವಶ್ಯಕತೆ ಇರುವ ಬಗ್ಗೆ ಪೋಷಕರು  ವಿನಂತಿಸಿದ್ದಾರೆ. ಅದ್ದರಿಂದ ಈ ಕೂಡಲೇ ಅವರಿಗೆ  ವೀಸಾ ದೊರಕಿಸಿ ಕೊಡುವ ನಿಟ್ಟಿನಲ್ಲಿ  ಕಾರ್ಯೋನ್ಮುಖರಾಗಬೇಕು ಎಂದು ಕೇಳಿಕೊಂಡರು.

ಜತೆಗೆ ಮೃತ ಯುವಕ ಅಭಿಷೇಕ್ ರವರ ಪೋಸ್ಟ್ ಮಾರ್ಟಮ್ ಅನ್ನ ಅದಷ್ಟು ಬೇಗ ಪೂರ್ಣಗೊಳಿಸಿ ಮೃತದೇಹವನ್ನ ಪೋಷಕರ ವಶಕ್ಕೆ ಒಪ್ಪಿಸುವುದು ಹಾಗೂ ಅಮೇರಿಕಾದಲ್ಲಿ ಅಂತ್ಯಸಂಸ್ಕಾರ ಮಾಡಲು ಸೂಕ್ತ ವ್ಯವಸ್ಥೆ ಕಲ್ಪಿಸುವಂತೆ ಭಾರತೀಯ ವಿದೇಶಾಂಗ ಸಚಿವ ಜೈ ಶಂಕರ್ ಅವರ ಬಳಿ ವಿನಂತಿಸಿಕೊಂಡರು.

ಶೀಘ್ರ ಕ್ರಮದ ಬಗ್ಗೆ ಭರವಸೆ…

ಸಂಸದೆ ಶೋಭಾ ಕರಂದ್ಲಾಜೆ ಅವರು ವಿದೇಶಾಂಗ ಸಚಿವರ ಜತೆ ದೂರವಾಣಿ ಮೂಲಕ ಮಾತನಾಡಿ, ಮೃತ ಯುವಕನ ಪೋಷಕರಿಗೆ ಅಗತ್ಯ ನೆರವು ನೀಡುವಂತೆ ಕೇಳಿಕೊಂಡಿದ್ದಾರೆ. ಈ ಪರಿಣಾಮ ವಿದೇಶಾಂಗ ಸಚಿವರು ಅಮೇರಿಕಾದ ಸಂಬಂಧ ಪಟ್ಟ ಪ್ರತಿನಿಧಿಗಳನ್ನ ಸಂಪರ್ಕಿಸಿದ್ದು ಅದಷ್ಟು ಶೀಘ್ರದಲ್ಲೇ ಸೂಕ್ತ ವ್ಯವಸ್ಥೆ  ಏರ್ಪಾಡು ಮಾಡಲಾಗುತ್ತದೆ ಎಂದು ಮುಖ್ಯಮಂತ್ರಿಗಳ ಕಾರ್ಯದರ್ಶಿ ಎಂ.ಬಿ ಮರಮಕಲ್  ‘ಜಸ್ಟ್ ಕನ್ನಡ ಡಾಟ್ ಇನ್’ ಗೆ ಮಾಹಿತಿ ನೀಡಿದ್ದಾರೆ.

Key words: America-mysore-youth-death-cremate-MP-Shobha karndlaje-letter- Foreign Minister -Jai Shankar