ಕೊಡಗಿನಲ್ಲಿ ಸತತ ಆರು ಗಂಟೆ ಕಾರ್ಯಾಚರಣೆ ಬಳಿಕ ಸೆರೆಸಿಕ್ಕ ಹುಲಿರಾಯ!

ಮಡಿಕೇರಿ, ಮಾರ್ಚ್ 15, 2020 (www.justkannada.in): ಸತತ ಆರು ಗಂಟೆಯ ಕಾರ್ಯಾಚರಣೆ ನಂತರ ಗಂಡು ಹುಲಿ ಸೆರೆಯಾಗಿದೆ.

ದಕ್ಷಿಣ ಕೊಡಗಿನ ಬಾಳೆಲೆ ಹೋಬಳಿಯ ಸುಳುಗೋಡುವಿನಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಸತತ ಕಾರ್ಯಾಚರಣೆ ನಡೆಸಿ ಹುಲಿ ಸೆರೆ ಹಿಡಿದು ಮೈಸೂರಿಗೆ ರವಾನಿಸಿದ್ದಾರೆ.

ಹುಲಿಯು ಸುಮಾರು 8 ರಿಂದ 9 ವಯಸ್ಸಿನ ಪ್ರಾಯವಿರಬಹುದೆಂದು ಅರಣ್ಯ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಅಧಿಕಾರಿಗಳು ಹುಲಿಯ ಚಲನವಲನ ಬಗ್ಗೆ ಮಾಹಿತಿ ಪಡೆದು ಅರವಳಿಕೆ ಮದ್ದಿನ ಸಹಾಯದಿಂದ ಹುಲಿಯನ್ನು ಪ್ರಜ್ಞೆ ತಪ್ಪಿಸಿ, ನಂತರ ಸೆರೆ ಹಿಡಿದು ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿಗೆ ರವಾನಿಸಿದ್ದಾರೆ.

ಎರಡು ಬಾರಿ ಅರವಳಿಕೆ ಮದ್ದನ್ನು ಪ್ರಯೋಗ ಮಾಡಿದರಾದರೂ ಪ್ರಯೋಜನವಾಗಲಿಲ್ಲ. ಗಾಬರಿಗೊಂಡ ಹುಲಿಯು ಭಾರೀ ಘರ್ಜನೆಯೊಂದಿಗೆ ಸಮೀಪದ ಕಾಫಿ ತೋಟವನ್ನು ಪ್ರವೇಶ ಮಾಡಿತ್ತು. ಅಂತಿಮವಾಗಿ ನುರಿತ ತಜ್ಞರು ಮೂರನೆಯ ಪ್ರಯೋಗದಲ್ಲಿ ಯಶಸ್ವಿಯಾದರು.