ಎಲ್ಲ ಕಾರ್ಯಕ್ರಮ ರದ್ದು ಮಾಡಿ ಬೆಳಗಾವಿ, ಹುಬ್ಬಳ್ಳಿಯತ್ತ ಹೊರಟ ಸಿಎಂ ಬಿಎಸ್ವೈ

ಬೆಂಗಳೂರು, ಮಾರ್ಚ್ 15, 2020 (www.justkannada.in): ಕೊರೊನಾ ಸೋಂಕಿನ ಭೀತಿ ಹಿನ್ನಲೆ ಎಲ್ಲಾ ಕಾರ್ಯಕ್ರಮಗಳನ್ನು ರದ್ದುಮಾಡುವಂತೆ ಆದೇಶಿಸಿದ ಸಿಎಂ ಯಡಿಯೂರಪ್ಪ ಇಂದು ಬೆಳಗಾವಿ, ಹುಬ್ಬಳ್ಳಿಗೆ ಪ್ರವಾಸ ಬೆಳೆಸಲಿದ್ದಾರೆ.

ಕೊರೊನಾ ವೈರಸ್ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮ ಕೈಗೊಂಡ ರಾಜ್ಯ ಸರ್ಕಾರ ಎಲ್ಲಾ ಸಭೆ ಸಮಾರಂಭ ರದ್ದು ಮಾಡಿದ್ದು, ಮಾಲ್, ಸರ್ಕಾರಿ ಕಚೇರಿಗಳು, ಶಾಲಾಕಾಲೇಜುಗಳನ್ನು ಬಂದ್ ಮಾಡಿಸಿದೆ.

ಈ ನಡುವೆ ಸಿಎಂ ಇಂದು ಬೆಳಗಾವಿಯಲ್ಲಿ ನಡೆಯುತ್ತಿರುವ ವಿಧಾನ ಪರಿಷತ್ ಸದಸ್ಯ ಮಹಾಂತೇಶ್ ಕವಟಗಿಮಠ ಅವರ ಮಗಳ ಮದುವೆ ಸಮಾರಂಭದಲ್ಲಿ ಭಾಗಿಯಾಗಲಿದ್ದಾರೆ.

ಬಳಿಕ ಹುಬ್ಬಳ್ಳಿಗೆ ತೆರಳಿ ಅಲ್ಲಿ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಹಿರಿಯ ಸಾಹಿತಿ ಪಾಟೀಲ್ ಪುಟ್ಟಪ್ಪ ಅವರ ಆರೋಗ್ಯ ವಿಚಾರಿಸಿ ಬಳಿಕ ಬೆಂಗಳೂರಿಗೆ ವಾಪಾಸಾಗಲಿದ್ದಾರೆ.