ಏಕದಿನ ಕ್ರಿಕೆಟ್’ನಿಂದ ನಿವೃತ್ತರಾದ ಅಫ್ಘಾನಿಸ್ತಾನ ಕ್ರಿಕೆಟ್ ತಂಡದ ವೇಗದ ಬೌಲರ್ ನವೀನ್-ಉಲ್-ಹಕ್

ಬೆಂಗಳೂರು, ನವೆಂಬರ್ 11, 2023 (www.justkannada.in): ಅಫ್ಘಾನಿಸ್ತಾನ ಕ್ರಿಕೆಟ್ ತಂಡದ ಸ್ಟಾರ್ ವೇಗದ ಬೌಲರ್ ನವೀನ್-ಉಲ್-ಹಕ್ ಏಕದಿನ ಕ್ರಿಕೆಟ್‌ನಿಂದ ನಿವೃತ್ತರಾಗಿದ್ದಾರೆ.

ದಕ್ಷಿಣ ಆಫ್ರಿಕಾ ವಿರುದ್ಧದ ಸೋಲಿನ ನಂತರ ತಮ್ಮ ನಿವೃತ್ತಿಯನ್ನು ನವೀನ್-ಉಲ್-ಹಕ್ ಖಚಿತಪಡಿಸಿದರು.  2016 ರಲ್ಲಿ ಏಕದಿನ ಕ್ರಿಕೆಟ್​ಗೆ ಕಾಲಿಟ್ಟ ನವೀನ್ ಈವರೆಗೆ ಆಡಿರುವುದು ಕೇವಲ 15 ಏಕದಿನ ಪಂದ್ಯಗಳನ್ನು ಮಾತ್ರ. ಇದರಲ್ಲಿ 22 ವಿಕೆಟ್ ಪಡೆದಿದ್ದಾರೆ.

ನನ್ನ ದೇಶವನ್ನು ಪ್ರತಿನಿಧಿಸುವುದು ಒಂದು ಗೌರವದ ವಿಷಯವಾಗಿದೆ. ಈ ವಿಶ್ವಕಪ್‌ನ ಕೊನೆಯಲ್ಲಿ ನಾನು ಏಕದಿನ ಸ್ವರೂಪದಿಂದ ನಿವೃತ್ತಿ ಘೋಷಿಸುತ್ತಿದ್ದೇನೆ. ಆದರೆ, ನನ್ನ ದೇಶಕ್ಕಾಗಿ ಟಿ20 ಕ್ರಿಕೆಟ್‌ನಲ್ಲಿ ಮುಂದುವರಿಸುತ್ತೇನೆ ಎಂದು ಹೇಳಿದ್ದಾರೆ.

ಐಪಿಎಲ್, ಎಲ್​ಪಿಎಲ್, ಬಿಬಿಎಲ್ ಮತ್ತು ಪಿಸಿಎಲ್​ ಒಳಗೊಂಡಂತೆ ವಿಶ್ವದಾದ್ಯಂತ ಹಲವಾರು ಫ್ರಾಂಚೈಸ್ ಲೀಗ್‌ಗಳಲ್ಲಿ ನವೀನ್-ಉಲ್-ಹಕ್ ಭಾಗವಹಿಸುತ್ತಾರೆ.

ಅಂದಹಾಗೆ ನಿನ್ನೆ ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 5 ವಿಕೆಟ್ ಸೋಲಿನೊಂದಿಗೆ ಅಫ್ಘಾನಿಸ್ತಾನ ತನ್ನ ವಿಶ್ವಕಪ್ 2023 ಅಭಿಯಾನವನ್ನು ಕೂಡ ಕೊನೆಗೊಳಿಸಿತು.