ನನ್ನ ಸೋಲಿಗೆ ಕಾರಣರಾದವರ ವಿರುದ್ದ ಕ್ರಮ ಕೈಗೊಳ್ಳದಿದ್ದರೇ ಸಿಡಿದೇಳಬೇಕಾಗುತ್ತೆ-ವಿ.ಸೋಮಣ್ಣ ಎಚ್ಚರಿಕೆ.

ಬೆಂಗಳೂರು, ಜನವರಿ,6,2024(www.justkannada.in): ನನ್ನ ಸೋಲಿಗೆ ಕಾರಣರಾದವರ ವಿರುದ್ದ ಕ್ರಮ ಕೈಗೊಳ್ಳದಿದ್ದರೇ ಸಿಡಿದೇಳಬೇಕಾಗುತ್ತದೆ ಎಂದು ಮಾಜಿ ಸಚಿವ ವಿ.ಸೋಮಣ್ಣ ಎಚ್ಚರಿಕೆ ನೀಡಿದ್ದಾರೆ.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ವಿ.ಸೋಮಣ್ಣ, ನನ್ನ ಸೋಲಿಗೆ ಕಾರಣ  ಯಾರು ಅಂತ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಅವರಿಗೆ ಗೊತ್ತಿದೆ. ನನ್ನ ಸೋಲಿಗೆ ಕಾರಣರಾದವರ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳಬೇಕು. ಕ್ರಮ ಕೈಗೊಳ್ಳದಿದ್ದರೆ ನಾನು ಸಿಡಿದೇಳಬೇಕಾಗುತ್ತದೆ. ಸರಿಪಡಿಸುವುದು, ಬಿಡುವುದು ಅವರಿಗೆ ಸೇರಿದ್ದು ಎಂದರು.

ಲೋಕಸಭೆ ಚುನಾವಣೆ ಇರುವುದರಿಂದ ಕೆಲ ವಿಚಾರ ಮಾತನಾಡಲ್ಲ. ನಮ್ಮಂಥವರಿಗೆ ಏನು ಅನಾನುಕೂಲ ಎಂಬ ಮಾಹಿತಿ ಅವರಿಗೆ ಇದೆ. ಅವರಿಗೇ ಅಂಟಿಕೊಂಡು ಹೋಗ್ತೇನೆ ಅಂದರೇ ಬೇರೆ ಮಾತಾಡಬೇಕಾಗುತ್ತೆ. ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಇನ್ನೂ ಯುವಕ. ನೀನು ಬೆಳೆಯಬೇಕು, ರಾಜ್ಯದಲ್ಲಿ ದೊಡ್ಡ ನಾಯಕರು ಅಂತ ಇದ್ದಾರೆ. ಸೋಲಿಗೆ ಕಾರಣರಾದವರನ್ನ ಜೊತೆಯಲ್ಲಿ ಇಟ್ಟುಕೊಳ್ಳಬಾರದು ಎಂದು ಹೇಳಿದರು.

ನಿನ್ನೆ ಮಾಜ ಪ್ರಧಾನಿ ಹೆಚ್.ಡಿ ದೇವೇಗೌಡರನ್ನ ಮಾಜಿ ಸಚಿವ ವಿ.ಸೋಮಣ್ಣ ಭೇಟಿ ಮಾಡಿ ಚರ್ಚಿಸಿದ್ದರು. ಈ ಕುರಿತು ಮಾತನಾಡಿದ ವಿ.ಸೋಮಣ್ಣ, ನಾನು ಮೊದಲು ದೇವೇಗೌಡರ ಜತೆಗಿದ್ದೆ. ಬೆಳೆದಿದ್ದೂ ಅಲ್ಲೇ.  ನಮಗೆ ರಾಜಕಾರಣದಲ್ಲಿ ಶಕ್ತಿ ಬರೋಕೆ ದೇವೇಗೌಡರು ಕಾರಣ. ದೇವೇಗೌಡರ ಭೇಟಿ ವೇಳೆ ಹಲವು ವಿಚಾರಗಳ ಬಗ್ಗೆ ಮಾತನಾಡಿದ್ದೇವೆ.  ರಾಜ್ಯಕ್ಕಾಗಿ ಬದಲಾವಣೆ ಮಾಡಿಕೊಂಡು ಕೆಲಸ ಮಾಡಬೇಕು ಎಂದು ದೇವೇಗೌಡರು ಸಲಹೆ ನೀಡಿದ್ದಾರೆ ಎಂದರು.

Key words: action -against – responsible – my defeat- V. Somanna