ಸಂಕಷ್ಟದ ಸಮಯದಲ್ಲಿ ಕಾರಣ ಹೇಳದೆ ಕೆಲಸ ಮಾಡಿ: ಅಧಿಕಾರಿಗಳಿಗೆ ಸಚಿವ ನಾರಾಯಣಗೌಡ ಎಚ್ಚರಿಕೆ

ಬೆಂಗಳೂರು, ಜುಲೈ 22, 2020 (www.justkannada.in): ಪ್ರತಿದಿನ ಕಾರಣ ಹೇಳಬೇಡಿ. ಎರಡು ತಿಂಗಳ ಹಿಂದೆ ಹೇಳಿರುವ ಕೆಲಸ ಇನ್ನೂ ಆಗಿಲ್ಲ. ರೇಷ್ಮೆ ಬೆಳೆಗಾರರಿಗೆ ಆಗುವ ಅನ್ಯಾಯ ತಪ್ಪಿಸಬೇಕು. ಅದಕ್ಕಾಗಿ ರೇಷ್ಮೆ ಮಾರುಕಟ್ಟೆಯಲ್ಲಿ ಆನ್ಲೈನ್ ವ್ಯವಹಾರ ಮಾಡಲು ಸೂಚಿಸಿದ್ದೆ. ಆದ್ರೆ ಬಹುತೇಕ ಮಾರುಕಟ್ಟೆಯಲ್ಲಿ ಇನ್ನೂ ಜಾರಿಯಾಗಿಲ್ಲ. ತಕ್ಷಣ ಆನ್ಲೈನ್ ವ್ಯವಹಾರ ಆರಂಭ ಆಗಬೇಕು. ಇಲ್ಲದಿದ್ದಲ್ಲಿ ಕ್ರಮ ಜರುಗಿಸಬೇಕಾಗುತ್ತೆ ಎಂದು ಪೌರಾಡಳಿತ, ತೋಟಗಾರಿಕೆ ಹಾಗೂ ರೇಷ್ಮೆ ಸಚಿವ ಡಾ.ನಾರಾಯಣ ಗೌಡ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

ರೇಷ್ಮೆ ಬೆಳೆಗಾರರ ಸಮಸ್ಯೆ, ಮಾರುಕಟ್ಟೆ ವಿಚಾರವಾಗಿ ಅಧಿಕಾರಿಗಳ ಜೊತೆ ಸಚಿವರು ವಿಡಿಯೊ ಸಂವಾದ ನಡೆಸಿದರು. ಈ ವೇಳೆ ಬೇಜವಾಬ್ದಾರಿ ತೋರಿದ ಅಧಿಕಾರಿಗಳಿಗೆ ತರಾಟೆ ತೆಗೆದುಕೊಂಡ ಸಚಿವರು, ರೈತರಿಗೆ ಅನ್ಯಾಯ ಆಗುತ್ತಿರುವ ಮಾಹಿತಿ ಸಿಕ್ಕಿದೆ. ಮಾರುಕಟ್ಟೆಯಲ್ಲಿ ಸಿಸಿಟಿವಿ ಕ್ಯಾಮರಾ ಅಳವಡಿಸಬೇಕು, ಸರಿಯಾಗಿ ಕಾರ್ಯ ನಿರ್ವಹಿಸುವಂತೆ ನೋಡಿಕೊಳ್ಳಬೇಕು. ರೈತರು ತಂದ ರೇಷ್ಮೆ ಗೂಡಿನ ತೂಕ ಸರಿಯಾಗಿ ಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಕೋಲಾರದಲ್ಲಿ ಮಾತ್ರ ಬಹುತೇಕ ಆನ್ಲೈನ್ ವ್ಯವಹಾರ ಆರಂಭಿಸಿದ್ದಾರೆ. ಮಹಿಳಾ ಅಧಿಕಾರಿ ಮಾಡಿದ ಕಾರ್ಯ ಶ್ಲಾಘನೀಯ. ಉಳಿದ ರೇಷ್ಮೆ ಮಾರುಕಟ್ಟೆಯಲ್ಲಿ ಯಾಕೆ ಸಾಧ್ಯವಿಲ್ಲ. ಎಲ್ಲ ರೇಷ್ಮೆ ಮಾರುಕಟ್ಟೆಯಲ್ಲಿ ರೈತರಿಗೆ ಇ ಪೇಮೆಂಟ್ ಆರಂಭವಾಗಬೇಕು. ತಕ್ಷಣ ಅಧಿಕಾರಿಗಳು ಈ ಕೆಲಸ ಮಾಡಬೇಕು ಎಂದು ಆದೇಶಿಸಿದರು.

ಎಲ್ಲ ಜಿಲ್ಲೆ ತೋಟಗಾರಿಕೆ ಇಲಾಖೆ ಅಧಿಕಾರಿಗಳ ಜೊತೆಯೂ ವಿಡಿಯೊ ಸಂವಾದ ನಡೆಸಿದ ಸಚಿವರು, ಆಲುಗಡ್ಡೆ ಬೆಳೆಯುವ ರೈತರಿಗೆ ಅಧಿಕಾರಿಗಳು ಸೂಕ್ತ ಮಾಹಿತಿ ಒದಗಿಸಿ, ಬೇಕಾಗಿರುವ ಔಷಧಿಗಳನ್ನ ತಕ್ಷಣ ಸರಬರಾಜುಮಾಡಿ. ರೈತರಿಗೆ ತಕ್ಷಣ ಮಾಹಿತಿ ಒದಗಿಸುವುದು ಅಧಿಕಾರಿಗಳ ಕರ್ತವ್ಯ. ಹೊಲಗಳಿಗೆ ಅಧಿಕಾರಿಗಳು ಭೇಟಿ ನೀಡಬೇಕು. ಅಂಗಮಾರಿ ರೋಗ ತಡೆಗೆ ಬೇಕಾದ ಔಷಧವನ್ನ ಸರಬರಾಜು ಮಾಡಿ, ಸ್ಥಳಕ್ಕೆ ಹೋಗಿ ರೈತರಿಗೆ ಮಾಹಿತಿ ನೀಡಿ ಎಂದು ಹೇಳಿದರು.

ಪೌರಾಡಳಿತ ಇಲಾಖೆ ಸಂಬಂಧ ಅಧಿಕಾರಿಗಳ ಜೊತೆ ಮಾತನಾಡಿದ ಸಚಿವರು, ಕೊರೊನಾ ವಿರುದ್ಧ ಹೋರಾಡುವಲ್ಲಿ ಸ್ಥಳೀಯ ಸಂಸ್ಥೆ ವ್ಯಾಪ್ತಿಯ ಅಧಿಕಾರಿಗಳು ಹಾಗೂ ಸಿಬ್ಬಂದಿಯ ಕಾರ್ಯ ಶ್ಲಾಘನೀಯ. ರಾಜ್ಯದಲ್ಲಿ ಪೌರಾಡಳಿತ ಇಲಾಖೆಯ 84 ಜನರಿಗೆ ಕೊರೊನಾ ಪಾಸಿಟಿವ್ ಬಂದಿದೆ. ಅವರ್ಯಾರು ಭಯಪಡಬೇಕಾಗಿಲ್ಲ. ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ. ಕೊರೊನಾಗೆ ಯಾರೂ ಭಯಪಡಬೇಕಿಲ್ಲ. ಮುಂಜಾಗೃತೆ ಇದ್ದರೆ ಸಾಕು. ಪೌರಕಾರ್ಮಿಕರು, ಕ್ಲೀನರ್ಸ್, ಲೋಡರ್ಸ್ ಮಾತ್ರವಲ್ಲದೆ ಇಲಾಖೆಯ ಸಿಬ್ಬಂದಿಗೂ ಸರ್ಕಾರದಿಂದ ಸೂಕ್ತ ವಿಮಾ ಸೌಲಭ್ಯ ನೀಡುವ ಸಂಬಂಧ ಪ್ರಯತ್ನ ನಡೆಸುತ್ತೇವೆ ಎಂದು ಸಚಿವರು ಹೇಳಿದರು. ನಗರೋತ್ಥಾನ ಯೋಜನೆ, 14 ಮತ್ತು 15 ನೇ ಹಣಕಾಸು ಆಯೋಗ, ಅಮೃತ, ಘನತ್ಯಾಜ್ಯ ವಿಲೇವಾರಿ, ಪೌರಕಾರ್ಮಿಕರ ಗೃಹಭಾಗ್ಯ ಯೋಜನೆಗಳಲ್ಲಿ ಅನುದಾನದ ಹಣ ಉಳಿದಿದೆ. ಈ ಅನುದಾನವನ್ನು ಪೂರ್ಣ ಪ್ರಮಾಣದಲ್ಲಿ ಬಳಕೆ ಮಾಡಲು ಅಧಿಕಾರಿಗಳು ಕಾರ್ಯಪ್ರವೃತ್ತರಾಗಬೇಕು ಎಂದು ಅಧಿಕಾರಿಗಳಿಗೆ ಸಚಿವರು ಸೂಚನೆ ನೀಡಿದರು.

ವಿಕಾಸ ಸೌಧದಿಂದ ಎಲ್ಲ ಜಿಲ್ಲೆಯ ಅಧಿಕಾರಿಗಳ ಕೊತೆ ಸಚಿವರು ವಿಡಿಯೊ ಸಂವಾದ ನಡೆಸಿದರು. ಈ ವೇಳೆ ಸಚಿವರ ಜೊತೆ ಇಲಾಖೆ ಕಾರ್ಯದರ್ಶಿ ರಾಜೇಂದ್ರ ಕಠಾರಿಯಾ, ತೋಟಗಾರಿಕೆ ಇಲಾಖೆ ನಿರ್ದೇಶಕ ವೆಂಕಟೇಶ್, ರೇಷ್ಮೆ ಇಲಾಖೆ ಆಯುಕ್ತೆ ಶೈಲಜಾ, ಪೌರಾಡಳಿತ ಇಲಾಖೆ ನಿರ್ದೇಶಕಿ ಕಾವೇರಿ ಸೇರಿದಂತೆ ಎಲ್ಲ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.