ತುಮಕೂರಿನ ಗುಬ್ಬಿ ಬಳಿ ಅಪಘಾತ: ಕಾರಿನಲ್ಲೇ ನಾಲ್ಕು ಮಂದಿ ಸಜೀವ ದಹನ

ತುಮಕೂರು, ಜನವರಿ 04, 2019 (www.justkannada.in): ಬಸ್ ಮತ್ತು ಓಮ್ನಿ ಕಾರು ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಕಾರಿಗೆ ಬೆಂಕಿ ಹೊತ್ತಿಕೊಂಡ ಪರಿಣಾಮ ಮೂವರು ಸಜೀವ ದಹನಗೊಂಡ ಘಟನೆ ಜಿಲ್ಲೆಯ ಗುಬ್ಬಿ ತಾಲೂಕಿನ ದೊಡ್ಡಗುಣಿ ಬಳಿ ಶನಿವಾರ ಮುಂಜಾನೆ ಸಂಭವಿಸಿದೆ.

ಗುಬ್ಬಿ ತಾಲೂಕಿನ ಎನ್.ಹೊಸಹಳ್ಳಿ ಗ್ರಾಮದವರು ರಾಮಯ್ಯ(55), ವಸಂತಕುಮಾರ್(45) ಹಾಗೂ ನರಸಮ್ಮ(60) ಎಂಬವರು ಮೃತಪಟ್ಟವರಾಗಿದ್ದಾರೆ. ಘಟನೆಯಲ್ಲಿ ಇನ್ನೂ ಮೂವರು ಗಾಯಗೊಂಡಿದ್ದು, ಅವರನ್ನು ತುಮಕೂರು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

ಖಾಸಗಿ ಬಸ್ ಮತ್ತು ಮಾರುತಿ ಓಮ್ನಿ ಕಾರು ನಡುವೆ ಇಂದು ಮುಂಜಾನೆ ಈ ಅಪಘಾತ ಸಂಭವಿಸಿದೆ. ಅಪಘಾತದ ತೀವ್ರತೆಗೆ ಕಾರಿಗೆ ಬೆಂಕಿ ಹೊತ್ತಿಕೊಂಡಿದ್ದು, ಅದರಲ್ಲಿದ್ದವರು ಹೊರಬರಲಾಗದೆ ಸಜೀವ ದಹನವಾದರೆಂದು ತಿಳಿದುಬಂದಿದೆ.

ಕಾರಿನ ಬೆಂಕಿ ವ್ಯಾಪಿಸಿದ್ದರಿಂದ ಬಸ್ ಕೂಡಾ ಬೆಂಕಿಗಾಹುತಿಯಾಗಿದೆ. ಈ ಸಂದರ್ಭ ಅದರಲ್ಲಿದ್ದ 40 ಪ್ರಯಾಣಿಕರು ಅದೃಷ್ಟವಶಾತ್ ಪಾರಾಗಿದ್ದಾರೆ. ಬಸ್ ಬೆಂಗಳೂರಿನಿಂದ ಶಿವಮೊಗಕ್ಕೆ ತೆರಳುತ್ತಿತ್ತೆನ್ನಲಾಗಿದೆ.