Friday, October 16, 2026

Dasara Wishes

Happy Dasara
Home Cinema ಸ್ಯಾಂಡಲ್’ವುಡ್’ನಲ್ಲಿ ‘ರಿವೈಂಡ್’ ಮಾಡೋ ಹೊಸ ಪ್ರಯತ್ನ !

ಸ್ಯಾಂಡಲ್’ವುಡ್’ನಲ್ಲಿ ‘ರಿವೈಂಡ್’ ಮಾಡೋ ಹೊಸ ಪ್ರಯತ್ನ !

ಬೆಂಗಳೂರು, ಆಗಸ್ಟ್ 13, 2019 (www.justkannada.in): ಸ್ಯಾಂಡಲ್ ವುಡ್’ನಲ್ಲಿ ‘ರಿವೈಂಡ್’ ಸ್ಟೋರಿ ಹೇಳಲು ಚಿತ್ರತಂಡವೊಂದು ಸಿದ್ಧತೆ ನಡೆಸುತ್ತಿದೆ.

ಹೌದು. ಹೊಸ ಹಾಗೂ ಅನುಭವಿ ನಟರು ಹಾಗೂ ತಂತ್ರಜ್ಞರ ತಂಡವೊಂದು ಸಸ್ಪೆನ್ಸ್, ಥ್ರಿಲ್ಲರ್ ಕಥಾ ಹಂದರ ಹೊಂದಿರುವ ಕಾದಂಬರಿ ಆಧರಿತ ಚಿತ್ರ ನಿರ್ಮಾಣಕ್ಕೆ ಮುಂದಾಗಿದೆ. ಅಂದಹಾಗೆ ಚಿತ್ರದ ಹೆಸರು ‘ರಿವೈಂಡ್’ !

ಚಿತ್ರದ ಹೆಸರೇ ಹೇಳುವಂತೆ ಸಸ್ಪೆನ್ಸ್, ಥ್ರಿಲ್ಲರ್ ಕಥೆಯೊಂದನ್ನು ರಿವೈಂಡ್ ಮಾಡಲಿದೆ. ಈಗಾಗಲೇ ಹಲವು ತಮಿಳು ಚಿತ್ರಗಳನ್ನು ನಿರ್ಮಿಸಿ ಅನುಭವ ಹೊಂದಿರುವ ವಿನೋದ್ ಅವರು ಮೊದಲ ಬಾರಿಗೆ ಕನ್ನಡ ಚಿತ್ರ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಚಿತ್ರದ ನಿರ್ದೇಶನ ಜವಾಬ್ದಾರಿ ಹೊತ್ತಿರುವುದು ತೇಜ್. ಜತೆಗೆ ನಟನೆಯ ಹೊಣೆಯೂ ಇವರದ್ದೇ…

ಕಿರುತೆರೆ ಜತೆಗೆ ಸಾಕಷ್ಟು ಚಿತ್ರಗಳಲ್ಲಿ ನಟಿಸಿರುವ ಚಂದನಾ ರಾಘವೇಂದ್ರ ‘ರಿವೈಂಡ್’ ಟೀಂನಲ್ಲಿ ನಾಯಕಿಯಾಗಿದ್ದಾರೆ. ಸುಂದರ್ ರಾಜ್, ಮಂಡ್ಯ ರವಿ, ಕೆಜಿಎಫ್ ನಲ್ಲಿ ನಟಿಸಿರುವ ಸಂಪತ್ ಕುಮಾರ್ ಸೇರಿದಂತೆ ಹಲವು ಹಿರಿಯ, ಕಿರಿಯ ನಟರು ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ವಿಶೇಷ ಎಂದರೆ ಚಿತ್ರದ ಖಳ ನಟನ ಪಾತ್ರಕ್ಕೆ ಖ್ಯಾತ ಚೀನಿ ನಟರನ್ನು ಕರೆಸಲು ಚಿತ್ರ ತಂಡ ಮಾತುಕತೆ ನಡೆಸಿದೆ.

ಸೆಪ್ಟೆಂಬರ್ ಗೆ ಮೊದಲ ಹಾಡು ಬಿಡುಗಡೆ: ಈಗಾಗಲೇ ಲಹರಿ ಸಂಸ್ಥೆ ಚಿತ್ರದ ಆಡೀಯೋ ರೈಟ್ಸ್ ಪಡೆದುಕೊಂಡಿದೆ. ಅನನ್ಯ ಭಟ್ ಅವರು ಹಾಡಿರುವ ಮೊದಲ ಹಾಡನ್ನು ಮುಂದಿನ ತಿಂಗಳು ಬಿಡುಗಡೆ ಮಾಡಲು ಚಿತ್ರ ತಂಡ ಸಿದ್ಧತೆ ನಡೆಸಿದೆ. ಈಗಾಗಲೇ ಮೂರು ಹಂತದ ಶೂಟಿಂಗ್ ಮುಗಿದಿದ್ದು, ಮುಂದಿನ ವರ್ಷ ಆರಂಭದಲ್ಲೇ ಚಿತ್ರವನ್ನು ಪ್ರೇಕ್ಷಕರು ‘ರಿವೈಂಡ್’ ಮಾಡಬಹುದಾಗಿದೆ. ಚಿತ್ರಕ್ಕೆ ಸಬೀಸ್ ಸೋಲೊಮನ್ ಸಂಗೀತ ನೀಡಿದ್ದು, ನಾಗೇಂದ್ರ ಪ್ರಸಾದ್ ಸಾಹಿತ್ಯವಿದೆ.