ಮಾ.6 ಕ್ಕೆ ‘ ಕಾಸ್ಮೊಲಜಿ ಶಿಕ್ಷಣ ಮತ್ತು ಸಂಶೋಧನಾ ತರಬೇತಿ ಕೇಂದ್ರ’ ಕ್ಕೆ ಕೇಂದ್ರ ಸಚಿವೆ ನಿರ್ಮಲ ಸೀತಾರಾಮನ್ ಶಂಕುಸ್ಥಾಪನೆ.

mysore-university-nirmala-seetharaman

 

ಮೈಸೂರು, ಮಾ.04, 2022 : (www.justkannada.in news ) ಮೈಸೂರು ವಿಶ್ವವಿದ್ಯಾನಿಲಯ ಮತ್ತು ಭಾರತೀಯ ಖಗೋಳ ಭೌತಶಾಸ ಸಂಸ್ಥೆ ಸಹಯೋಗದಲ್ಲಿ 80 ಕೋಟಿ ರೂ. ವೆಚ್ಚದಲ್ಲಿ ಮೈಸೂರಿನಲ್ಲಿ ನಿರ್ಮಿಸಲಾಗುತ್ತಿರುವ ಕಾಸ್ಮೊಲಜಿ ಶಿಕ್ಷಣ ಮತ್ತು ಸಂಶೋಧನಾ ತರಬೇತಿ ಕೇಂದ್ರದ ಶಂಕುಸ್ಥಾಪನೆಯನ್ನು ಮಾ. 6 ರಂದು ಬೆ. 10.30 ಕ್ಕೆ ಕೇಂದ್ರ ಹಣಕಾಸು ಮಂತ್ರಿ ನಿರ್ಮಲ ಸೀತಾರಾಮನ್ ನೆರವೇರಿಸಲಿದ್ದಾರೆ.

ಮೈಸೂರಿನ ಚಾಮುಂಡಿಬೆಟ್ಟದ ತಪ್ಪಲಿನಲ್ಲಿರುವ ವಿಶ್ವವಿದ್ಯಾನಿಲಯಕ್ಕೆ ಸೇರಿದ ಜಯಚಾಮರಾಜ ಒಡೆಯರ್ ಉನ್ನತ ಕಲಿಕಾ ಕೇಂದ್ರಕ್ಕೆ ಸೇರಿದ 3 ಎಕರೆ ಜಾಗದಲ್ಲಿ ತಲೆ ಎತ್ತುತ್ತಿರುವ ಈ ವಿಜ್ಞಾನ ಕೇಂದ್ರದ ಶಂಕು ಸ್ಥಾಪನೆ ಕಾರ್ಯಕ್ರಮದಲ್ಲಿ ಉನ್ನತ ಶಿಕ್ಷಣ ಸಚಿವ ಡಾ.ಸಿಎನ್. ಅಶ್ವತ್ಥ ನಾರಾಯಣ, ಸಚಿವ ಎಸ್.ಟಿ. ಸೋಮಶೇಖರ್, ಸಂಸದ ಪ್ರತಾಪ್‌ಸಿಂಹ ಶಾಸಕರಾರ ಎಸ್‌ಎ. ರಾಮದಾಸ್, ಎಲ್. ನಾಗೇಂದ್ರ, ಕೇಂದ್ರ ಸರಕಾರದ ಪ್ರಧಾನ ವೈಜ್ಞಾನಿಕ ಸಲಹೆಗಾರ ಪ್ರೊ .ಕೆ. ವಿಜಯ ರಾಘವನ್, ಅಟಾಮಿಕ್ ಎನರ್ಜಿ ವಿಭಾಗದ ಕಾರ್ಯದರ್ಶಿ ಕೆ.ಎನ್. ವ್ಯಾಸ, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಕಾರ್ಯದರ್ಶಿ ಡಾ.ಎಸ್. ಚಂದ್ರಶೇಖರ್ ಮುಖ್ಯ ಅತಿಥಿಯಾಗಿ ಭಾಗವಹಿಸುವರು ಎಂದು ಮೈಸೂರು ವಿವಿ ಕುಲಪತಿ ಪ್ರೊ. ಜಿ. ಹೇಮಂತ ಕುಮಾರ್ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ವಿಶ್ವವಿದ್ಯಾನಿಲಯವು ಈಗಾಗಲೇ ಭಾರತೀಯ ಖಗೋಳ ಭೌತಶಾಸ ಸಂಸ್ಥೆಯೊಂದಿಗೆ ಕಾಸ್ಮೊಲಜಿ ಶಿಕ್ಷಣ ಮತ್ತು ಸಂಶೋಧನ ತರಬೇತಿ ಕೇಂದ್ರ (ಕಾಸ್ಮಾಸ್) ನಿರ್ಮಾಣದ ಕುರಿತು ಒಡಂಬಡಿಕೆಯನ್ನು ಮಾಡಿಕೊಳ್ಳಲಾಗಿತ್ತು. ಅಂತೆಯೆ ವಿಶ್ವವಿದ್ಯಾನಿಲಯದ ಆವರಣದಲ್ಲಿ ಸ್ಥಾಪಿತವಾಗುವ ಈ ಕೇಂದ್ರಕ್ಕೆ ಸಂಸತ್ ಸದಸ್ಯರ ನಿಧಿಯಿಂದ ನಿರ್ಮಲ ಸೀತಾರಾಮ್‌ರವರು ಧನ ಸಹಾಯ ನೀಡಿದ್ದಾರೆ. ವಿಜ್ಞಾನ ಮತ್ತು ತಂತ್ರಜ್ಞಾನ, ಅಟಾಮಿಕ್ ಎನರ್ಜಿ ವಿಭಾಗ ಮತ್ತು ಬಾಹ್ಯಾಕಾಶ ಸಂಸ್ಥೆ ಹಾಗೂ ಇನ್ನಿತರ ಸಂಸ್ಥೆಗಳು ಹೆಚ್ಚುವರಿ ಸಹಾಯ ನೀಡಿವೆ. ಇದರಿಂದ ಪ್ಲಾನಿಟೋರಿಯಂ ಮತ್ತು ಶಿಕ್ಷಣದ ಹಬ್, ವಿಜ್ಞಾನ ಶಿಕ್ಷಣ, ಔಟರೀಚ್ ಮತ್ತು ವಿಜ್ಞಾನದ ಸಹಭಾಗಿತ್ವ ಚಟುವಟಿಕೆಗಳನ್ನು ನಡೆಸಲು ವಿಶ್ವವಿದ್ಯಾನಿಲಯ ಹಾಗೂ ವಿಶ್ವವಿದ್ಯಾನಿಲಯದ ಸಂಯೋಜಿತ ಕಾಲೇಜುಗಳ ವಿದ್ಯಾರ್ಥಿಗಳಿಗೆ ಮತ್ತು ಶಿಕ್ಷಕರಿಗೆ ಅನುಕೂಲವಾಗಲಿದೆ ಎಂದು ಮಾಹಿತಿ ನೀಡಿದರು.

ಉದಯೋನ್ಮುಖ, ಶಾಲಾ ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ, ಸಾರ್ವಜನಿಕರಿಗೆ ವಿಜ್ಞಾನದ ಶಿಕ್ಷಣದ ಬಗ್ಗೆ ಅರಿವು ಮೂಡಿಸಲು, ಹಾಗೂ ಪ್ಲಾನಿಟೋರಿಯಂನ ನಿರ್ಮಾಣದಿಂದ ಆಕಾಶಕಾಯಗಳ ಬಗೆಗೆ ಹೆಚ್ಚಿನ ಸಂಶೋಧನೆಯನ್ನು ನಡೆಸಲು ಈ ಕೇಂದ್ರದಿಂದ ಹೆಚ್ಚಿನ ಅನುಕೂಲವಾಗಲಿದೆ. ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಪ್ರಪ್ರಥಮ ಬಾರಿಗೆ ನಿರ್ಮಾಣವಾಗುತ್ತಿರುವ ಅತಿ ದೊಡ್ಡ ವಿಜ್ಞಾನ ಕೇಂದ್ರವಾಗಿದೆ ಎಂದು ತಿಳಿಸಿದರು.

ಮೈಸೂರು ವಿಶ್ವವಿದ್ಯಾಲಯದ ಕುಲಸಚಿವ ಪ್ರೊ .ಆರ್.ಶಿವಪ್ಪ, ವಿವಿ ವಿಶೇಷಾಧಿಕಾರಿ ಡಾ.ಚೇತನ್ ಇದ್ದರು. ಎಐಐ ಪ್ರೊ .ಅನ್ನಪೂರ್ಣ ಆನ್‌ಲೈನ್ ಮೂಲಕ ಭಾಗವಹಿಸಿದ್ದರು.

 

key words : mysore-university-nirmala-seetharaman