ಹಾಸನ, ನವೆಂಬರ್,9,2026 (www.justkannada.in): ಹಾಸನಾಂಬೆ ಕ್ಷೇತ್ರ ಅಭಿವೃದ್ಧಿಗೆ 20 ಕೋಟಿ ಅನುದಾನ ನೀಡುವ ಚಿಂತನೆ ಇದೆ. ಹಾಸನದ ಏಳು ಕ್ಷೇತ್ರಗಳಲ್ಲೂ ಕಾಂಗ್ರೆಸ್‌ಗೆ ಶಕ್ತಿ ಕೊಡಿ ಎಂದು ಸಿಎಂ ಡಿಕೆ ಶಿವಕುಮಾರ್ ಮನವಿ ಮಾಡಿದರು.
ಹಾಸನದ ನಗರಸಭೆ ಪಾರ್ಕಿಂಗ್ ಆವರಣದಲ್ಲಿ ಫಲಪುಷ್ಪ ಪ್ರದರ್ಶನ ಹಾಗೂ ಹಾಸನಾಂಬ ಕ್ರೀಡೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದರು. ಇದಕ್ಕೂ ಮೊದಲು ಹಾಸನಾಂಭ ದೇವಾಲಯದ ಬಳಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು.
“ಕೆಲವರಿಗೆ ಸುಳ್ಳೇ ಮನೆದೇವರಾಗಿದೆ. ಅವರು ಹೇಳುವ ಸುಳ್ಳುಗಳಿಗೆ ತಾಯಿ ಹಾಸನಾಂಬೆ ತಕ್ಕ ಉತ್ತರ ನೀಡುತ್ತಾಳೆ. ಯಾರಿಗೆ ಏನು ಶಕ್ತಿ ನೀಡಬೇಕು, ಯಾರಿಗೆ ಏನು ಶಿಕ್ಷೆ ನೀಡಬೇಕು ಎಂಬುದನ್ನು ಆ ತಾಯಿ ನೋಡಿಕೊಳ್ಳುತ್ತಾಳೆ. ಯಾರೂ ಅನಗತ್ಯವಾಗಿ ಚಿಂತೆಗೀಡಾಗದೆ ನಮ್ಮ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಿಕೊಂಡು ಹೋಗಬೇಕು” ಎಂದು ಸಿಎಂ ಡಿ ಕೆ ಶಿವಕುಮಾರ್ ಅವರು ಹೇಳಿದರು.
“ಹಾಸನಾಂಬೆ ಸನ್ನಿಧಿಯಲ್ಲಿ ನಿಂತು ಜಿಲ್ಲೆಯ ಜನರಲ್ಲಿ ಮನವಿ ಮಾಡುತ್ತಿದ್ದೇನೆ. ಹಾಸನದ ಏಳು ಕ್ಷೇತ್ರಗಳಲ್ಲೂ ಕಾಂಗ್ರೆಸ್‌ಗೆ ಬೆಂಬಲ ನೀಡಿ, ನಮಗೆ ಇನ್ನಷ್ಟು ಶಕ್ತಿ ತುಂಬಿ. ಇಡೀ ದೇಶವೇ ಕರ್ನಾಟಕದ ಆಡಳಿತವನ್ನು ಮೆಚ್ಚುವ ರೀತಿಯಲ್ಲಿ ಕೆಲಸ ಮಾಡುತ್ತೇನೆ. ಪ್ರಜಾಸೇವೆಯ ಮೂಲಕ ಜನರ ಸೇವೆ ಮಾಡಲು ನಾವು ಬದ್ಧರಾಗಿದ್ದೇವೆ” ಎಂದರು.
“ರಾಜ್ಯದ ಜನರು ನಮ್ಮ ಸರಕಾರಕ್ಕೆ 136 ಸ್ಥಾನಗಳ ಬಲ ನೀಡಿದ್ದಾರೆ. ಹಾಸನದಲ್ಲಿ ಮಾತ್ರ ಒಂದು ಸ್ಥಾನ ಗೆದ್ದಿದ್ದೇವೆ. ಮುಂದಿನ ದಿನಗಳಲ್ಲಿ ಜಿಲ್ಲೆಯ ಜನರು ಇನ್ನಷ್ಟು ಶಕ್ತಿ ತುಂಬಬೇಕು. ಹಾಸನದ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲೂ ಪಕ್ಷಕ್ಕೆ ಬೆಂಬಲ ನೀಡಬೇಕು” ಎಂದರು.
“ಅಧಿಕಾರ ಸಿಕ್ಕಿರುವುದು ಜನರ ಸೇವೆ ಮಾಡಲು. ಜನರ ಬದುಕಿನಲ್ಲಿ ನೆಮ್ಮದಿ ಮೂಡಿಸುವುದೇ ನಮ್ಮ ಸರಕಾರದ ಗುರಿ. ಐದು ಗ್ಯಾರಂಟಿ ಯೋಜನೆಗಳನ್ನು ಯಾವುದೇ ಕಾರಣಕ್ಕೂ ನಿಲ್ಲಿಸದೆ ಮುಂದುವರಿಸಿಕೊಂಡು ಹೋಗುತ್ತಿದ್ದೇವೆ. ಜನರ ಆಶೀರ್ವಾದದಿಂದ ಇನ್ನಷ್ಟು ಉತ್ತಮ ಆಡಳಿತ ನೀಡಲು ಬದ್ಧರಾಗಿದ್ದೇವೆ ಎಂದರು.
ನಾನು, ನನ್ನದು ಎನ್ನುವುದು ಅಧರ್ಮ
“ಧರ್ಮ ಎಂದರೆ ಕೇವಲ ಪೂಜೆ, ಭಕ್ತಿಯ ಪ್ರದರ್ಶನವಲ್ಲ. ಅದು ಮನುಷ್ಯನ ಆತ್ಮವಿಶ್ವಾಸ ಹೆಚ್ಚಿಸುವ ಮಾರ್ಗ. ಭಕ್ತರು ದೇವಾಲಯದಲ್ಲಿ ದೇವರ ದರ್ಶನ ಪಡೆದು ತಮ್ಮ ಇಷ್ಟಾರ್ಥಗಳನ್ನು ಪ್ರಾರ್ಥಿಸುತ್ತಾರೆ. ಆದರೆ ಜನರ ಸಂಕಷ್ಟಕ್ಕೆ ನೆರವಾಗುವುದೇ ನಿಜವಾದ ಶ್ರೇಷ್ಠ ಧರ್ಮ. ನಿಮಗಾಗಿ ಬದುಕುವುದು ಜೀವನವಾದರೆ, ಜನರಿಗಾಗಿ ಬದುಕುವುದು ಶ್ರೇಷ್ಠ ಧರ್ಮ. ‘ನಾನು, ನನ್ನದು’ ಎನ್ನುವುದು ಅಧರ್ಮ; ‘ನಾವು, ನಮ್ಮದು’ ಎನ್ನುವುದು ಧರ್ಮ. ಎಲ್ಲರನ್ನೂ ಸಮಾನವಾಗಿ ಕಾಣುವುದು, ನ್ಯಾಯ ಒದಗಿಸುವುದು ನಮ್ಮ ಕರ್ತವ್ಯ” ಎಂದು ಹೇಳಿದರು.
“ನಮ್ಮ ಸರಕಾರ ಐದು ಗ್ಯಾರಂಟಿ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುತ್ತಿದೆ. ಮಹಿಳೆಯರನ್ನು ಕುಟುಂಬದ ಕಣ್ಣು ಎಂದು ಪರಿಗಣಿಸಿ ಗೃಹಲಕ್ಷ್ಮಿ ಯೋಜನೆಯಡಿ 1.20 ಕೋಟಿ ಕುಟುಂಬಗಳ ಯಜಮಾನಿಯರಿಗೆ ಆರ್ಥಿಕ ನೆರವು ನೀಡುತ್ತಿದ್ದೇವೆ. ಎರಡು ದಿನಗಳ ಹಿಂದೆ 7 ಸಾವಿರ ಕೋಟಿ ರೂಪಾಯನ್ನು ಫಲಾನುಭವಿಗಳ ಖಾತೆಗೆ ಜಮೆ ಮಾಡಲಾಗಿದೆ” ಎಂದು ತಿಳಿಸಿದರು.
“ಶಕ್ತಿ ಯೋಜನೆಯಡಿ ಮಹಿಳೆಯರು ಉಚಿತವಾಗಿ ಬಸ್‌ಗಳಲ್ಲಿ ಪ್ರಯಾಣಿಸುತ್ತಿದ್ದಾರೆ. ವಿದ್ಯಾರ್ಥಿಗಳು ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ನೀಡಲಾಗಿದೆ. ಮಹಿಳೆಯರು ತವರುಮನೆ, ಬಂಧುಗಳ ಮನೆ ಹಾಗೂ ದೇವಸ್ಥಾನಗಳಿಗೆ ಪ್ರಯಾಣಿಸುತ್ತಿದ್ದಾರೆ. ಗೃಹಜ್ಯೋತಿ ಯೋಜನೆಯಡಿ 200 ಯೂನಿಟ್‌ವರೆಗೆ ಉಚಿತ ವಿದ್ಯುತ್ ನೀಡಲಾಗುತ್ತಿದೆ. ಅನ್ನಭಾಗ್ಯ ಯೋಜನೆಯಡಿ 10 ಕೆ.ಜಿ ಅಕ್ಕಿ ನೀಡುತ್ತಿದ್ದೇವೆ. ಕಷ್ಟದ ಸಂದರ್ಭದಲ್ಲೂ ಜನರಿಗೆ ನೆರವಾಗುವ ಕೆಲಸ ಮಾಡುತ್ತಿದ್ದೇವೆ” ಎಂದರು.
ರಾಜಕೀಯದಲ್ಲಿ ಪ್ರತಿದಿನ ಕುಸ್ತಿ ಆಡುತ್ತಿದ್ದೇನೆ
“ಕ್ರೀಡೋತ್ಸವದಲ್ಲಿ ಕುಸ್ತಿ, ವಾಲಿಬಾಲ್ ಸೇರಿದಂತೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ನೇಪಾಳದ ಕುಸ್ತಿಪಟುಗಳು ಹಾಗೂ ತಮಿಳುನಾಡು, ಕೇರಳದ ವಾಲಿಬಾಲ್ ತಂಡಗಳು ಭಾಗವಹಿಸಿರುವುದನ್ನು ಗಮನಿಸಿದ್ದೇನೆ. ಚಿಕ್ಕ ವಯಸ್ಸಿನಲ್ಲಿ ನಾನೂ ವಾಲಿಬಾಲ್ ಆಡುತ್ತಿದ್ದೆ. ನಾನು ಕುಸ್ತಿ ಆಡಿಲ್ಲ. ಆದರೆ ಈಗ ರಾಜಕೀಯದಲ್ಲಿ ಪ್ರತಿದಿನ ಕುಸ್ತಿ ಆಡುತ್ತಿದ್ದೇವೆ” ಎಂದು ಹಾಸ್ಯ ಚಟಾಕಿ ಹಾರಿಸಿದರು.
ಹಾಸನಾಂಬೆ ಕ್ಷೇತ್ರ ಅಭಿವೃದ್ಧಿಗೆ 20 ಕೋಟಿ ಅನುದಾನ
“ಹಾಸನಾಂಬೆ ದೇವಸ್ಥಾನಕ್ಕೆ ಪ್ರತಿವರ್ಷ ಲಕ್ಷಾಂತರ ಭಕ್ತರು ಆಗಮಿಸುತ್ತಿದ್ದು, ಅವರ ಅನುಕೂಲಕ್ಕಾಗಿ ಮೂಲಸೌಕರ್ಯ ಕಲ್ಪಿಸುವ ಅಗತ್ಯವಿದೆ. ದೇವಸ್ಥಾನದ ಸುತ್ತಮುತ್ತ ಜಾಗದ ಕೊರತೆಯಿದ್ದು, ಭಕ್ತರ ಪ್ರವೇಶಕ್ಕೆ ಅನುಕೂಲವಾಗುವಂತೆ ರಾಜಗೋಪುರ ನಿರ್ಮಾಣ ಮಾಡಬೇಕೆಂಬ ಬೇಡಿಕೆಯೂ ಇದೆ. ಈ ಹಿನ್ನೆಲೆಯಲ್ಲಿ ಸಮಗ್ರ ಅಭಿವೃದ್ಧಿಗೆ 20 ಕೋಟಿ ರೂಪಾಯಿ ಅನುದಾನ ನೀಡುವ ಬಗ್ಗೆ ಚಿಂತನೆ ನಡೆಸಲಾಗಿದೆ” ಎಂದು ಸಿಎಂ ಡಿಕೆ ಶಿವಕುಮಾರ್ ತಿಳಿಸಿದರು.
“ದೇವಸ್ಥಾನಕ್ಕೆ ಹಿಂದೆ ಸುಮಾರು ಏಳು ಎಕರೆ ಜಾಗವಿತ್ತು. ಈಗ ಸುತ್ತಮುತ್ತ ಕಟ್ಟಡಗಳು ನಿರ್ಮಾಣವಾಗಿವೆ. ಭಕ್ತರಿಗೆ ಅನುಕೂಲ ಕಲ್ಪಿಸಲು ಅಗತ್ಯ ಜಾಗದ ಲಭ್ಯತೆ ಪರಿಶೀಲಿಸಬೇಕಿದೆ. ಕಟ್ಟಡ ಮಾಲೀಕರನ್ನು ಕರೆದು ಮಾತನಾಡಿ, ಪರ್ಯಾಯ ವ್ಯವಸ್ಥೆ ಕಲ್ಪಿಸುವ ಬಗ್ಗೆಯೂ ಚರ್ಚಿಸಲಾಗುವುದು. 2013ರ ಭೂಸ್ವಾಧೀನ ಕಾಯ್ದೆಯಡಿ ಪರಿಹಾರ ನೀಡುವ ವಿಚಾರವನ್ನೂ ಪರಿಶೀಲಿಸಬೇಕಿದೆ. ಯಾರಿಗೂ ತೊಂದರೆ ಕೊಡದೆ ಭಕ್ತರಿಗೆ ಅನುಕೂಲ ಮಾಡಿಕೊಡುವುದು ನಮ್ಮ ಉದ್ದೇಶ” ಎಂದರು.
“ಹಾಸನಾಂಬೆ ವಿಶೇಷ ದರ್ಶನ ಹಾಗೂ ಲಡ್ಡು ಮಾರಾಟದಿಂದ ಸುಮಾರು 25 ಕೋಟಿ ರೂಪಾಯಿ ಆದಾಯ ಬಂದಿರುವ ಕುರಿತು ಕೇಳಿದ ಪ್ರಶ್ನೆಗೆ, “ಎಲ್ಲ ಹಣವನ್ನೂ ಇಲ್ಲಿನ ಅಭಿವೃದ್ಧಿಗೆ ಹಾಕೋಣ. ಕಳೆದ ವರ್ಷ ಉಪಮುಖ್ಯಮಂತ್ರಿಯಾಗಿ ಬಂದಿದ್ದೆ. ಈಗ ಮುಖ್ಯಮಂತ್ರಿ ಎಂಬುದಕ್ಕಿಂತ ಮುಖ್ಯವಾಗಿ ಒಬ್ಬ ಭಕ್ತನಾಗಿ ಬಂದಿದ್ದೇನೆ. ಸುಮಾರು ಎಂಟು ವರ್ಷಗಳಿಂದ ಕುಟುಂಬ ಸಮೇತ ಹಾಸನಾಂಬೆ ದರ್ಶನಕ್ಕೆ ಬರುತ್ತಿದ್ದೇನೆ. ಈ ದೇವಿಯಲ್ಲಿ ವಿಶೇಷವಾದ ಆಕರ್ಷಣೆಯ ಶಕ್ತಿ ಇದೆ,” ಎಂದರು.
ಹಾಸನ ಜಿಲ್ಲಾಧಿಕಾರಿಗಳು ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ.
“ಜಿಲ್ಲಾಧಿಕಾರಿಯವರು ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ಆದರೆ ಎಲ್ಲರ ಬೇಡಿಕೆಗಳನ್ನು ಈಡೇರಿಸಲು ಸಾಧ್ಯವಾಗದಿದ್ದಾಗ ಅವರ ಮೇಲೆ ಒತ್ತಡ ಬರುತ್ತದೆ. ಆಡಳಿತದಲ್ಲಿ ಏನು ನಡೆಯುತ್ತಿದೆ ಎಂಬುದನ್ನು ನಾನು ಗಮನಿಸುತ್ತಿದ್ದೇನೆ. ಜನರೂ ಗಮನಿಸುತ್ತಿದ್ದಾರೆ. ಯಾರ ಬಗ್ಗೆಯೂ ಚಿಂತಿಸದೆ ನ್ಯಾಯ, ನೀತಿ ಮತ್ತು ಧರ್ಮದ ಹಾದಿಯಲ್ಲಿ ಆಡಳಿತ ನಡೆಸುತ್ತೇವೆ” ಎಂದರು.
“ಸಂಸದ ಶ್ರೇಯಸ್ ಪಟೇಲ್ ಅವರು ಸಂಸತ್‌ನಲ್ಲಿ ರಾಜ್ಯದ ಜನರ ಪರವಾಗಿ ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ಜಿಲ್ಲೆಯಲ್ಲೂ ಜನರಿಗಾಗಿ ಶ್ರಮಿಸುತ್ತಿದ್ದಾರೆ. ಅವರೊಂದಿಗೆ ಸಚಿವ ಶಿವಲಿಂಗೇಗೌಡರು ಹಾಗೂ ಎಲ್ಲಾ ಕಾಂಗ್ರೆಸ್ ಮುಖಂಡರಿಗೆ ಜನರ ಆಶೀರ್ವಾದವಿರಲಿ” ಎಂದು ಪ್ರಾರ್ಥಿಸಿದರು.
ಮೇಕೆದಾಟು ಯೋಜನೆಗೆ ತಮಿಳುನಾಡಿನ ಅನುಮತಿ ಬೇಕಿಲ್ಲ, ಅವರ ಸಹಕಾರವಷ್ಟೇ ಸಾಕು
ಮೇಕೆದಾಟು ಯೋಜನೆಗೆ ತಮಿಳುನಾಡು ಮುಖ್ಯಮಂತ್ರಿ ವಿರೋಧ ವ್ಯಕ್ತಪಡಿಸಿ ಪ್ರಧಾನಮಂತ್ರಿಗೆ ಪತ್ರ ಬರೆದಿರುವ ಬಗ್ಗೆ ಕೇಳಿದಾಗ, “ಮೇಕೆದಾಟು ಯೋಜನೆ ಕರ್ನಾಟಕಕ್ಕಿಂತ ತಮಿಳುನಾಡಿಗೆ ಹೆಚ್ಚು ಅನುಕೂಲವಾಗಲಿದೆ ಎಂಬುದನ್ನು ಅಲ್ಲಿನವರಿಗೆ ಇನ್ನೂ ಅರ್ಥವಾಗಿಲ್ಲ. ಯೋಜನೆಗೆ ತಮಿಳುನಾಡಿನ ಅನುಮತಿ ಬೇಕಿಲ್ಲ, ಅವರ ಸಹಕಾರವಷ್ಟೇ ಬೇಕು” ಎಂದರು.
“ಅವರವರ ರಾಜ್ಯದ ಹಿತದೃಷ್ಟಿಯಿಂದ ಅವರು ಮಾತನಾಡುತ್ತಾರೆ. ಆದರೆ ಮೇಕೆದಾಟು ಯೋಜನೆಯಿಂದ ತಮಿಳುನಾಡಿಗೆ ಹೆಚ್ಚು ಅನುಕೂಲವಾಗಲಿದೆ. ಇದನ್ನು ಅವರು ಅರ್ಥಮಾಡಿಕೊಳ್ಳಬೇಕು. ತಮಿಳುನಾಡಿನವರು ಒಮ್ಮೆ ಮೇಕೆದಾಟು ಸ್ಥಳಕ್ಕೆ ಬಂದು ವಾಸ್ತವ ಸ್ಥಿತಿಯನ್ನು ಪರಿಶೀಲಿಸಲಿ. ನನ್ನ ಕ್ಷೇತ್ರ ಹಾಗೂ ಹನೂರು ಕ್ಷೇತ್ರದ ಗಡಿಯಲ್ಲೇ ಈ ಯೋಜನೆಯ ಸ್ಥಳವಿದೆ. ಬೆಂಗಳೂರಿನ ಕುಡಿಯುವ ನೀರಿಗಾಗಿ ನೀರನ್ನು ಬಳಸಿಕೊಳ್ಳಲಾಗುವುದು. ಬೇರೆ ಯಾವುದೇ ಉದ್ದೇಶಕ್ಕೆ ನೀರು ಬಳಸಲು ಸಾಧ್ಯವಿಲ್ಲ ಎಂಬುದನ್ನು ಅವರು ತಿಳಿದುಕೊಳ್ಳಬೇಕು” ಎಂದು ಹೇಳಿದರು.
ಸುಪ್ರೀಂ ಕೋರ್ಟ್‌ನಲ್ಲೂ ಕರ್ನಾಟಕದ ಹಕ್ಕಿಗೆ ಮಾನ್ಯತೆ
“ಮೇಕೆದಾಟು ಯೋಜನೆಗೆ ಸಂಬಂಧಿಸಿದಂತೆ ಈಗಾಗಲೇ ಸುಪ್ರೀಂ ಕೋರ್ಟ್‌ನಲ್ಲಿ ಕರ್ನಾಟಕದ ಹಕ್ಕನ್ನು ಎತ್ತಿಹಿಡಿಯಲಾಗಿದೆ. ತಾವು ಜಲಸಂಪನ್ಮೂಲ ಸಚಿವರಾಗಿದ್ದ ಸಂದರ್ಭದಲ್ಲಿ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿ ವಿಚಾರಣೆ ನಡೆಸುವಂತೆ ಮನವಿ ಮಾಡಿದ್ದೆವು. ಮೂವರು ನ್ಯಾಯಮೂರ್ತಿಗಳ ಪೀಠ ಆದೇಶ ನೀಡಿದೆ. ತಮಿಳುನಾಡು ಸಲ್ಲಿಸಿದ್ದ ಮರುಪರಿಶೀಲನಾ ಅರ್ಜಿಯನ್ನೂ ತಿರಸ್ಕರಿಸಲಾಗಿದೆ” ಎಂದು ತಿಳಿಸಿದರು.
“ತಮಿಳುನಾಡಿಗೆ 177 ಟಿಎಂಸಿ ನೀರು ನೀಡಬೇಕೆಂಬ ನ್ಯಾಯಾಲಯದ ಆದೇಶವನ್ನು ನಾವು ಪಾಲಿಸುತ್ತೇವೆ. ತಮಿಳುನಾಡಿಗೆ ನೀಡಬೇಕಾದ ನೀರಿನ ಹಕ್ಕನ್ನು ನಾವು ನಿರಾಕರಿಸುತ್ತಿಲ್ಲ” ಎಂದರು.
“ಯೋಜನೆಯಿಂದ ಸುಮಾರು 400 ಮೆಗಾವಾಟ್ ವಿದ್ಯುತ್ ಉತ್ಪಾದಿಸಲಾಗುವುದು. ಸುಮಾರು 5,400 ಹೆಕ್ಟೇರ್ ಅರಣ್ಯ ಪ್ರದೇಶಕ್ಕೆ ಪರ್ಯಾಯ ಭೂಮಿ ಒದಗಿಸುವ ಸಿದ್ಧತೆಯನ್ನೂ ಮಾಡಿಕೊಳ್ಳಲಾಗಿದೆ. ಅಗತ್ಯ ಅರ್ಜಿಗಳನ್ನು ಸಲ್ಲಿಸಿ, ಪ್ರಧಾನಮಂತ್ರಿ ಅವರನ್ನು ಭೇಟಿ ಮಾಡಿ ಯೋಜನೆಗೆ ಅನುಮತಿ ಪಡೆಯಲು ಪ್ರಯತ್ನಿಸಲಾಗುವುದು. ಕೇಂದ್ರದ ಜಲಶಕ್ತಿ ಸಚಿವರೊಂದಿಗೆ ಈಗಾಗಲೇ ಹಲವು ಬಾರಿ ಚರ್ಚಿಸಲಾಗಿದೆ. ರಾಜ್ಯದ ಕೇಂದ್ರ ಸಚಿವರು, ಸಂಸದರು ಕೂಡ ಸಹಕಾರ ನೀಡುವುದಾಗಿ ಹೇಳಿದ್ದಾರೆ” ಎಂದು ತಿಳಿಸಿದರು.
Rs 20 crore, grant, development, Hasanamba shrine, CM D.K. Shivakumar






