- ಹಂತ-ಹಂತವಾಗಿ ಸಂಚಾರ ಮಾರ್ಗ ಬದಲಾವಣೆ ಜಾರಿಗೆ ತರುವ ಮುನ್ನ ಪರ್ಯಾಯ ರಸ್ತೆಗಳನ್ನು ಸಜ್ಜುಗೊಳಿಸಲಿರುವ ಬಿ.ಡಿ.ಎ, ಜಿ.ಬಿ.ಎ ಹಾಗೂ ಸಂಚಾರ ಪೊಲೀಸ್ ಇಲಾಖೆ
- ಸಂಚಾರ ವ್ಯವಸ್ಥೆಯನ್ನು ಪರಿಶೀಲಿಸಿದ ಅಧ್ಯಕ್ಷ ಎನ್. ಎ. ಹ್ಯಾರಿಸ್ ಹಾಗೂ ಆಯುಕ್ತ ಮೇಜರ್ ಪಿ. ಮಣಿವಣ್ಣನ್; ಸಾರ್ವಜನಿಕರಿಗೆ ತೊಂದರೆಯಾಗದಂತೆ ತಕ್ಷಣದ ಕ್ರಮ ಕೈಗೊಳ್ಳಲು ನಿರ್ದೇಶನ
ಬೆಂಗಳೂರು, ನವೆಂಬರ್ 7, 2026: ಕೆಲವು ಮಾಧ್ಯಮಗಳಲ್ಲಿ ವರದಿಯಾಗಿರುವಂತೆ ಹೆಬ್ಬಾಳ ಮೇಲ್ಸೇತುವೆ ಹಾಗೂ ಬಳ್ಳಾರಿ ರಸ್ತೆ ಮಾರ್ಗವನ್ನು 18 ತಿಂಗಳುಗಳ ಕಾಲ ಸಂಪೂರ್ಣವಾಗಿ ಮುಚ್ಚುವುದಿಲ್ಲವೆಂದು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ಸ್ಪಷ್ಟಪಡಿಸಿದೆ. ಎಲಿವೇಟೆಡ್ ಹೈವೇ ನಿರ್ಮಾಣ ಕಾಮಗಾರಿಯ ಅವಧಿಯಲ್ಲೂ ಅಗತ್ಯವಿರುವಲ್ಲಿ ನಿಯಂತ್ರಿತ ಸಂಚಾರ ನಿರ್ಬಂಧಗಳು ಮತ್ತು ಹಂತ-ಹಂತದ ಮಾರ್ಗ ಬದಲಾವಣೆಗಳೊಂದಿಗೆ ವಾಹನ ಸಂಚಾರ ಎಂದಿನಂತೆ ಮುಂದುವರಿಯಲಿದೆ.
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ಬೆಂಗಳೂರು ಸಂಚಾರ ಪೊಲೀಸರ ಸಮನ್ವಯದೊಂದಿಗೆ, ಹಂತ-ಹಂತವಾಗಿ ಸಂಚಾರ ಮಾರ್ಗ ಬದಲಾವಣೆಗಳನ್ನು ಜಾರಿಗೊಳಿಸುವ ಮುನ್ನ ಜಿ.ಬಿ.ಎ. ಸಹಕಾರದೊಂದಿಗೆ ಅಗತ್ಯವಿರುವ ರಸ್ತೆಗಳ ತುರ್ತು ದುರಸ್ತಿ ಸೇರಿದಂತೆ ಎಲ್ಲಾ ಪರ್ಯಾಯ ಮಾರ್ಗಗಳನ್ನು ಮೇಲ್ದರ್ಜೆಗೇರಿಸಲು ಮೊದಲ ಆದ್ಯತೆ ನೀಡಲಿದೆ. ವಾಹನ ಸವಾರರಿಗೆ ಕನಿಷ್ಠ ಪ್ರಮಾಣದ ಅಡಚಣೆಯಾಗುವಂತೆ ನೋಡಿಕೊಂಡು ಕಾಮಗಾರಿಯನ್ನು ಮುಂದುವರಿಸುವುದು ಇದರ ಮುಖ್ಯ ಉದ್ದೇಶವಾಗಿದೆ.
ಬಿ.ಡಿ.ಎ ಅಧ್ಯಕ್ಷ ಎನ್.ಎ. ಹ್ಯಾರಿಸ್ ಹಾಗೂ ಆಯುಕ್ತ ಮೇಜರ್ ಪಿ. ಮಣಿವಣ್ಣನ್ ಅವರು ಯೋಜನಾ ಸಲಹೆಗಾರರು, ಎಂಜಿನಿಯರ್ಗಳು ಮತ್ತು ಹಿರಿಯ ಅಧಿಕಾರಿಗಳೊಂದಿಗೆ ಇಂದು ಯೋಜನಾ ಪ್ರದೇಶಕ್ಕೆ ಭೇಟಿ ನೀಡಿ ಸಂಚಾರ ನಿರ್ವಹಣಾ ವ್ಯವಸ್ಥೆಯನ್ನು ಪರಿಶೀಲಿಸಿದರು. ಅನಗತ್ಯ ಸಂಚಾರ ದಟ್ಟಣೆಯನ್ನು ತಪ್ಪಿಸಲು ಕಾಮಗಾರಿ ಪ್ರಕ್ರಿಯೆ, ಸಂಚಾರ ನಿಯಂತ್ರಣ ಮತ್ತು ರಸ್ತೆ ದುರಸ್ತಿ ಕಾರ್ಯಗಳ ನಡುವೆ ನಿರಂತರ ಸಮನ್ವಯತೆ ಕಾಪಾಡಿಕೊಳ್ಳುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಕಾಮಗಾರಿ ಪೂರ್ಣಗೊಳ್ಳುವವರೆಗೂ ಅಧ್ಯಕ್ಷರು ಹಾಗೂ ಆಯುಕ್ತರು ಸಂಚಾರ ಪರಿಸ್ಥಿತಿ ಮತ್ತು ಪರಿಹಾರ ಕ್ರಮಗಳ ಅನುಷ್ಠಾನವನ್ನು ನಿರಂತರವಾಗಿ ಪರಿಶೀಲಿಸಲಿದ್ದಾರೆ.

ಕೇವಲ ನಿರ್ದಿಷ್ಟ ಲೇನ್ಗಳಿಗೆ ಮಾತ್ರ ನಿರ್ಬಂಧ; ಉಳಿದ ಲೇನ್ಗಳು ಸಂಚಾರಕ್ಕೆ ಮುಕ್ತ:
ಹಾಲಿ ರಸ್ತೆಯು ಪ್ರತಿ ಬದಿಯಲ್ಲೂ ಮೂರು ಲೇನ್ಗಳನ್ನು ಹೊಂದಿದ್ದು, ಕಾಮಗಾರಿಯ ಬ್ಯಾರಿಕೇಡ್ಗಳನ್ನು ಅಂದಾಜು 4.5 ಮೀಟರ್ಗಳಿಗೆ ಮಾತ್ರ ಸೀಮಿತಗೊಳಿಸಲಾಗುವುದು. ಇದರಿಂದಾಗಿ ಕೇವಲ ಒಂದು ಲೇನ್ಗೆ ಮಾತ್ರ ತೊಂದರೆಯಾಗಲಿದ್ದು, ಉಳಿದ ಎರಡು ಲೇನ್ಗಳು ಹಾಗೂ ಸರ್ವಿಸ್ ರಸ್ತೆಯು ವಾಹನ ಸಂಚಾರಕ್ಕೆ ಎಂದಿನಂತೆ ಮುಕ್ತವಾಗಿರಲಿವೆ ಎಂದು ಅಧ್ಯಕ್ಷರು ಸ್ಪಷ್ಟಪಡಿಸಿದರು.
ಪ್ರಸ್ತುತ ರಸ್ತೆಯಲ್ಲಿನ ವಾಹನ ದಟ್ಟಣೆಯ ಪ್ರಮಾಣ, ಸಾರ್ವಜನಿಕ ಸಾರಿಗೆಯ ಅಗತ್ಯತೆಗಳು ಹಾಗೂ ಪ್ರಯಾಣಿಕರ ಅನುಕೂಲವನ್ನು ಗಮನದಲ್ಲಿಟ್ಟುಕೊಂಡು ಸಂಚಾರ ಪೊಲೀಸರೊಂದಿಗೆ ಜಂಟಿಯಾಗಿ ಈ ಸಂಚಾರ ನಿರ್ವಹಣಾ ಯೋಜನೆಯನ್ನು ರೂಪಿಸಲಾಗುತ್ತಿದೆ. ರಸ್ತೆಯ ಅಡೆತಡೆಗಳನ್ನು ಗುರುತಿಸುವುದು, ಪರ್ಯಾಯ ಮಾರ್ಗಗಳಲ್ಲಿ ರಸ್ತೆ ಮೇಲ್ಮೈಯನ್ನು ದುರಸ್ತಿಪಡಿಸುವುದು, ಸೂಕ್ತ ರಸ್ತೆ ಗುರುತುಗಳು (ರೋಡ್ ಮಾರ್ಕಿಂಗ್ಸ್) ಹಾಗೂ ಸೂಚನಾ ಫಲಕಗಳನ್ನು ಅಳವಡಿಸುವುದು ಮತ್ತು ಕಾಮಗಾರಿ ಮುಂದುವರಿದಂತೆ ಹಂತ-ಹಂತವಾಗಿ ಸಂಚಾರ ಮಾರ್ಗ ಬದಲಾವಣೆಗಳನ್ನು ಜಾರಿಗೆ ತರುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ.
ಬೆಂಗಳೂರಿನ ಭವಿಷ್ಯದ ಬೆಳವಣಿಗೆಗೆ ಅಗತ್ಯವಿರುವ ಮೂಲಸೌಕರ್ಯ:
ನಗರವನ್ನು ಉತ್ತರ ಬೆಂಗಳೂರು ಮತ್ತು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದೊಂದಿಗೆ ಸಂಪರ್ಕಿಸುವ ಅತ್ಯಂತ ಪ್ರಮುಖ ಸಾರಿಗೆ ಕಾರಿಡಾರ್ನಲ್ಲಿ ದಿನೇ ದಿನೆ ಹೆಚ್ಚುತ್ತಿರುವ ಸಂಚಾರ ದಟ್ಟಣೆಯನ್ನು ನಿವಾರಿಸಲು ಬಿ.ಡಿ.ಎ ರೂಪಿಸಿರುವ ಸಮಗ್ರ ಸುರಂಗ ಮತ್ತು ಎಲಿವೇಟೆಡ್ ಕಾರಿಡಾರ್ ಯೋಜನೆಯ ಭಾಗವಾಗಿ ಈ ಎಲಿವೇಟೆಡ್ ಹೈವೇ ನಿರ್ಮಾಣವಾಗುತ್ತಿದೆ.

ತ್ವರಿತ ನಗರೀಕರಣ ಹಾಗೂ ಹೆಚ್ಚುತ್ತಿರುವ ವಾಹನಗಳ ದಟ್ಟಣೆಯಿಂದಾಗಿ ಹೆಬ್ಬಾಳ ಮತ್ತು ಮೇಖ್ರಿ ವೃತ್ತದ ಸುತ್ತಮುತ್ತಲಿನ ಹಾಲಿ ಮೂಲಸೌಕರ್ಯವು ಈಗಾಗಲೇ ತೀವ್ರ ಸಂಚಾರ ಒತ್ತಡವನ್ನು ಎದುರಿಸುತ್ತಿದೆ. ಹೆಚ್ಚುವರಿ ಸಾಮರ್ಥ್ಯ ಮತ್ತು ಉತ್ತಮ ಸಂಚಾರ ವಿಭಜನಾ ವ್ಯವಸ್ಥೆಯನ್ನು ರೂಪಿಸದಿದ್ದರೆ ಮುಂದಿನ ದಿನಗಳಲ್ಲಿ ಈ ಪ್ರಮುಖ ಮಾರ್ಗದಲ್ಲಿ ಸಂಚಾರ ಒತ್ತಡ ಮತ್ತಷ್ಟು ಹೆಚ್ಚಾಗಲಿದೆ.
ಈ ಸಮಗ್ರ ಯೋಜನೆಯು ಎಲಿವೇಟೆಡ್ ಹೈವೇ, ಭೂಗತ ಸುರಂಗ ಮಾರ್ಗ ಹಾಗೂ ಸಂಪರ್ಕ ಕಲ್ಪಿಸುವ ರಸ್ತೆ ಜಾಲವನ್ನು ಒಳಗೊಂಡಿದ್ದು, ಸುಗಮ ವಾಹನ ಸಂಚಾರಕ್ಕೆ ಮತ್ತು ಸಂಚಾರ ಹಂಚಿಕೆಗೆ ನೆರವಾಗಲಿದೆ. ಅಂದಾಜು ₹445.7 ಕೋಟಿ ವೆಚ್ಚದ ಈ ಎಲಿವೇಟೆಡ್ ಕಾರಿಡಾರ್ ಕಾಮಗಾರಿಯನ್ನು 18 ತಿಂಗಳುಗಳಲ್ಲಿ ಪೂರ್ಣಗೊಳಿಸಲು ಗುರಿ ನಿಗದಿಪಡಿಸಲಾಗಿದೆ. ಯೋಜನೆಯು ಪೂರ್ಣಗೊಂಡ ನಂತರ ಪ್ರಸ್ತಾಪಿತ ಹೆಚ್ಚುವರಿ ನಾಲ್ಕು ಪಥಗಳ ಮೇಲ್ಸೇತುವೆ ಹಾಗೂ ರೋಟರಿ ಸಂಪರ್ಕಗಳು ಮೇಖ್ರಿ ವೃತ್ತ ಮತ್ತು ಹೆಬ್ಬಾಳ ಕಾರಿಡಾರ್ನಲ್ಲಿ ವಾಹನ ಸಂಚಾರವನ್ನು ಗಣನೀಯವಾಗಿ ಸುಗಮಗೊಳಿಸಲಿವೆ.
ಸಾರ್ವಜನಿಕರಲ್ಲಿ ಸಹಕಾರಕ್ಕೆ ಅಧ್ಯಕ್ಷರ ಮನವಿ:
ಪರಿಶೀಲನೆಯ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎನ್. ಎ. ಹ್ಯಾರಿಸ್ ಅವರು, ಬೆಂಗಳೂರು ನಗರದ ಭವಿಷ್ಯದ ಹಿತದೃಷ್ಟಿಯಿಂದ ಮತ್ತು ಬೆಳೆಯುತ್ತಿರುವ ಜನಸಂಖ್ಯೆಯ ಅಗತ್ಯತೆಗಳನ್ನು ಪೂರೈಸಲು ಈ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿದೆ ಎಂದು ತಿಳಿಸಿದರು.
ಕಾಮಗಾರಿಯ ಅವಧಿಯಲ್ಲಿ ತಾತ್ಕಾಲಿಕವಾಗಿ ಕೆಲವೊಂದು ಸಂಚಾರ ಹೊಂದಾಣಿಕೆಗಳು ಅನಿವಾರ್ಯವಾಗಲಿದ್ದು, ಸಾರ್ವಜನಿಕರಿಗೆ ಕನಿಷ್ಠ ಅಡಚಣೆಯಾಗುವಂತೆ ಪ್ರಾಧಿಕಾರ ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದು ಅವರು ವಿವರಿಸಿದರು. ಈ ಹೆಚ್ಚುವರಿ ರಸ್ತೆ ಮೂಲಸೌಕರ್ಯವು ಮುಂಬರುವ ದಿನಗಳಲ್ಲಿ ಸಂಚಾರ ಸಾಮರ್ಥ್ಯವನ್ನು ಹೆಚ್ಚಿಸಿ ಸುಗಮ ಸಂಪರ್ಕವನ್ನು ಒದಗಿಸುವುದರಿಂದ ನಾಗರಿಕರು ಈ ತಾತ್ಕಾಲಿಕ ನಿರ್ಬಂಧಗಳಿಗೆ ಸಹಕರಿಸಬೇಕೆಂದು ಅಧ್ಯಕ್ಷರು ಮನವಿ ಮಾಡಿದರು. ಜೊತೆಗೆ, ಪ್ರಸ್ತಾಪಿತ ಮೆಟ್ರೋ ಮೂಲಸೌಕರ್ಯ ಹಾಗೂ ಈ ಕಾರಿಡಾರ್ನಲ್ಲಿನ ಎಂಜಿನಿಯರಿಂಗ್ ಮಿತಿಗಳನ್ನು ಗಮನದಲ್ಲಿಟ್ಟುಕೊಂಡೇ ಯೋಜನೆಯನ್ನು ರೂಪಿಸಲಾಗಿದೆ ಎಂದು ಅವರು ಸ್ಪಷ್ಟಪಡಿಸಿದರು.

ಸಂಚಾರ ನಿರ್ವಹಣೆ ಮತ್ತು ಪರ್ಯಾಯ ಮಾರ್ಗಗಳ ಜಂಟಿ ಪರಿಶೀಲನೆ:
ಪರಿಶೀಲನೆ ವೇಳೆ ಅಧ್ಯಕ್ಷರು ಮತ್ತು ಆಯುಕ್ತರು ಬೆಂಗಳೂರು ನಗರ ಹೆಚ್ಚುವರಿ ಪೊಲೀಸ್ ಆಯುಕ್ತ (ಸಂಚಾರ) ಕಾರ್ತಿಕ್ ರೆಡ್ಡಿ ಅವರೊಂದಿಗೆ ಸಂಚಾರ ನಿರ್ಬಂಧಗಳು, ರಸ್ತೆ ಮಾರ್ಗ ಬದಲಾವಣೆಗಳು ಮತ್ತು ಸುಗಮ ವಾಹನ ಸಂಚಾರಕ್ಕೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಚರ್ಚೆ ನಡೆಸಿದರು.
ಬ್ಯಾಪ್ಟಿಸ್ಟ್ ಆಸ್ಪತ್ರೆ, ಯುಎಎಸ್ ಸಿಬ್ಬಂದಿ ವಸತಿಗೃಹ, ಪಶುವೈದ್ಯಕೀಯ ಕಾಲೇಜು ಹಾಗೂ ಮೇಖ್ರಿ ವೃತ್ತದ ನಡುವಿನ ರಸ್ತೆಗಳು, ಹೆಬ್ಬಾಳ ಮೇಲ್ಸೇತುವೆಯ ಇಳಿಜಾರು (ರ್ಯಾಂಪ್), ಸಿಬಿಐ ಜಂಕ್ಷನ್ ಮತ್ತು ಪಕ್ಕದ ಸರ್ವಿಸ್ ರಸ್ತೆಗಳಲ್ಲಿ ಜಂಟಿ ಪರಿಶೀಲನೆ ನಡೆಸಲಾಯಿತು. ತಾತ್ಕಾಲಿಕ ಬ್ಯಾರಿಕೇಡ್ಗಳು, ರಸ್ತೆ ಕಿರಿದಾಗುವಿಕೆ ಮತ್ತು ಕಾಮಗಾರಿ ಪ್ರಕ್ರಿಯೆಗಳಿಂದ ಉಂಟಾಗುವ ಸಂಚಾರ ಅಡೆತಡೆಗಳನ್ನು ಗುರುತಿಸಿ ಸೂಕ್ತ ಪರಿಹಾರ ಕ್ರಮಗಳನ್ನು ಕೈಗೊಳ್ಳುವಂತೆ ಯೋಜನಾ ಎಂಜಿನಿಯರ್ಗಳು ಹಾಗೂ ಸಲಹೆಗಾರರಿಗೆ ಅಧ್ಯಕ್ಷರು ಸೂಚಿಸಿದರು. ನ್ಯೂ ಬಿಇಎಲ್ ರಸ್ತೆ ಮತ್ತು ಆರ್.ಟಿ. ನಗರ ಪೊಲೀಸ್ ಠಾಣೆ ರಸ್ತೆ ಸೇರಿದಂತೆ ಗುರುತಿಸಲಾದ ಪರ್ಯಾಯ ಮಾರ್ಗಗಳ ದುರಸ್ತಿ ಕಾರ್ಯವನ್ನು ತ್ವರಿತವಾಗಿ ಪೂರ್ಣಗೊಳಿಸಲು ಬಿ.ಡಿ.ಎ ಸಂಸ್ಥೆಯು ಜಿ.ಬಿ.ಎ ಜೊತೆ ಸಮನ್ವಯ ಸಾಧಿಸಲಿದೆ. ಸಂಚಾರ ಪೊಲೀಸರೊಂದಿಗೆ ಸಮಾಲೋಚನೆ ನಡೆಸಿ ಸಾರ್ವಜನಿಕ ಸಾರಿಗೆ ಬಸ್ಗಳು, ಖಾಸಗಿ ಬಸ್ಗಳು ಮತ್ತು ವಾಣಿಜ್ಯ ವಾಹನಗಳಿಗೆ ಪ್ರತ್ಯೇಕ ಮಾರ್ಗ ವ್ಯವಸ್ಥೆ ಕಲ್ಪಿಸುವ ಸಾಧ್ಯತೆಗಳನ್ನು ಪರಿಶೀಲಿಸಲಾಗುತ್ತಿದೆ.
18 ತಿಂಗಳುಗಳ ಕಾಲಮಿತಿಯು ಎಲಿವೇಟೆಡ್ ಕಾರಿಡಾರ್ ಕಾಮಗಾರಿಯನ್ನು ಪೂರ್ಣಗೊಳಿಸಲು ನಿಗದಿಪಡಿಸಲಾದ ಅವಧಿಯಾಗಿದ್ದು, ಇದರರ್ಥ ಹೆಬ್ಬಾಳ ಮೇಲ್ಸೇತುವೆಯು ಈ ಸಂಪೂರ್ಣ ಅವಧಿಯಲ್ಲಿ ಮುಚ್ಚಿರುವುದಿಲ್ಲವೆಂದು ಬಿ.ಡಿ.ಎ ಸ್ಪಷ್ಟಪಡಿಸುತ್ತದೆ.
ಯೋಜನೆಯ ಮುಖ್ಯಾಂಶಗಳು:
ಮೇಖ್ರಿ ವೃತ್ತದಲ್ಲಿ ₹445.7 ಕೋಟಿ ವೆಚ್ಚದ ಎಲಿವೇಟೆಡ್ ಕಾರಿಡಾರ್
* ಯೋಜನೆ: ಯುಎಎಸ್ ಸಿಬ್ಬಂದಿ ವಸತಿಗೃಹದಿಂದ ಮೇಖ್ರಿ ವೃತ್ತದವರೆಗೆ ನಾಲ್ಕು ಪಥಗಳ ಎಲಿವೇಟೆಡ್ ಕಾರಿಡಾರ್.
* ಉದ್ದ: ಅಂದಾಜು 1.74 ಕಿ.ಮೀ.
* ಅಂದಾಜು ವೆಚ್ಚ: ₹445.7 ಕೋಟಿ.
* ನಿರ್ಮಾಣ ಅವಧಿ: 18 ತಿಂಗಳುಗಳು.
* ವಿನ್ಯಾಸ: ಅಂದಾಜು 49 ಪಿಲ್ಲರ್ಗಳು ಮತ್ತು ಮೇಖ್ರಿ ವೃತ್ತದಲ್ಲಿ ಎಲಿವೇಟೆಡ್ ರೋಟರಿ ಜಂಕ್ಷನ್.
* ಸಂಪರ್ಕಗಳು: ಸಿ. ವಿ. ರಾಮನ್ ರಸ್ತೆ ಮೂಲಕ ಯಶವಂತಪುರ ಕಡೆಗೆ ಒಂದು ಡೌನ್-ರ್ಯಾಂಪ್ ಮತ್ತು ಜಯಮಹಲ್ ರಸ್ತೆ ಕಡೆಗೆ ಮತ್ತೊಂದು ಡೌನ್-ರ್ಯಾಂಪ್.
* ಸಮಗ್ರ ಯೋಜನೆ: ಹೆಬ್ಬಾಳ ಮತ್ತು ಮೇಖ್ರಿ ವೃತ್ತದ ನಡುವಿನ ಸಂಚಾರ ದಟ್ಟಣೆಯನ್ನು ಸುಗಮಗೊಳಿಸಲು ರೂಪಿಸಲಾದ ಸಮಗ್ರ ಸುರಂಗ ಹಾಗೂ ಎಲಿವೇಟೆಡ್ ಹೈವೇ ವ್ಯವಸ್ಥೆಯ ಭಾಗ.
ಕಾಮಗಾರಿ ಅವಧಿಯಲ್ಲಿ ಸಂಚಾರ ನಿರ್ಬಂಧಗಳು:
ಯೋಜನಾ ಕಾರಿಡಾರ್ ಮಾರ್ಗದಲ್ಲಿ ಕಾಮಗಾರಿ ನಡೆಯುವ ವೇಳೆ ವಾಹನ ಸಂಚಾರವನ್ನು ನಿಯಂತ್ರಿಸಲಾಗುವುದು.
ಪ್ರಸ್ತಾಪಿತ ಸಂಚಾರ ನಿಯಮಗಳ ವಿವರ:
* ಕಾರುಗಳು ಮತ್ತು ದ್ವಿಚಕ್ರ ವಾಹನಗಳ ಸಂಚಾರಕ್ಕೆ ಅವಕಾಶವಿರುತ್ತದೆ.
* ಶಾಲಾ ಬಸ್ಗಳ ಸಂಚಾರಕ್ಕೆ ಅವಕಾಶವಿರುತ್ತದೆ.
* ಬಿಎಂಟಿಸಿ ಹಾಗೂ ಕೆಎಸ್ಆರ್ಟಿಸಿ ಬಸ್ಗಳ ಸಂಚಾರಕ್ಕೆ ಅವಕಾಶವಿರುತ್ತದೆ.
* ಸಂಚಾರ ಪೊಲೀಸ್ ಮಾರ್ಗಸೂಚಿಯಲ್ಲಿ ಸೂಚಿಸಿದಂತೆ ಸರಕು ಸಾಗಣೆ ವಾಹನಗಳ ಪ್ರವೇಶಕ್ಕೆ ನಿರ್ಬಂಧವಿರುತ್ತದೆ.
ಕಾಮಗಾರಿಯ 18 ತಿಂಗಳ ಅವಧಿಯಲ್ಲಿ ಹೆಬ್ಬಾಳ ಮೇಲ್ಸೇತುವೆಯನ್ನು ಸಂಪೂರ್ಣವಾಗಿ ಮುಚ್ಚಲಾಗುವುದಿಲ್ಲ. ಕಾಮಗಾರಿಯ ಅಗತ್ಯತೆ ಹಾಗೂ ಸಂಚಾರ ಪೊಲೀಸರು ನೀಡುವ ನಿರ್ದೇಶನಗಳ ಆಧಾರದ ಮೇಲೆ ಹಂತ-ಹಂತವಾಗಿ ಸಂಚಾರ ನಿರ್ಬಂಧಗಳು ಮತ್ತು ಮಾರ್ಗ ಬದಲಾವಣೆಗಳನ್ನು ಜಾರಿಗೊಳಿಸಲಾಗುವುದು.
ವಾಹನ ಸವಾರರಿಗೆ ಪರ್ಯಾಯ ಮಾರ್ಗಗಳು:

* ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕಡೆಗೆ ತೆರಳುವ ಪ್ರಯಾಣಿಕರಿಗೆ:
* ಹೆಬ್ಬಾಳ ಕಡೆಯಿಂದ: ಹಳೇ ಹೈಗ್ರೌಂಡ್ಸ್ ಜಂಕ್ಷನ್ – ಕಲ್ಪನಾ ಜಂಕ್ಷನ್ – ಹಳೇ ಉದಯ ಟಿವಿ ಜಂಕ್ಷನ್ – ಕಂಟೋನ್ಮೆಂಟ್ ರೈಲ್ವೆ ನಿಲ್ದಾಣ – ಟ್ಯಾನರಿ ರಸ್ತೆ – ನಾಗವಾರ ರಸ್ತೆ.
* ಯಶವಂತಪುರ ಕಡೆಯಿಂದ: ಮತ್ತಿಕೆರೆ ರಸ್ತೆ – ಬಿಇಎಲ್ ವೃತ್ತ (ಬಲಕ್ಕೆ ತಿರುವು) – ಹೊರವರ್ತುಲ ರಸ್ತೆ.
* ಬೆಂಗಳೂರು ನಗರ ಕೇಂದ್ರ ಭಾಗದ ಕಡೆಗೆ ತೆರಳುವ ಪ್ರಯಾಣಿಕರಿಗೆ:
* ವಿಮಾನ ನಿಲ್ದಾಣದ ಕಡೆಯಿಂದ: ಹೆಬ್ಬಾಳ ಬಳಿ ಎಡಕ್ಕೆ ತಿರುಗಿ, ನಾಗವಾರ ಜಂಕ್ಷನ್ ಕಡೆಗೆ ಸಾಗಿ ಬ್ಯಾಂಬೂ ಬಜಾರ್ – ಕ್ವೀನ್ಸ್ ರಸ್ತೆ ಮೂಲಕ ಮುಂದುವರಿಯುವುದು.
* ವಿಮಾನ ನಿಲ್ದಾಣದ ಕಡೆಯಿಂದ ಮತ್ತೊಂದು ಪರ್ಯಾಯ ಮಾರ್ಗ: ಹೆಬ್ಬಾಳ ಬಳಿ ಬಲಕ್ಕೆ ತಿರುಗಿ ಹೆಬ್ಬಾಳ ಹೊರವರ್ತುಲ ರಸ್ತೆ – ಕುವೆಂಪು ವೃತ್ತ – ಗೊರಗುಂಟೆಪಾಳ್ಯ ಜಂಕ್ಷನ್ – ಡಾ. ರಾಜ್ಕುಮಾರ್ ರಸ್ತೆ ಮೂಲಕ ತೆರಳುವುದು.
* ಯಶವಂತಪುರ ಕಡೆಯಿಂದ: ಬಿಎಚ್ಇಎಲ್ ಜಂಕ್ಷನ್ ಮೂಲಕ ಸಾಗಿ, ಮಾರಮ್ಮ ವೃತ್ತದ ಬಳಿ ಬಲಕ್ಕೆ ತಿರುಗಿ ಮಾರ್ಗೋಸಾ ರಸ್ತೆ ಮಾರ್ಗವಾಗಿ ಮುಂದುವರಿಯುವುದು.
* ಹೆಬ್ಬಾಳ ಕಡೆಯಿಂದ ನಗರ ಮತ್ತು ಸುತ್ತಮುತ್ತಲಿನ ಪ್ರದೇಶಗಳಿಗೆ ತೆರಳುವವರಿಗೆ:
* ನಗರ ಕೇಂದ್ರ ಭಾಗಕ್ಕೆ: ಹೆಬ್ಬಾಳ ಮೇಲ್ಸೇತುವೆಯಿಂದ ಕೆಳಗಿಳಿದ ನಂತರ ಬ್ಯಾಪ್ಟಿಸ್ಟ್ ಆಸ್ಪತ್ರೆಯ ಮುಂಭಾಗದ ಸರ್ವಿಸ್ ರಸ್ತೆಯನ್ನು ಬಳಸಿ, ಸಿಬಿಐ ಜಂಕ್ಷನ್ ಮೂಲಕ ಬಳ್ಳಾರಿ ಮುಖ್ಯ ರಸ್ತೆಯನ್ನು ಸೇರುವುದು.
* ಗಂಗಾನಗರ, ಆನಂದ ನಗರ, ಆರ್. ಟಿ. ನಗರ ಮತ್ತು ಜಯಮಹಲ್ ಕಡೆಗೆ: ಬ್ಯಾಪ್ಟಿಸ್ಟ್ ಆಸ್ಪತ್ರೆಯ ಮುಂಭಾಗದ ಸರ್ವಿಸ್ ರಸ್ತೆಯನ್ನು ಬಳಸಿ, ಆನಂದ ನಗರ ಕ್ರಾಸ್ ಕಡೆಗೆ ಸಾಗಿ ಸಿಬಿಐ ಜಂಕ್ಷನ್ ಮೂಲಕ ಆನಂದ ನಗರ ಮುಖ್ಯ ರಸ್ತೆಯನ್ನು ತಲುಪುವುದು.
ಬೆಂಗಳೂರು ಸಂಚಾರ ಪೊಲೀಸ್ ಇಲಾಖೆಯು ಹೊರಡಿಸುವ ಮಾರ್ಗಸೂಚಿಗಳು ಹಾಗೂ ನಿರ್ದೇಶನಗಳಿಗೆ ಅನುಗುಣವಾಗಿ ಸಂಚಾರ ನಿರ್ಬಂಧಗಳು ಮತ್ತು ಪರ್ಯಾಯ ಮಾರ್ಗಗಳ ವ್ಯವಸ್ಥೆಯನ್ನು ಜಾರಿಗೆ ತರಲಾಗುವುದು.

KEY WORDS:
Hebbal Flyover, Bengaluru Traffic, BDA, Ballari Road, Elevated Highway, Traffic Diversion, GBA, Bengaluru Development Authority






