ಮೈಸೂರು,ನವೆಂಬರ್,6,2026 (www.justkannada.in): ಮೈಸೂರು ಮಹಾನಗರ ಪಾಲಿಕೆಯ ಪ್ರಜಾಸೇವಾ ಇ-ಖಾತಾ ವಿಶೇಷ ಅಭಿಯಾನದಡಿ ಇಂದು 4, 5 ಮತ್ತು 6ನೇ ವಲಯಗಳಿಂದ ಒಟ್ಟು 415 ಅರ್ಜಿಗಳನ್ನು ಸ್ವೀಕರಿಸಲಾಗಿದೆ.
ಈ ಕುರಿತು ಮಾಹಿತಿ ನೀಡಿರುವ ಮೈಸೂರು ಮಹಾನಗರ ಪಾಲಿಕೆ ಆಯುಕ್ತೆ ಎಂ.ಕೆ ಸವಿತಾ ಅವರು, ವಲಯ 4ರಲ್ಲಿ175 ಅರ್ಜಿಗಳು, ವಲಯ 5ರಲ್ಲಿ 133, ವಲಯ 6ರಲ್ಲಿ107 ಅರ್ಜಿಗಳು ಒಟ್ಟು 415ಗಳನ್ನ ಸ್ವೀಕರಿಸಲಾಗಿದೆ. ಅರ್ಹ ಫಲಾನುಭವಿಗಳಿಗೆ ದಿನಾಂಕ 18-11-2026 ರಂದು ಬೆಳಿಗ್ಗೆ 10 ಗಂಟೆಗೆ ಇ-ಖಾತಾಗಳನ್ನು ವಿತರಿಸಲಾಗುವುದು ಎಂದು ತಿಳಿಸಿದ್ದಾರೆ.
ಮಣಿಪಾಲ್ ಆಸ್ಪತ್ರೆಯ ವತಿಯಿಂದ ಉಚಿತ ಆರೋಗ್ಯ ತಪಾಸಣೆ:
ಈ ಅಭಿಯಾನದಲ್ಲಿ ಮಣಿಪಾಲ್ ಆಸ್ಪತ್ರೆ, ಮೈಸೂರು ವತಿಯಿಂದ ವಿಶೇಷ ಸಹಭಾಗಿತ್ವದೊಂದಿಗೆ ಇ-ಖಾತಾ ಪಡೆಯಲು ಆಗಮಿಸಿದ ಸಾರ್ವಜನಿಕರು ಮತ್ತು ಹಿರಿಯ ನಾಗರಿಕರು ಉಚಿತ ಆರೋಗ್ಯ ತಪಾಸಣೆ ಪಡೆದುಕೊಂಡರು. ಅಲ್ಲದೆ, ಸಾರ್ವಜನಿಕರಿಗೆ ಕಾಫಿ, ಟೀ ಮತ್ತು ಬಿಸ್ಕತ್ ಡ್ರೈ ಫ್ರೂಟ್ಸ್ ವ್ಯವಸ್ಥೆಯನ್ನೂ ಮಾಡಲಾಗಿದ್ದು, ಸಾರ್ವಜನಿಕರಿಗೆ ಅಗತ್ಯ ಸೌಲಭ್ಯಗಳನ್ನು ಒದಗಿಸಲಾಗಿದೆ ಎಂದು ತಿಳಿಸಿದರು.
ನಾಳೆ ದಿನಾಂಕ 07-11-2026 ರಂದು ಬೆಳಿಗ್ಗೆ 10ಗಂಟೆಯಿಂದ 7, 8 ಮತ್ತು 9ನೇ ವಲಯಗಳ ಇ-ಖಾತಾ ವಿಶೇಷ ಅಭಿಯಾನ ಪಾಲಿಕೆಯ ಕೇಂದ್ರ ಕಚೇರಿಯಲ್ಲಿ ನಡೆಯಲಿದ್ದು, ಸಂಬಂಧಪಟ್ಟ ವಲಯಗಳ ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಲು ಕೋರಲಾಗಿದೆ. ಸಾರ್ವಜನಿಕರು ಯಾವುದೇ ಮಧ್ಯವರ್ತಿಗಳನ್ನು ಸಂಪರ್ಕಿಸದೆ, ಇ-ಖಾತಾ ಸೇವೆಗಾಗಿ ಮಹಾನಗರ ಪಾಲಿಕೆಯ ಅಧಿಕಾರಿ ಮತ್ತು ಸಿಬ್ಬಂದಿಯನ್ನು ನೇರವಾಗಿ ಸಂಪರ್ಕಿಸುವಂತೆ ತಿಳಿಸಲಾಗಿದೆ ಎಂದು ಪಾಲಿಕೆ ಆಯುಕ್ತೆ ಎಂ.ಕೆ ಸವಿತಾ ತಿಳಿಸಿದ್ದಾರೆ.










