ಮೈಸೂರು,ನವೆಂಬರ್,4,2026 (www.justkannada.in): ಮೈಸೂರು ಅರಮನೆ, ಚಿನ್ನದ ಅಂಬಾರಿ, ರಾಜಮನೆತನದ ಧಾರ್ಮಿಕ ಆಚರಣೆಗಳು ಹಾಗೂ ಸರ್ಕಾರದ ನಡುವಿನ ವಿವಾದಕ್ಕೆ ಸಂಬಂಧಿಸಿದಂತೆ ರಾಜಮಾತೆ ಪ್ರಮೋದಾದೇವಿ ಒಡೆಯರ್ ಮಹತ್ವದ ಸ್ಪಷ್ಟನೆ ನೀಡಿದ್ದಾರೆ. ಚಿನ್ನದ ಅಂಬಾರಿ ಮತ್ತು ರಾಜಮನೆತನದ ಸಿಂಹಾಸನ ನಮ್ಮ ಖಾಸಗಿ ಸ್ವತ್ತುಗಳಾಗಿದ್ದು, ಅರಮನೆ ಸ್ವಾಧೀನ ಕಾಯ್ದೆಯ ವ್ಯಾಪ್ತಿಗೆ ಇವು ಒಳಪಡುವುದಿಲ್ಲ ಎಂದು ಅವರು ಪ್ರತಿಪಾದಿಸಿದ್ದಾರೆ.
ನಗರದ ಮೈಸೂರು ಅರಮನೆಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಚಿನ್ನದ ಅಂಬಾರಿಯನ್ನು ಸರ್ಕಾರಕ್ಕೆ ನೀಡುವ ಪ್ರಕ್ರಿಯೆ, ಅದಕ್ಕೆ ನೀಡುವ ಗೌರವಧನ, ಅರಮನೆಯ ಧಾರ್ಮಿಕ ಆಚರಣೆಗಳು ಹಾಗೂ ಅರಮನೆ ಸ್ವಾಧೀನಕ್ಕೆ ಸಂಬಂಧಿಸಿದ ನ್ಯಾಯಾಲಯದ ಪ್ರಕರಣದ ಕುರಿತು ತಮ್ಮ ನಿಲುವನ್ನು ವಿವರಿಸಿದರು.
ಅಂಬಾರಿಗೆ ಬಾಡಿಗೆ ನೀಡುವುದಿಲ್ಲ, ಗೌರವಧನ ನೀಡುತ್ತಾರೆ
ಚಿನ್ನದ ಅಂಬಾರಿಗೆ ಸರ್ಕಾರ ಬಾಡಿಗೆ ನೀಡುತ್ತದೆ ಎಂಬ ಚರ್ಚೆಗೆ ಪ್ರತಿಕ್ರಿಯಿಸಿದ ಪ್ರಮೋದಾದೇವಿ ಒಡೆಯರ್, ಅಂಬಾರಿಗೆ ಬಾಡಿಗೆ ನೀಡುವುದಿಲ್ಲ, ಬದಲಿಗೆ ಗೌರವಧನ ನೀಡಲಾಗುತ್ತದೆ ಎಂದು ಸ್ಪಷ್ಟಪಡಿಸಿದರು.
ಸರ್ಕಾರ ಮೊದಲು ಅರಮನೆಗೆ ಪತ್ರ ಬರೆದು ಅಂಬಾರಿ ನೀಡುವಂತೆ ಮನವಿ ಮಾಡುತ್ತದೆ. ನಂತರ ಅಂಬಾರಿ ನೀಡಿದ ಹಿನ್ನೆಲೆಯಲ್ಲಿ ಪ್ರಚಾರ ಮಾಡುತ್ತದೆ. ಆದರೆ ಈ ಪ್ರಕ್ರಿಯೆಯ ಹಿಂದಿರುವ ಸಂಪ್ರದಾಯದ ಬಗ್ಗೆ ಸಾರ್ವಜನಿಕವಾಗಿ ಪ್ರತ್ಯೇಕವಾಗಿ ವಿವರಿಸುವುದಿಲ್ಲ ಎಂದರು.
ಇದು ಹಲವು ವರ್ಷಗಳಿಂದ ನಡೆದುಕೊಂಡು ಬಂದಿರುವ ಸಂಪ್ರದಾಯವಾಗಿದೆ. ಅಂಬಾರಿ ಯಾವ ಆನೆಯ ಮೇಲೆ ಇರಬೇಕು ಎಂಬುದನ್ನು ನಾವು ಕೇಳುವುದು ವಾಡಿಕೆ. ಏಕೆಂದರೆ ಅಂಬಾರಿ ಹೊರುವ ಆನೆ, ಮಾವುತರು ಹಾಗೂ ಜಂಬೂಸವಾರಿಯಲ್ಲಿ ಭಾಗವಹಿಸುವ ಲಕ್ಷಾಂತರ ಜನರ ಸುರಕ್ಷತೆಯ ಜವಾಬ್ದಾರಿ ಇರುತ್ತದೆ. ಹೀಗಾಗಿ ಮುನ್ನೆಚ್ಚರಿಕೆಯ ದೃಷ್ಟಿಯಿಂದ ಈ ಬಗ್ಗೆ ಮಾಹಿತಿ ಪಡೆಯುತ್ತೇವೆ. ಅಂಬಾರಿಗೆ ವಿಮೆಯನ್ನೂ ಮಾಡಿಸಲಾಗುತ್ತದೆ ಎಂದು ತಿಳಿಸಿದರು.
ಅಂಬಾರಿ ಯಾವತ್ತೂ ಅರಮನೆಯಿಂದ ಶಾಶ್ವತವಾಗಿ ಹೊರಹೋಗಿಲ್ಲ. ಹಿಂದೆಯೂ ಅಂಬಾರಿ ನಮ್ಮದೇ, ಮುಂದೆಯೂ ನಮ್ಮದೇ. ಅಂಬಾರಿ ಮತ್ತು ಸಿಂಹಾಸನ ನಮ್ಮ ಖಾಸಗಿ ಸ್ವತ್ತುಗಳಾಗಿದ್ದು, ಅರಮನೆ ಸ್ವಾಧೀನ ಕಾಯ್ದೆಗೆ ಇವು ಒಳಪಡುವುದಿಲ್ಲ ಎಂದು ಪ್ರತಿಪಾದಿಸಿದರು.
ಅಂಬಾರಿ ಬೇಡ ಎಂದಿದ್ದೆ, ಮೆರವಣಿಗೆಗೆ ಕೊಡುವುದಿಲ್ಲ ಎಂದಿಲ್ಲ
ಸರ್ಕಾರಕ್ಕೆ ಅಂಬಾರಿ ವಿಚಾರವಾಗಿ ಹಿಂದೆಯೇ ತಮ್ಮ ನಿಲುವನ್ನು ತಿಳಿಸಿದ್ದಾಗಿ ಹೇಳಿದ ಅವರು, ಚಾಮುಂಡೇಶ್ವರಿ ಮೂರ್ತಿ ಸರ್ಕಾರದ ಬಳಿಯೇ ಇದೆ. ಅಂಬಾರಿಯನ್ನು ಸರ್ಕಾರವೇ ಮಾಡಿಸಿಕೊಂಡು ಬಳಕೆ ಮಾಡಿಕೊಳ್ಳಲಿ. ನಮ್ಮ ಬಳಿ ಅಂಬಾರಿ ಕೇಳುವ ಅಗತ್ಯವಿಲ್ಲ ಎಂದು ತಿಳಿಸಿದ್ದೆ. ಹೀಗೆ ಮಾಡಿದರೆ ಯಾವುದೇ ಸಮಸ್ಯೆ ಎದುರಾಗುವುದಿಲ್ಲ ಎಂದೂ ಹೇಳಿದ್ದೆ ಎಂದು ವಿವರಿಸಿದರು.
ಆದರೆ, ಜಂಬೂಸವಾರಿ ಮೆರವಣಿಗೆಗೆ ಅಂಬಾರಿಯನ್ನು ನೀಡುವುದಿಲ್ಲ ಎಂದು ತಾವು ಎಂದಿಗೂ ಹೇಳಿಲ್ಲ. ಈ ವಿಚಾರದಲ್ಲಿ ಅನಗತ್ಯ ಗೊಂದಲ ಸೃಷ್ಟಿಯಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಯದುವಂಶದ ಧಾರ್ಮಿಕ ಆಚರಣೆಗಳನ್ನು ಸರ್ಕಾರ ಮುಂದುವರಿಸಿಲ್ಲ
ಯದುವಂಶದ ಸಂಪ್ರದಾಯ ಮತ್ತು ಧಾರ್ಮಿಕ ಆಚರಣೆಗಳ ಕುರಿತು ಮಾತನಾಡಿದ ಅವರು, ಸರ್ಕಾರ ಯದುವಂಶದ ಉತ್ತರಾಧಿಕಾರಿಯಲ್ಲ. ಹೀಗಾಗಿ ಯದುವಂಶದ ಧಾರ್ಮಿಕ ಆಚರಣೆಗಳನ್ನು ಸರ್ಕಾರ ಮುಂದುವರಿಸಲು ಸಾಧ್ಯವಿಲ್ಲ. ಸರ್ಕಾರ ಮಾಡುತ್ತಿರುವುದು ಕೇವಲ ಸಾಂಸ್ಕೃತಿಕ ಆಚರಣೆಗಳಾಗಿವೆ. ಯದುವಂಶದ ಧಾರ್ಮಿಕ ಆಚರಣೆಗಳನ್ನು ನಾವು ನಮ್ಮ ಸಂಪ್ರದಾಯದಂತೆ ಮುಂದುವರಿಸಿಕೊಂಡು ಬರುತ್ತಿದ್ದೇವೆ ಎಂದರು.
1998ರಲ್ಲಿ ಅರಮನೆ ಬಿಟ್ಟುಕೊಡುವಂತೆ ಸರ್ಕಾರದ ಕಡೆಯಿಂದ ಪ್ರಸ್ತಾವನೆ ಬಂದಿತ್ತು. ಒಂದು ಕೋಟಿ ರೂಪಾಯಿ ಹಣ ಹಾಗೂ ಒಂದು ಎಕರೆ ಜಮೀನು ನೀಡುತ್ತೇವೆ, ಆರು ತಿಂಗಳೊಳಗೆ ಅರಮನೆ ಖಾಲಿ ಮಾಡಿಕೊಡಿ ಎಂದು ತಿಳಿಸಲಾಗಿತ್ತು. ಆದರೆ, ತಮ್ಮ ಪತಿ ದಿವಂಗತ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಇದಕ್ಕೆ ಒಪ್ಪಿರಲಿಲ್ಲ. ಇಂದಿನ ದಿನಗಳಲ್ಲಿ ಒಂದು ಕೋಟಿ ರೂಪಾಯಿ ಅರಮನೆಯ ಒಂದು ಕಂಬದ ಮೌಲ್ಯಕ್ಕೂ ಸಮನಾಗುವುದಿಲ್ಲ ಎಂದು ಅಭಿಪ್ರಾಯಪಟ್ಟರು.
ಈ ವಿಚಾರವಾಗಿ ಮುಖ್ಯಮಂತ್ರಿ ಹಾಗೂ ಸಂಬಂಧಪಟ್ಟ ಸಚಿವರೊಂದಿಗೆ ಚರ್ಚಿಸಲು ತಾವು ಸಿದ್ಧರಿರುವುದಾಗಿಯೂ ತಿಳಿಸಿದರು.
ಅರಮನೆಯ ವಾಸಸ್ಥಳದ ವಿಚಾರ ನ್ಯಾಯಾಲಯದಲ್ಲಿದೆ
ಅರಮನೆಯಲ್ಲಿನ ತಮ್ಮ ವಾಸಸ್ಥಳದ ಕುರಿತು ಮಾತನಾಡಿದ ಪ್ರಮೋದಾದೇವಿ ಒಡೆಯರ್, ಸರ್ಕಾರದಿಂದ ತಮಗೆ ಪ್ರತ್ಯೇಕವಾಗಿ ಉಳಿದುಕೊಳ್ಳಲು ಯಾವುದೇ ಜಾಗ ನೀಡಿಲ್ಲ. ತಾವು ವಾಸಿಸುತ್ತಿರುವ ಭಾಗ ತಮ್ಮ ಬಳಿಯೇ ಇದೆ. ಅದನ್ನು ಸರ್ಕಾರ ಸ್ವಾಧೀನಪಡಿಸಿಕೊಳ್ಳಲು ಅವಕಾಶವಿಲ್ಲ. ತಾವು ವಾಸಿಸುತ್ತಿರುವ ಪ್ರದೇಶದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ನ್ಯಾಯಾಲಯ ಆದೇಶಿಸಿದೆ. ಈ ಪ್ರಕರಣ ಇನ್ನೂ ನ್ಯಾಯಾಲಯದ ವಿಚಾರಣೆಯಲ್ಲಿದೆ ಎಂದು ಹೇಳಿದರು.
ಸರ್ಕಾರದ ಸ್ವಾಧೀನದಲ್ಲಿರುವ ಅರಮನೆಯ ಭಾಗದಲ್ಲಿ ತಮ್ಮ ಧಾರ್ಮಿಕ ಆಚರಣೆಗಳನ್ನು ನಡೆಸಲು ಅವಕಾಶವಿದೆ. ಆದರೆ, ಪ್ರತಿವರ್ಷ ಆಯುಧಪೂಜೆ ಸಂದರ್ಭದಲ್ಲಿ ಕೆಲವು ಸಮಸ್ಯೆಗಳು ಎದುರಾಗುತ್ತವೆ. ನಡೆಮುಡಿ ಹಾಕಿ ಅದರ ಮೇಲೆ ನಡೆದುಕೊಂಡು ಬರುವ ಸಂಪ್ರದಾಯವಿದೆ. ನಡೆಮುಡಿ ಮೇಲೆ ಬೇರೆ ಯಾರೂ ಓಡಾಡದಂತೆ ನೋಡಿಕೊಳ್ಳಲು ನಮ್ಮ ಕಡೆಯಿಂದ ಒಬ್ಬರಿಗೆ ಜವಾಬ್ದಾರಿ ನೀಡಲಾಗುತ್ತದೆ. ಆದರೂ ಬ್ಯಾರಿಕೇಡ್‌ಗಳಿಂದಾಗಿ ಆಚರಣೆ ನಡೆಸಲು ತೊಂದರೆಯಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಜಟ್ಟಿಕಾಳಗ ಧಾರ್ಮಿಕ ಆಚರಣೆಯ ಭಾಗ
ಜಟ್ಟಿಕಾಳಗದ ಕುರಿತು ಸ್ಪಷ್ಟನೆ ನೀಡಿದ ಅವರು, ಜಟ್ಟಿಕಾಳಗ ಕೇವಲ ಕ್ರೀಡೆಯಲ್ಲ; ಅದು ನಮ್ಮ ಧಾರ್ಮಿಕ ಆಚರಣೆಯ ಒಂದು ಭಾಗವಾಗಿದೆ. ಜಟ್ಟಿಗಳು ನಮ್ಮ ಅರಮನೆಯಲ್ಲಿ ಮಾತ್ರ ಈ ಸಂಪ್ರದಾಯವನ್ನು ಮುಂದುವರಿಸಿಕೊಂಡು ಬರುತ್ತಿದ್ದಾರೆ. ಈ ಬಾರಿ ಕೆಲ ಪೊಲೀಸ್ ಅಧಿಕಾರಿಗಳಿಂದ ಆಚರಣೆಗೆ ತೊಂದರೆಯಾಗಿದೆ ಎಂದು ಆರೋಪಿಸಿದರು.
ಅರಮನೆ ಎಸಿಪಿಗೆ ಅಂಬಾರಿ ವಿಚಾರದಲ್ಲಿ ಸಂಪರ್ಕದ ಜವಾಬ್ದಾರಿ ನೀಡಲಾಗುತ್ತದೆ. ಅಂಬಾರಿ ನೀಡುವ ಪ್ರಕ್ರಿಯೆಯಲ್ಲಿ ಅವರೊಂದಿಗೆ ಮಾತ್ರ ಸಂಪರ್ಕವಿರುತ್ತದೆ. ಬೇರೆ ಪೊಲೀಸ್ ಅಧಿಕಾರಿಗಳೊಂದಿಗೆ ನಮಗೆ ನೇರ ಸಂಪರ್ಕವಿಲ್ಲ ಎಂದು ತಿಳಿಸಿದರು.
ಯಾವುದೇ ಸರ್ಕಾರ ಬಂದರೂ ಸಮಸ್ಯೆಗಳು ಎದುರಾಗಿವೆ
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗ ಮಾತ್ರ ಅರಮನೆಗೆ ತೊಂದರೆಯಾಗುತ್ತದೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ನಿಮಗೆ ಯಾಕೆ ಹಾಗೆ ಅನಿಸುತ್ತದೆ ಎಂದು ಪ್ರಶ್ನಿಸಿದರು. ಬಿಜೆಪಿ, ಜೆಡಿಎಸ್ ಅಥವಾ ಕಾಂಗ್ರೆಸ್ ಯಾವುದೇ ಸರ್ಕಾರದ ಅವಧಿಯಲ್ಲಾದರೂ ಒಂದಷ್ಟು ಸಮಸ್ಯೆಗಳು ಎದುರಾಗಿವೆ. ಇದನ್ನು ಒಂದು ಪಕ್ಷಕ್ಕೆ ಸೀಮಿತಗೊಳಿಸುವುದು ಸರಿಯಲ್ಲ ಎಂದರು.
ಈ ವರ್ಷದ ಗೊಂದಲವನ್ನು ತಾವು ಮುಂದುವರಿಸಿಕೊಂಡು ಹೋಗುವುದಿಲ್ಲ. ಯಾರನ್ನೂ ದ್ವೇಷಿಸುವುದಿಲ್ಲ, ಯಾರೊಂದಿಗೂ ನಿಷ್ಠುರವಾಗುವುದಿಲ್ಲ. ನಮ್ಮ ಕಡೆಯಿಂದ ಸರ್ಕಾರಕ್ಕೆ ಯಾವುದೇ ತೊಂದರೆ ನೀಡುವುದಿಲ್ಲ. ಅದೇ ರೀತಿ ನಮ್ಮ ಧಾರ್ಮಿಕ ಆಚರಣೆಗಳಿಗೂ ಸರ್ಕಾರ ಅಡ್ಡಿಪಡಿಸಬಾರದು ಎಂಬುದಷ್ಟೇ ನಮ್ಮ ಬೇಡಿಕೆ. ಈ ವಿಚಾರವನ್ನು ಜನರಿಗೆ ತಿಳಿಸಿ, ಗೊಂದಲಕ್ಕೆ ತೆರೆ ಎಳೆಯುವ ಉದ್ದೇಶದಿಂದ ಸುದ್ದಿಗೋಷ್ಠಿ ನಡೆಸಿದ್ದೇನೆ ಎಂದು ಹೇಳಿದರು.
Ambari, throne, our, private property, Mysore Palace, Pramodadevi Wodeyar






