ಬೆಂಗಳೂರು,ನವೆಂಬರ್,4,2026 (www.justkannada.in): ಕೌಶಲ್ಯಕ್ಕೆ ಸಂಬಂಧಿಸಿದಂತೆ ಕೈಗಾರಿಕಾ ರಂಗದ ಬೇಡಿಕೆಗಳನ್ನು ಪೂರೈಸಲು ರಾಜ್ಯದ 33 ಸರಕಾರಿ ಜಿ.ಟಿ.ಟಿ.ಸಿ. ಸಂಸ್ಥೆಗಳಲ್ಲಿ ವಿದ್ಯಾರ್ಥಿಗಳಿಗೆ ಪ್ರಿಸಿಷನ್ ಟಾಯ್ಲಿಂಗ್, ಸಿ ಎನ್ ಸಿ ಮತ್ತು ಮೆಕೆನ್ಟ್ರಾನಿಕ್ಸ್ ವಿಭಾಗಗಳಲ್ಲಿ ಸಂಪೂರ್ಣ ತರಬೇತಿ ಕೊಡಲಾಗುತ್ತಿದೆ. ಸಮಗ್ರ ಕೈಗಾರಿಕಾ ಬೆಳವಣಿಗೆಯ ದೂರದೃಷ್ಟಿಯಿಂದ ಸಾಂಪ್ರದಾಯಿಕ ತಯಾರಿಕೆಯ ವಿಧಾನದಿಂದ ಬೌದ್ಧಿಕ ಆಸ್ತಿಗಳ ನಿರ್ಮಾಣ, ಡೀಪ್-ಟೆಕ್ ಸಂಶೋಧನೆ, ಪ್ರಿಸಿಷನ್ ಎಂಜಿನಿಯರಿಂಗ್ ಮತ್ತು ಜಾಗತಿಕ ಮಟ್ಟದ ಸಂಶೋಧನೆ ಹಾಗೂ ಅಭಿವೃದ್ಧಿ ಪರಿವ್ಯವಸ್ಥೆಯ ಕಡೆಗೆ ಹೊರಳಿಕೊಳ್ಳುತ್ತಿದ್ದೇವೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ ಪಾಟೀಲ್ ಹೇಳಿದ್ದಾರೆ.
`ಬೆಂಗಳೂರು ಕೌಶಲ್ಯ ಶೃಂಗಸಭೆ-2026’ರಲ್ಲಿ ಸಚಿವ ಎಂ.ಬಿ ಪಾಟೀಲ್ ಅವರು ಭಾಗವಹಿಸಿ ಮಾತನಾಡಿದರು. ರಾಜ್ಯವು ವಿದೇಶಿ ನೇರ ಹೂಡಿಕೆ, ಬಂಡವಾಳ ಆಕರ್ಷಣೆ ಇತ್ಯಾದಿಗಳಲ್ಲಿ ಮುಂಚೂಣಿಯಲ್ಲಿದೆ. ಇದರ ಜತೆಗೆ ನಾವು ಉದ್ಯಮಗಳಿಗೆ ವೃತ್ತಿಪರವಾಗಿ ಸಜ್ಜಾಗಿರುವ ಮಾನವ ಸಂಪನ್ಮೂಲವನ್ನು ಒದಗಿಸಬೇಕು. ಆಗ ಇದು ಉತ್ಪಾದಕತೆ ಮತ್ತು ಉದ್ಯೋಗಸೃಷ್ಟಿಗೆ ದಾರಿ ಮಾಡಿಕೊಡುತ್ತದೆ. ರಾಜ್ಯದಲ್ಲಿರುವ 1,000ಕ್ಕೂ ಹೆಚ್ಚು ಜಿಸಿಸಿ ಕೇಂದ್ರಗಳು ಮತ್ತು 750 ಬಹುರಾಷ್ಟ್ರೀಯ ಕಂಪನಿಗಳಲ್ಲಿ ಕೌಶಲ್ಯವನ್ನು ಹೊಂದಿರುವ 12 ಲಕ್ಷ ಜನರು ಉದ್ಯೋಗ ಗಿಟ್ಟಿಸಿಕೊಂಡಿದ್ದಾರೆ. ಇದಕ್ಕೆ ಪೂರಕವಾಗಿ 31 ಲಕ್ಷ ಪರೋಕ್ಷ ಉದ್ಯೋಗಗಳು ಸೃಷ್ಟಿಯಾಗಿವೆ ಎಂದಿದ್ದಾರೆ.
2030ರೊಳಗೆ 7.5 ಲಕ್ಷ ಕೋಟಿ ರೂ. ಬಂಡವಾಳ ಸೆಳೆದು, 20 ಲಕ್ಷ ಉದ್ಯೋಗ ಸೃಷ್ಟಿಸುವ ಮತ್ತು 2032ರ ಹೊತ್ತಿಗೆ ರಾಜ್ಯವನ್ನು 1 ಟ್ರಿಲಿಯನ್ ಡಾಲರ್ ಆರ್ಥಿಕತೆಯಾಗಿ ಬೆಳೆಸುವ ಗುರಿ ನಮ್ಮದಾಗಿದೆ. ಈ ಪೈಕಿ ಈಗಾಗಲೇ ಶೇ.75ರಷ್ಟು ಹೂಡಿಕೆ ಪ್ರಸ್ತಾವನೆಗಳು ನೈಜವಾಗಿ ಬಂದಿವೆ. ಸರಕಾರವು ಕೌಶಲ್ಯಾಭಿವೃದ್ಧಿ ಒದಗಿಸಲೆಂದೇ `ನಿಪುಣ ಕರ್ನಾಟಕ’ ಯೋಜನೆಯನ್ನು ಜಾರಿಗೆ ತಂದಿದೆ. ಕೈಗಾರಿಕೆಗಳು ಕೂಡ ಸರಕಾರದ ಉಪಕ್ರಮವಾಗಿರುವ ಕೈಗಾರಿಕಾ ಸಂಪರ್ಕ ಘಟಕದ ಜತೆ ನಿಕಟವಾಗಬೇಕು ಎಂದು ಸಚಿವ ಎಂ.ಬಿ ಪಾಟೀಲ್ ಅವರು ನುಡಿದಿದ್ದಾರೆ.
ಕಾರ್ಯಕ್ರಮದಲ್ಲಿ ಕೌಶಲ್ಯಾಭಿವೃದಧಿ ಸಚಿವ ಡಾ.ಶರಣಪ್ರಕಾಶ ಪಾಟೀಲ, ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರಡ್ಡಿ, ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ, ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್, ಆಯುಕ್ತೆ ಖುಷ್ಬೂ ಗೋಯಲ್ ಮುಂತಾದವರು ಉಪಸ್ಥಿತರಿದ್ದರು.






