ಬೆಂಗಳೂರು,ನವೆಂಬರ್,3,2026 (www.justkannada.in): ಸ್ಟಿಂಗ್ ಸೂತ್ರಧಾರರನ್ನು ಬಂಧಿಸುವಂತೆ ಮಾಜಿ ಸಿಎಂ ಸಿದ್ದರಾಮಯ್ಯ ಹೈಕಮಾಂಡ್ ಬಳಿ ಆಗ್ರಹಿಸಿದ್ದರೆ ಎಂಬ ಸುದ್ದಿ ಇದೆ. ನಾವು ಕೂಡ ಹೇಳುತ್ತಿರುವುದು ಇದನ್ನೇ. ತನಿಖೆಯ ದಾರಿ ತಪ್ಪಿಸುತ್ತಿದ್ದೀರಿ . ಅದನ್ನು ಸರಿಪಡಿಸಿಕೊಳ್ಳಿ ಎಂದು ಹೇಳುತ್ತಿದ್ದೇನೆ ಎಂದು ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ತಿಳಿಸಿದರು.
ನಿನ್ನೆ ರಾಹುಲ್ ಗಾಂಧಿ ಭೇಟಿ ವೇಳೆ ಸ್ಟಿಂಗ್ ಸೂತ್ರದಾರ ಬಂಧನಕ್ಕೆ ಸಿದ್ದರಾಮಯ್ಯ ಒತ್ತಾಯ ವಿಚಾರ ಕುರಿತು ಮಾತನಾಡಿದ ಹೆಚ್ ಡಿ ಕುಮಾರಸ್ವಾಮಿ, ನಾನೂ ಇದನ್ನೇ ಹೇಳುತ್ತಿರುವುದು ಶೂಟ್ ಮಾಡಿ ಕೊಲೆ ಮಾಡಿದವರ ಬಗ್ಗ ಚರ್ಚೆ ನಡೆತೀಲ್ಲ. ಅಲ್ಲೆಲ್ಲೋ ಕೊಲೆ ಆಗಿದೆ ಅಂದವರ ಬಗ್ಗೆ ತನಿಖೆ ನಡೆಯುತ್ತಿದೆ. ರಾಜ್ಯದ ಜನತೆಗೆ ಹೇಳುತ್ತೇನೆ ಎಂತಹ ದರಿದ್ರ ಸ್ಥಿತಿ ಈ ರಾಜ್ಯಕ್ಕೆ ಬಂತು. ಇದೆನಾದರೂ ಮುಂದುವರೆದರೇ ಈ ರಾಜ್ಯ ಏನಾಗುತ್ತೆ? ಎಂದು ಕಳವಳ ವ್ಯಕ್ತಪಡಿಸಿದರು.
ನಾನು ಸಿದ್ದರಾಮಯ್ಯ ಅವರ ಸೈದ್ಧಾಂತಿಕ ಹಾಗೂ ರಾಜಕೀಯ ವೈರಿಯಾಗಿ ಸುದೀರ್ಘ ಕಾಲದಿಂದ ಹೋರಾಡುತ್ತಾ ಬಂದಿದ್ದೇನೆ. ತಮ್ಮದೇ ಹಿಂದುಳಿದ ಸಮುದಾಯದ ನಾಯಕರೊಬ್ಬರು ಉನ್ನತ ಅಧಿಕಾರದಲ್ಲಿದ್ದಾರೆಂಬ ಅಸೂಯೆಯಿಂದಲೋ ಅಥವಾ ಸಿದ್ದರಾಮಯ್ಯ ಅವರ ಮೇಲಿನ ಅನುಕಂಪದಿಂದಾಗಲೀ ಈ ಮಾತುಗಳನ್ನು ಹೇಳುತ್ತಿಲ್ಲ. ಬದಲಾಗಿ ರಾಜ್ಯಕ್ಕೆ ಬಂದೊದಗಿರುವ ಈ ಕೆಟ್ಟ ಸಂಸ್ಕೃತಿ ಮತ್ತು ನಾಡಿನ ಭವಿಷ್ಯ ಕುಸಿಯುತ್ತಿರುವ ಭೀತಿಗೆ ಪ್ರತಿಯೊಬ್ಬ ನಾಗರಿಕನಿಗೂ ನಿಜಸ್ಥಿತಿಯ ದರ್ಶನ ಮಾಡಿಸುವುದು ತಮ್ಮ ಕರ್ತವ್ಯವಾಗಿದೆ ಎಂದು ಹೆಚ್ ಡಿ ಕುಮಾರಸ್ವಾಮಿ ತಿಳಿಸಿದರು.






