ಮೈಸೂರು, ನವೆಂಬರ್ 2, 2026 (www.justkannada.in): ಮೈಸೂರು–ಕೊಡಗು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು, ಕೇಂದ್ರ ಸಂಸ್ಕೃತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರಿಗೆ ಪತ್ರ ಬರೆದು, ಮೈಸೂರಿನಲ್ಲಿ ಪ್ರಸ್ತಾಪಿತವಾಗಿರುವ ವಿಜ್ಞಾನ ಕೇಂದ್ರಕ್ಕೆ (ವರ್ಗ-II, ಮಾದರಿ-B) ವಿಜ್ಞಾನ ಸಂಸ್ಕೃತಿ ಉತ್ತೇಜನ ಯೋಜನೆ (SPoCS) ಅಡಿಯಲ್ಲಿ ಶೀಘ್ರ ಅನುಮೋದನೆ ನೀಡುವಂತೆ ಮನವಿ ಮಾಡಿದ್ದಾರೆ.
ಸಂಸದರ ಪ್ರಯತ್ನ ಮತ್ತು ಸೂಚನೆಯ ಮೇರೆಗೆ, ಕರ್ನಾಟಕ ಸರ್ಕಾರದ ಎಲೆಕ್ಟ್ರಾನಿಕ್ಸ್, ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಮೂಲಕ ಈ ಯೋಜನೆಯ ಪ್ರಸ್ತಾವನೆಯನ್ನು ಸಲ್ಲಿಸಲಾಗಿತ್ತು.
ಯೋಜನೆಯ ಮಹತ್ವವನ್ನು ಒತ್ತಿಹೇಳಿದ ಸಂಸದ ಯದುವೀರ್ ಒಡೆಯರ್ ಅವರು, CFTRI, DFRL ಹಾಗೂ ಮೈಸೂರು ವಿಶ್ವವಿದ್ಯಾಲಯದಂತಹ ಪ್ರಮುಖ ಸಂಸ್ಥೆಗಳನ್ನು ಹೊಂದಿರುವ ಮೈಸೂರು, ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರಲ್ಲಿ ವೈಜ್ಞಾನಿಕ ಮನೋಭಾವ, ಅನುಭವಾಧಾರಿತ ಕಲಿಕೆ ಹಾಗೂ ನಾವೀನ್ಯತೆಯನ್ನು ಉತ್ತೇಜಿಸುವ ವಿಜ್ಞಾನ ಕೇಂದ್ರ ಸ್ಥಾಪನೆಗೆ ಅತ್ಯಂತ ಸೂಕ್ತ ಸ್ಥಳವಾಗಿದೆ ಎಂದು ತಿಳಿಸಿದ್ದಾರೆ.
ಈ ಯೋಜನೆಗಾಗಿ ಮೈಸೂರು ವಿಶ್ವವಿದ್ಯಾಲಯವು ಈಗಾಗಲೇ ಏಳು ಎಕರೆ ಭೂಮಿಯನ್ನು ಮಂಜೂರು ಮಾಡಿದ್ದು, ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಪ್ರೋತ್ಸಾಹಕ ಸೊಸೈಟಿ (KSTePS) ಜೊತೆ ಒಪ್ಪಂದವನ್ನೂ ಮಾಡಿಕೊಂಡಿದೆ. ಯೋಜನೆಯ ಮಾರ್ಗಸೂಚಿಗಳ ಪ್ರಕಾರ ಅಗತ್ಯ ಮೂಲಸೌಕರ್ಯಗಳನ್ನು ಒದಗಿಸಲು ರಾಜ್ಯ ಸರ್ಕಾರವೂ ಬದ್ಧವಾಗಿದೆ.
ರಾಜ್ಯ ಸರ್ಕಾರವು 2026ರ ಜನವರಿ 5ರಂದು ಸಲ್ಲಿಸಿರುವ ಪರಿಷ್ಕೃತ ವಿವರವಾದ ಯೋಜನಾ ವರದಿಯಲ್ಲಿ (DPR), ಪ್ರಸ್ತುತ SPoCS ಮಾರ್ಗಸೂಚಿಗಳ ವ್ಯಾಪ್ತಿಗೆ ಬಾರದ ಫ್ಲೈಟ್ ಸಿಮ್ಯುಲೇಟರ್ ಮತ್ತು 3D ಥಿಯೇಟರ್ ಗಳನ್ನು ಕೈಬಿಡಲಾಗಿದೆ. ಇವುಗಳಿಗೆ ಹೆಚ್ಚಿನ ಹೆಚ್ಚುವರಿ ಸಲಹಾ ವೆಚ್ಚಗಳು ತಗಲುವ ಹಿನ್ನೆಲೆಯಲ್ಲಿ ಪರಿಷ್ಕೃತ ಪ್ರಸ್ತಾವನೆಯನ್ನು ಯೋಜನಾ ಮೌಲ್ಯಮಾಪನ ಸಮಿತಿಯ (PAC) ಪರಿಗಣನೆ ಮತ್ತು ಅನುಮೋದನೆಗಾಗಿ ಸಲ್ಲಿಸಲಾಗಿದೆ.
ಪರಿಷ್ಕೃತ DPR ಪರಿಶೀಲನೆಯನ್ನು ತ್ವರಿತಗೊಳಿಸಿ, ಅಗತ್ಯ ಅನುಮೋದನೆಯನ್ನು ಶೀಘ್ರವಾಗಿ ನೀಡುವಂತೆ ಕೇಂದ್ರ ಸಚಿವರು ಮಧ್ಯಪ್ರವೇಶಿಸಬೇಕೆಂದು ಯದುವೀರ್ ಒಡೆಯರ್ ಮನವಿ ಮಾಡಿದ್ದಾರೆ.
ವಿಜ್ಞಾನ ಕೇಂದ್ರದ ಶೀಘ್ರ ಸ್ಥಾಪನೆಯು ವಿಜ್ಞಾನ ಶಿಕ್ಷಣವನ್ನು ಬಲಪಡಿಸುವುದರ ಜೊತೆಗೆ, ಮೈಸೂರು ಮತ್ತು ಸುತ್ತಮುತ್ತಲಿನ ಜಿಲ್ಲೆಗಳ ವಿದ್ಯಾರ್ಥಿಗಳಿಗೆ ಆಧುನಿಕ ಹಾಗೂ ಸಂವಾದಾತ್ಮಕ ಕಲಿಕಾ ಸೌಲಭ್ಯಗಳನ್ನು ಒದಗಿಸಲಿದೆ ಎಂದು ಸಂಸದ ಯದುವೀರ್ ಒತ್ತಿಹೇಳಿದ್ದಾರೆ.
ಕೇಂದ್ರ ಸಚಿವಾಲಯವು ಶೀಘ್ರ ಅನುಮೋದನೆ ನೀಡುವ ಮೂಲಕ ಈ ಮಹತ್ವದ ಶೈಕ್ಷಣಿಕ ಯೋಜನೆ ಸಾಕಾರಗೊಳ್ಳಲಿದ್ದು, ಶಿಕ್ಷಣ, ವೈಜ್ಞಾನಿಕ ಪ್ರಗತಿ ಮತ್ತು ನಾವೀನ್ಯತೆಯ ಕೇಂದ್ರವಾಗಿ ಮೈಸೂರಿನ ಸ್ಥಾನಮಾನ ಮತ್ತಷ್ಟು ಬಲಗೊಳ್ಳಲಿದೆ ಎಂಬ ವಿಶ್ವಾಸವನ್ನು ಸಂಸದ ಯದುವೀರ್ ವ್ಯಕ್ತಪಡಿಸಿದ್ದಾರೆ.






