ಮೈಸೂರು,ಅಕ್ಟೋಬರ್,24,2026 (www.justkannada.in): ಮೈಸೂರು ದಸರಾ ಅರಮನೆಯಲ್ಲಿ ವಿಜಯದಶಮಿಯಂದು ನಡೆಯುವ ಜಟ್ಟಿಕಾಳಗ ರದ್ದಾದ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್, ಈ ಕುರಿತು ವರದಿ ಪಡೆದು ನಾಳೆ ಸ್ಪಷ್ಟನೆ ನೀಡುತ್ತೇನೆ ಎಂದಿದ್ದಾರೆ.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಪ್ರಮೋದಾದೇವಿ ಒಡೆಯರ್, ರಾಜ್ಯದ ಜನರನ್ನ ತಾಯಿ ಕಾಪಾಡುತ್ತಿದ್ದಾಳೆ. ಮುಂದೆ ಕೂಡ ಆಕೆ ಎಲ್ಲರನ್ನೂ ಕಾಪಾಡುತ್ತಾಳೆ. ಶುಭಸೂಚಕವಾಗಿ ಮಳೆ ಬರುತ್ತಿದೆ. ಇದು ರಾಜ್ಯಕ್ಕೆ ಒಳ್ಳೆಯ ಸಂಕೇತ. ನಾಡಿನ ಅನ್ನದಾತರಿಗೆ ಸದಾ ಒಳಿತಾಗಲಿ. ಸುಖ- ಶಾಂತಿ – ನೆಮ್ಮದಿಯಿಂದ ಜನರು ಬಾಳಲಿ ಎಂದು ಹಾರೈಸಿದರು.
ಜಟ್ಟಿಕಾಳಗ ವಿಚಾರದಲ್ಲಿ ಅಸ್ಪಷ್ಟ ಮಾಹಿತಿ ಇದೆ. ಈ ಕುರಿತು ವರದಿ ಪಡೆದು ಸ್ಪಷ್ಟನೆ ನೀಡುತ್ತೇವೆ. ನಾವು ಯಾವುದೇ ಜ್ಯೋತಿಷ್ಯ ನೋಡಲ್ಲ. ದೇವರನ್ನ ನಂಬಿದ ಮೇಲೆ ಜ್ಯೋತಿಷ್ಯ ಯಾಕೆ ನಂಬಬೇಕು? ಜಟ್ಟಿಕಾಳಗ ನಿಂತಿರುವುದು ಆತಂಕದ ವಿಚಾರವಲ್ಲ. ದೇವರನ್ನ ನಂಬಿದ ಮೇಲೆ ಯಾವ ತೊಂದರೆ ಇಲ್ಲ ಒಂದೊಂದು ಸರಿ ಈ ರೀತಿ ಆಗುವುದು ಸಹಜ. ಈ ವಿಚಾರಕ್ಕೆ ಬೇರೆ ರೂಪ ಕೊಡಬೇಡಿ. ನಮ್ಮ ಸಮಯಕ್ಕೆ ಸರಿಯಾಗಿ ಕಾರ್ಯಕ್ರಮ ಮುಗಿದಿದೆ. ಇದಕ್ಕೆಲ್ಲಾ ವರದಿ ತರಿಸಿಕೊಂಡು ಶೀಘ್ರ ಉತ್ತರ ಕೊಡುತ್ತೇನೆ ಎಂದು ತಿಳಿಸಿದರು.







