ಮೈಸೂರು,ಅಕ್ಟೋಬರ್,24,2026 (www.justkannada.in): ವಿಶ್ವ ವಿಖ್ಯಾತ ಮೈಸೂರು ದಸರಾ ವೇಳೆ ಶಿಷ್ಟಾಚಾರ ಉಲ್ಲಂಘನೆ, ನಂದಿಧ್ವಜ ಪೂಜೆ ವೇಳೆ ಸಚಿವರಿಗೆ ತಡೆ ವಿಚಾರಕ್ಕೆ ಸಂಬಂಧಿಸಿದಂತೆ ರಾಜವಂಶಸ್ಥ ಹಾಗೂ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಪ್ರತಿಕ್ರಿಯಿಸಿದ್ದಾರೆ.
ಇಂದು ಮೈಸೂರಿನಲ್ಲಿ ಮಾತನಾಡಿದ ಸಂಸದ ,ರಾಜವಂಶಸ್ಥ ಯದುವೀರ್ ಒಡೆಯರ್, ಈ ಬಾರಿ ದಸರಾದಲ್ಲಿ ಕೆಲವು ಕಾರ್ಯಕ್ರಮಗಳು ಸುಧಾರಣೆ ಆಗಿವೆ. ಮತ್ತಷ್ಟು ಕಾರ್ಯಕ್ರಮಗಳು ಸುಧಾರಣೆ ಕಾಣಬೇಕಿದೆ. ಮುಂದಿನ ದಸರಾದಲ್ಲಿ ಅದರ ಕುರಿತು ಗಮನಹರಿಸಬೇಕಿದೆ. ಸಾಕಷ್ಟು ವಿಷಯ ಕಲಿತು, ಸಲಹೆ ನೀಡುತ್ತೇವೆ. ಈ ಸಂದರ್ಭಕ್ಕೆ ಯಾರ ಮೇಲೂ ಆರೋಪ ಮಾಡುವುದು ಸರಿಯಲ್ಲ. ನಾನು ಸರಿಯಾದ ವೇದಿಕೆಯಲ್ಲಿ ಅದರ ಬಗ್ಗೆ ಮಾತನಾಡುತ್ತೇನೆ ಎಂದರು.
ಶಿಷ್ಠಾಚಾರ ಅಂದರೆ ಏನು ಎಂಬುದು ಯಾರಿಗೂ ಸ್ಪಷ್ಟತೆ ಇಲ್ಲ. ಮೊದಲು ಶಿಷ್ಠಾಚಾರದ ಬಗ್ಗೆ ಸ್ಪಷ್ಟನೆಬೇಕು. ಆ ಮೂಲಕ ಮುಂಬರುವ ದಿನಗಳಲ್ಲಿ ಅದನ್ನ ಪಾಲಿಸಬೇಕು. ಶಿಷ್ಠಾಚಾರದ ಬಗ್ಗೆ ನನಗೆ ಗೊತ್ತಿಲ್ಲ. ಕಳೆದ 12 ವರ್ಷದಿಂದ ರಾಜಮನೆತನದ ಪ್ರತಿನಿಧಿಯಾಗಿ ತಾಯಿ ಅವರು ಕಳುಹಿಸುತ್ತಾರೆ. ನಾನು ರಾಜಪ್ರತಿನಿಧಿಯಾಗಿ ಭಾಗಿಯಾಗುತ್ತೀನಿ. ಅದನ್ನ ಹೊರತುಪಡಿಸಿ ಶಿಷ್ಠಾಚಾರದ ಬಗ್ಗೆ ಗೊತ್ತಿಲ್ಲ. ಸಾಮಾನ್ಯವಾಗಿ ಸಿಎಂ, ಡಿಸಿಎಂ, ಇಬ್ಬರು ಅಧಿಕಾರಿಗಳು ಇರುತ್ತಿದ್ದರು. ಶಿಷ್ಠಾಚಾರದ ಬಗ್ಗೆ ಅಧಿಕೃತವಾಗಿ ಗೊತ್ತಿಲ್ಲ ಎಂದರು.
ನಂದಿಧ್ವಜ ಪೂಜೆ ವೇಳೆ ಸಚಿವರನ್ನ ತಡೆದ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಂಸದ ಯದುವೀರ್, ಸರ್ಕಾರ ಅವರದ್ದೇ ಪಕ್ಷವಿದೆ. ಸರ್ಕಾರ ಅದನ್ನ ತೀರ್ಮಾನ ಮಾಡಬೇಕು. ನನಗೆ ಕಡಿಮೆ ಜನರಿದ್ದರೆ ಸೂಕ್ತ ಅನಿಸುತ್ತದೆ. ಪೂಜೆ ವೇಳೆ ವಿಧಿಗಳ ಆಚರಣೆಗೆ ಗೌರವ ಕೊಡಬೇಕು. ಒಳ್ಳೆಯ ರೀತಿಯ ವಿಧಿ ನಡೆಯಬೇಕಾದರೆ ಕಡಿಮೆ ಜನರಿರಬೇಕು. ಸಿಎಂ ರಾಜ್ಯದ ಪ್ರತಿನಿಧಿ ಆಗಿದ್ದಾರೆ. ಅವರೊಬ್ಬರೇ ಇದ್ದರೆ ಸಾಕು ಅಂತ ನನಗೆ ಅನಿಸುತ್ತದೆ. ನಾವೂ ಕೂಡ ಬರುವ ಅಗತ್ಯವಿಲ್ಲ. ಸರ್ಕಾರದ ಕಾರ್ಯಕ್ರಮವಾದ ಕಾರಣ ಸಿಎಂ ಇದ್ದರೆ ಸಾಕು ಎಂದರು.
ಮೈಸೂರು ದಸರಾ ಜಂಬೂಸವಾರಿಗೆ ಅತಿಥಿಗಳಾಗಿ ಅಕ್ಕ- ಪಕ್ಕದ ರಾಜ್ಯದ ಸಿಎಂಗಳು ಆಗಮಿಸಿದ್ದ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಸಂಸದ ಯದುವೀರ್, ಅವರೆಲ್ಲರೂ ಅತಿಥಿಗಳಾಗಿರುವ ಕಾರಣ ಬಂದಿದ್ದಾರೆ. ಅವರು ಬಂದಿದ್ದರಿಂದ ದಸರಾಕ್ಕೆ ಹೆಚ್ಚು ಪ್ರಚಾರ ಸಿಗುತ್ತದೆ. ಅತಿಥಿಗಳನ್ನ ಕರೆದು, ಪುಷ್ಪಾರ್ಚನೆ ಮಾಡಿಸದಿದ್ದರೆ ಹೇಗೆ ಆಗುತ್ತದೆ?. ಈ ಕಾರಣಕ್ಕೆ ಅಧಿಕೃತ ಶಿಷ್ಠಾಷಾರ ರೂಪಿಸಬೇಕು. ಅದಕ್ಕೊಂದು ರೂಪುರೇಷೆ ನಿರ್ಮಿಸಿದರೆ ಮಾತನಾಡಬಹುದು ಎಂದು ತಿಳಿಸಿದರು.






