ಮೈಸೂರು, ಅಕ್ಟೋಬರ್,21,2026 (www.justkannada.in): ಮೈಸೂರು ದಸರಾ ಮಹೋತ್ಸವವನ್ನು ವೀಕ್ಷಿಸಲು ಆಗಮಿಸುವ ಸಾರ್ವಜನಿಕರು, ಪ್ರವಾಸಿಗರು, ವ್ಯಾಪಾರಸ್ಥರು ಹಾಗೂ ಆಹಾರ ಮಳಿಗೆಗಳ ಮಾಲೀಕರು ಮೈಸೂರು ನಗರದ ಸ್ವಚ್ಛತೆ ಮತ್ತು ಸೌಂದರ್ಯವನ್ನು ಕಾಪಾಡಲು ಮೈಸೂರು ಮಹಾನಗರ ಪಾಲಿಕೆಯೊಂದಿಗೆ ಸಹಕರಿಸಿ ಎಂದು ಮೈಸೂರು ಮಹಾನಗರ ಪಾಲಿಕೆ ಆಯುಕ್ತೆ ಎಂ.ಕೆ ಸವಿತಾ ಮನವಿ ಮಾಡಿದ್ದಾರೆ.
ಈ ಕುರಿತು ಮಾಧ್ಯಮ ಪ್ರಕಟಣೆ ಹೊರಡಿಸಿರುವ ಪಾಲಿಕೆ ಆಯುಕ್ತೆ ಎಂ.ಕೆ ಸವಿತಾ, ಕಸವನ್ನು ಎಲ್ಲೆಂದರಲ್ಲಿ ಎಸೆಯಬೇಡಿ: ಒಣ ಕಸ ಮತ್ತು ಹಸಿ ಕಸವನ್ನು ಪ್ರತ್ಯೇಕಿಸಿ ನಿಗದಿತ ಕಸದ ಬುಟ್ಟಿಗಳಲ್ಲಿ ಹಾಕಿ. ಪ್ಲಾಸ್ಟಿಕ್ ಬಳಕೆ ತಪ್ಪಿಸಿ: ಪರಿಸರ ಸ್ನೇಹಿ ಚೀಲಗಳು ಹಾಗೂ ಮರುಬಳಕೆ ಮಾಡಬಹುದಾದ ವಸ್ತುಗಳನ್ನು ಬಳಸಿ. ಸಾರ್ವಜನಿಕ ಸ್ಥಳಗಳನ್ನು ಸ್ವಚ್ಛವಾಗಿಡಿ: ರಸ್ತೆ, ಉದ್ಯಾನವನ, ಅರಮನೆ ಸುತ್ತಮುತ್ತ ಹಾಗೂ ಪ್ರವಾಸಿ ತಾಣಗಳಲ್ಲಿ ಕಸ ಹಾಕಬೇಡಿ ಎಂದು ಸಲಹೆ ನೀಡಿದ್ದಾರೆ.
ಆಹಾರ ಮಳಿಗೆಗಳ ಮಾಲೀಕರು: ತ್ಯಾಜ್ಯವನ್ನು ಮೂಲದಲ್ಲಿಯೇ ವಿಂಗಡಿಸಿ, ಸ್ವಚ್ಛತೆ ಮತ್ತು ನೈರ್ಮಲ್ಯ ಕಾಪಾಡಿ. ಶೌಚಾಲಯಗಳನ್ನು ಸ್ವಚ್ಛವಾಗಿ ಬಳಸಿ: ಸಾರ್ವಜನಿಕ ಶೌಚಾಲಯಗಳ ನಿರ್ವಹಣೆಗೆ ಸಹಕರಿಸಿ. ತ್ಯಾಜ್ಯ ನಿರ್ವಹಣೆಗೆ ಸಹಕರಿಸಿ, ಪಾಲಿಕೆಯ ಸ್ವಚ್ಛತಾ ಸಿಬ್ಬಂದಿ ಹಾಗೂ ಅಧಿಕಾರಿಗಳ ಸೂಚನೆಗಳನ್ನು ಪಾಲಿಸಿ.. ನಮ್ಮ ಮೈಸೂರಿನ ಪರಂಪರೆ, ಸಂಸ್ಕೃತಿ ಮತ್ತು ಪರಿಸರವನ್ನು ಸಂರಕ್ಷಿಸುವುದು ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿ
ಸ್ವಚ್ಛ ಮೈಸೂರು – ಸುಂದರ ಮೈಸೂರು – ಪರಿಸರ ಸ್ನೇಹಿ ದಸರಾ ನಿಮ್ಮ ಒಂದು ಸಣ್ಣ ಪ್ರಯತ್ನ, ನಮ್ಮ ಮೈಸೂರಿನ ದೊಡ್ಡ ಹೆಮ್ಮೆ! ಎಂದು ಸಾರ್ವಜನಿಕರಿಗೆ ಆಯುಕ್ತೆ ಎಂ.ಕೆ ಸವಿತಾ ಮನವಿ ಮಾಡಿದ್ದಾರೆ.






