ಮೈಸೂರು,ಅಕ್ಟೋಬರ್,22,2026 (www.justkannada.in): ಮೈಸೂರು ದಸರಾ ನಂದಿಧ್ವಜ ಪೂಜೆ ವೇಳೆ ಸಚಿವರನ್ನ ತಡೆದ ವಿಚಾರ ಮತ್ತು ನಾಡಹಬ್ಬ ದಸರಾದಲ್ಲಿ ಯತೀಂದ್ರ ಅವರನ್ನ ಕಡೆಗಣಿಸಲಾಗಿದೆ ಎಂದು ಆರೋಪಿಸಿ ತಮ್ಮ ಪಕ್ಷದ ವಿರುದ್ಧವೇ ಕಾಂಗ್ರೆಸ್ ಮುಖಂಡರು ತಿರುಗಿಬಿದ್ದಿದ್ದಾರೆ.
ಪೊಲೀಸರ ನಡೆ ಖಂಡಿಸಿ ಮೈಸೂರಿನ ರಾಮಸ್ವಾಮಿ ವೃತ್ತದಲ್ಲಿ ಕಾಂಗ್ರೆಸ್ ಮುಖಂಡರು ಪ್ರತಿಭಟನೆ ನಡೆಸಿದ್ದಾರೆ. ಡಾ.ಯತೀಂದ್ರ ಅವರಿಗೆ ಅಪಮಾನ ಮಾಡಲಾಗಿದೆ. ನಾಡಹಬ್ಬ ದಸರಾದಲ್ಲಿ ಯತೀಂದ್ರ ಅವರನ್ನ ಕಡೆಗಣಿಸಲಾಗಿದೆ. ದಲಿತ ಸಚಿವರನ್ನ ಟಾರ್ಗೆಟ್ ಮಾಡಲಾಗುತ್ತಿದೆ. ನರೇಂದ್ರಸ್ವಾಮಿ, ಬಸವಂತಪ್ಪ, ಶಿವರಾಜ್ ತಂಗಡಗಿ ಅವರಿಗೆ ಅಪಮಾನ ಮಾಡಲಾಗಿದೆ. ಸರ್ಕಾರಿ ಜಾಹೀರಾತಿನಲ್ಲೂ ಅವರ ಫೋಟೋ ಇರಲಿಲ್ಲ. ಈವರೆಗೆ ಜಿಲ್ಲಾ ಉಸ್ತುವಾರಿ ಸಚಿವರ ಫೋಟೋ ಇರುತ್ತಿತ್ತು. ಯಾರು ಲೋಪ ಎಸಗಿದ್ದಾರೆ ಅವರನ್ನ ಅಮಾನತ್ತು ಮಾಡಬೇಕು. ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಜನಸ್ನೇಹಿ ಆಗಬೇಕಿದ್ದ ಮೈಸೂರು ಪೊಲೀಸರು ರೌಡಿಗಳಂತೆ ವರ್ತಿಸಿದ್ದಾರೆ- ಕೆ.ಶಿವರಾಂ ಕಿಡಿ
ಈ ಕುರಿತು ಮಾತನಾಡಿದ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಅಧ್ಯಕ್ಷ ಕೆ.ಶಿವರಾಂ, ಮೈಸೂರು ಪೊಲೀಸರು ರೌಡಿಗಳಂತೆ ವರ್ತಿಸಿದ್ದಾರೆ. ಮೂವರು ಸಚಿವರನ್ನ ಹಿಡಿದು ಎಳೆದಾಡಿದ್ದಾರೆ. ಸಚಿವ ಯತೀಂದ್ರ ಅವರಿಗೂ ಅವಮಾನ ಮಾಡಿದ್ದಾರೆ. ನಾಡಹಬ್ಬ ದಸರೆಯ ಜಟ್ಟಿ ಕಾಳಗ ನಿಲ್ಲುವಂತೆ ಮಾಡಿದ್ದಾರೆ. ಸಣ್ಣ ಮಕ್ಕಳು ಸೇರಿ ಹಲವರ ಮೇಲೆ ಹಲ್ಲೆ ಮಾಡಿದ್ದಾರೆ. ಪತ್ರಕರ್ತರ ಕೊರಳಪಟ್ಟಿ ಹಿಡಿದು ಎಳೆದಾಡಿದ್ದಾರೆ. ಜನಸ್ನೇಹಿ ಆಗಬೇಕಿದ್ದ ಪೊಲೀಸರು ರೌಡಿಗಳಂತೆ ವರ್ತಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ತಪ್ಪಿತಸ್ಥರ ವಿರುದ್ಧ ಕ್ರಮ ಆಗಲೇಬೇಕು. ಮೈಸೂರಲ್ಲಿ ಸಿದ್ದರಾಮಯ್ಯ ಹಾಗು ಯತೀಂದ್ರ ಅವರ ಶಕ್ತಿ ಕುಂದಿಸುವ ಯತ್ನ. ಆದರೆ ಹಿಂದುಳಿದ ಸಮುದಾಯ ಅವರ ಜೊತೆ ಇದೆ. ಅಧಿಕಾರಿಗಳು, ಸರ್ಕಾರದ ನಡೆ ಸರಿ ಇಲ್ಲ ಎಂದು ಶಿವರಾಮ್ ಹರಿಹಾಯ್ದರು.
ಕಾಂಗ್ರೆಸ್ ಮುಖಂಡ ಕಾಂತರಾಜು ಮಾತನಾಡಿ, ಪೊಲೀಸರು, ಅಧಿಕಾರಿಗಳು, ಸರ್ಕಾರದ ವಿರುದ್ಧ ಕಿಡಿ ಕಾರಿದರು. ಮೈಸೂರು ದಸರಾದಲ್ಲಿ ಪೊಲೀಸರು ದುಂಡಾವರ್ತನೆ ತೋರಿದ್ದಾರೆ. ದಲಿತ ಸಚಿವರನ್ನ ಟಾರ್ಗೆಟ್ ಮಾಡಿದ್ದಾರೆ.. ದಲಿತ ಸಚಿವರ ಹಿಡಿದು ಎಳೆದಾಡಿದವರ ವಿರುದ್ಧ ಅಟ್ರಾಸಿಟಿ ಕೇಸ್ ಹಾಕಬೇಕು. ಮಕ್ಕಳು, ಮಹಿಳೆಯರ ಮೇಲೆ ಹಲ್ಲೆ ಮಾಡಿದವರ ವಿರುದ್ಧ ಕ್ರಮ ಆಗಬೇಕು. ಉಸ್ತುವಾರಿ ಸಚಿವರು, ದಲಿತ ಸಚಿವರನ್ನ ಅಪಮಾನಿಸಿದವರಿಗೆ ಶಿಕ್ಷೆ ಆಗಲೇಬೇಕು. ಇಲ್ಲವಾದರೆ ಮುಂದಿನ ದಿನದಲ್ಲಿಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.






