ಮೈಸೂರು, ಅಕ್ಟೋಬರ್,22,2026 (www.justkannada.in): ಮೈಸೂರು ಮಹಾನಗರ ಪಾಲಿಕೆಯ ಸಮಸ್ತ ಅಧಿಕಾರಿಗಳು, ಅಭಿಯಂತರರು, ಆರೋಗ್ಯ ವಿಭಾಗದ ಸಿಬ್ಬಂದಿ ಹಾಗೂ ಪೌರಕಾರ್ಮಿಕರಿಗೆ ಹೃತ್ಪೂರ್ವಕ ಧನ್ಯವಾದಗಳು. ಮೈಸೂರು ದಸರಾ ಮಹೋತ್ಸವ–2026ರ ಯಶಸ್ವಿ ಆಚರಣೆ ಹಾಗೂ ಇಡೀ ನಗರದ ಸ್ವಚ್ಛತೆಯನ್ನು ಕಾಪಾಡುವಲ್ಲಿ ಕಳೆದ ಒಂದು ತಿಂಗಳಿನಿಂದ ಸಲ್ಲಿಸಿರುವ ಸೇವೆ ನಿಜಕ್ಕೂ ಶ್ಲಾಘನೀಯ ಎಂದು ಮೈಸೂರು ಮಹಾನಗರ ಪಾಲಿಕೆ ಆಯುಕ್ತೆ ಎಂ.ಕೆ ಸವಿತಾ ಬಣ್ಣಿಸಿದ್ದಾರೆ.
ಈ ಕುರಿತು ಮಾಧ್ಯಮ ಪ್ರಕಟಣೆ ಮೂಲಕ ಅಧಿಕಾರಿ ವರ್ಗ, ಸಿಬ್ಬಂದಿಗಳ ಸೇವೆ ಶ್ಲಾಘಿಸಿರುವ ಪಾಲಿಕೆ ಆಯುಕ್ತೆ ಎಂ.ಕೆ ಸವಿತಾ, ಪ್ರೀತಿಯ ಮೈಸೂರು ಮಹಾನಗರ ಪಾಲಿಕೆಯ ಅಧಿಕಾರಿಗಳೇ, ಅಭಿಯಂತರರೇ, ಆರೋಗ್ಯ ನಿರೀಕ್ಷಕರೇ, ಪರಿಸರ ವಿಭಾಗದ ಸಿಬ್ಬಂದಿಯೇ, ಮೇಲ್ವಿಚಾರಕರೇ, ಪೌರಕಾರ್ಮಿಕರೇ, ವಾಹನ ಚಾಲಕರೇ ಹಾಗೂ ನಮ್ಮ ಪಾಲಿಕೆಯ ಸಮಸ್ತ ಸಿಬ್ಬಂದಿ ವರ್ಗದವರೇ, ಮೈಸೂರು ದಸರಾ ಮಹೋತ್ಸವ–2026ರ ಯಶಸ್ವಿ ಆಚರಣೆ ಹಾಗೂ ಇಡೀ ನಗರದ ಸ್ವಚ್ಛತೆಯನ್ನು ಕಾಪಾಡುವಲ್ಲಿ ಕಳೆದ ಒಂದು ತಿಂಗಳಿನಿಂದ ನೀವು ಸಲ್ಲಿಸಿರುವ ಸೇವೆ ನಿಜಕ್ಕೂ ಶ್ಲಾಘನೀಯ.
ನಿಮ್ಮೆಲ್ಲರ ಪರಿಶ್ರಮ, ಬದ್ಧತೆ, ಶಿಸ್ತು, ಸಮನ್ವಯ ಹಾಗೂ ತಂಡದ ಕಾರ್ಯವೈಖರಿಯ ಫಲವಾಗಿ ನಮ್ಮ ಸುಂದರ ಮೈಸೂರು ನಗರವು ದಸರಾ ಸಂದರ್ಭದಲ್ಲಿ ಸ್ವಚ್ಛತೆ ಮತ್ತು ನಗರ ನಿರ್ವಹಣೆಗಾಗಿ ಸಾರ್ವಜನಿಕರು, ಪ್ರವಾಸಿಗರು ಹಾಗೂ ಗಣ್ಯರಿಂದ ಅಪಾರ ಮೆಚ್ಚುಗೆಯನ್ನು ಗಳಿಸಿದೆ. ಇದು ನಮ್ಮೆಲ್ಲರಿಗೂ ಹೆಮ್ಮೆಯ ವಿಷಯ. ಈ ಮೆಚ್ಚುಗೆಯ ಸಂಪೂರ್ಣ ಶ್ರೇಯಸ್ಸು ನಿಮ್ಮೆಲ್ಲರಿಗೂ ಸಲ್ಲುತ್ತದೆ. ಮುಂಜಾನೆಯಿಂದ ತಡರಾತ್ರಿಯವರೆಗೆ, ಹಗಲು-ರಾತ್ರಿಯೆನ್ನದೆ, ಅನೇಕ ಸವಾಲುಗಳ ನಡುವೆಯೂ ನಗರದ ಸ್ವಚ್ಛತೆ ಮತ್ತು ಸೌಂದರ್ಯವನ್ನು ಕಾಪಾಡಲು ಶ್ರಮಿಸಿದ ನಿಮ್ಮ ಸೇವೆ ಅತ್ಯಂತ ಅಮೂಲ್ಯವಾದುದು .
ವಿಶೇಷವಾಗಿ, ನಮ್ಮ ಅಧಿಕಾರಿಗಳು, ಅಭಿಯಂತರರು, ವಲಯ ಮಟ್ಟದ ತಂಡಗಳು, ಆರೋಗ್ಯ ನಿರೀಕ್ಷಕರು, ಪರಿಸರ ವಿಭಾಗದ ಸಿಬ್ಬಂದಿ, ಮೇಲ್ವಿಚಾರಕರು, ಪೌರಕಾರ್ಮಿಕರು, ವಾಹನ ಚಾಲಕರು ಹಾಗೂ ಕಾರ್ಯಕ್ಷೇತ್ರದಲ್ಲಿ ನಿಸ್ವಾರ್ಥವಾಗಿ ದುಡಿದ ಪ್ರತಿಯೊಬ್ಬ ಸಿಬ್ಬಂದಿಗೂ ನನ್ನ ಹೃತ್ಪೂರ್ವಕ ಧನ್ಯವಾದಗಳು ಎಂದು ತಿಳಿಸಿದ್ದಾರೆ.
ಮೈಸೂರು ಮಹಾನಗರ ಪಾಲಿಕೆಯ ಆಯುಕ್ತೆಯಾಗಿ ಇಂತಹ ಸಮರ್ಪಣಾ ಮನೋಭಾವದ ತಂಡವನ್ನು ಮುನ್ನಡೆಸುತ್ತಿರುವುದಕ್ಕೆ ನನಗೆ ಅಪಾರ ಹೆಮ್ಮೆ ಇದೆ. ನಿಮ್ಮ ಪರಿಶ್ರಮ ನಮ್ಮ ನಗರದ ಗೌರವವನ್ನು ಹೆಚ್ಚಿಸಿದೆ ಹಾಗೂ ಜನರ ಸೇವೆಯಲ್ಲಿ ನಮ್ಮ ಸಾಮೂಹಿಕ ಜವಾಬ್ದಾರಿಯನ್ನು ಮತ್ತಷ್ಟು ಬಲಪಡಿಸಿದೆ ಎಂದು ಎಂ.ಕೆ ಸವಿತಾ ಅವರು ನುಡಿದಿದ್ದಾರೆ.
ದಸರಾ ಸಂದರ್ಭದಲ್ಲಿ ತೋರಿದ ಇದೇ ಉತ್ಸಾಹ, ಬದ್ಧತೆ, ಶಿಸ್ತು ಮತ್ತು ತಂಡದ ಮನೋಭಾವವನ್ನು ಮುಂದಿನ ದಿನಗಳಲ್ಲಿಯೂ ಮುಂದುವರಿಸೋಣ. ದಸರಾ ಸಮಯದಲ್ಲಿ ಮಾತ್ರವಲ್ಲದೆ, ವರ್ಷದ ಪ್ರತಿದಿನವೂ ನಮ್ಮ ಮೈಸೂರನ್ನು ಸ್ವಚ್ಛ, ಸುಂದರ, ಆರೋಗ್ಯಕರ ಹಾಗೂ ಮಾದರಿ ನಗರವನ್ನಾಗಿ ಉಳಿಸೋಣ. ಮೈಸೂರಿನ ಸ್ವಚ್ಛತೆ ನಮ್ಮೆಲ್ಲರ ಹೆಮ್ಮೆ; ನಮ್ಮ ತಂಡದ ಸಮರ್ಪಣೆ ನಮ್ಮ ಶಕ್ತಿ.
ನಿಮ್ಮೆಲ್ಲರ ಅಮೂಲ್ಯ ಸೇವೆ, ಪರಿಶ್ರಮ ಮತ್ತು ಅತ್ಯುತ್ತಮ ಕೊಡುಗೆಗೆ ಮತ್ತೊಮ್ಮೆ ಹೃದಯಪೂರ್ವಕ ಧನ್ಯವಾದಗಳು. ಮೈಸೂರು ಮಹಾನಗರ ಪಾಲಿಕೆಯ ಪ್ರತಿಯೊಬ್ಬ ಸಿಬ್ಬಂದಿಗೂ ನನ್ನ ಅಭಿನಂದನೆಗಳು ಹಾಗೂ ಶುಭ ಹಾರೈಕೆಗಳು ಎಂದಿದ್ದಾರೆ.










