ಮೈಸೂರು,ಅಕ್ಟೋಬರ್,21,2026 (www.justkannada.in): ವಿಶ್ವವಿಖ್ಯಾತ ಮೈಸೂರು ದಸರಾ ಜಂಬೂ ಸವಾರಿ ಮೆರವಣಿಗೆಯ ದಿನದಂದು ನಡೆಯುವ ಪಾರಂಪರಿಕ ವಜ್ರಮುಷ್ಠಿ ಕಾಳಗದ ಸಿದ್ಧತೆಯಲ್ಲಿ ಅವ್ಯವಸ್ಥೆ ಉಂಟಾಗಿದೆ ಎಂಬ ಆರೋಪ ಕೇಳಿಬಂದಿದೆ.
ದಸರಾ ಸಂದರ್ಭದಲ್ಲಿ ದೇವಿಯ ಪ್ರಾರ್ಥನೆ ಸಲ್ಲಿಸಿ, ಸಂಪ್ರದಾಯದಂತೆ ವಜ್ರಮುಷ್ಟಿ ಕಾಳಗದಲ್ಲಿ ಭಾಗವಹಿಸುವುದು ಜಟ್ಟಿ ಜನಾಂಗದ ಕುಸ್ತಿಪಟುಗಳ ಪಾರಂಪರಿಕ ಆಚರಣೆಯಾಗಿದೆ. ಆದರೆ, ಇಂದು ಬೆಳಗ್ಗೆ ಏಳು ಗಂಟೆಯಿಂದಲೂ ದೇವಸ್ಥಾನದ ಬಾಗಿಲು ತೆರೆಯದ ಹಿನ್ನೆಲೆಯಲ್ಲಿ ಕುಸ್ತಿಪಟುಗಳು ಸಿದ್ಧತೆ ಮಾಡಿಕೊಳ್ಳಲಾಗದೆ ಪರದಾಡುವಂತಾಗಿದೆ.
ದೇವಸ್ಥಾನದ ಬಾಗಿಲು ತೆರೆಯುವ ನಿರೀಕ್ಷೆಯಲ್ಲಿ ಜಟ್ಟಿ ಜನಾಂಗದ ಕುಸ್ತಿಪಟುಗಳು ಬಾಗಿಲ ಬಳಿಯೇ ಕಾಯುತ್ತಿದ್ದು, ಸಮಯಕ್ಕೆ ಸರಿಯಾಗಿ ಧಾರ್ಮಿಕ ವಿಧಿವಿಧಾನಗಳನ್ನು ಪೂರ್ಣಗೊಳಿಸಿ ಕಾಳಗದಲ್ಲಿ ಭಾಗವಹಿಸಲು ಸಾಧ್ಯವಾಗುತ್ತದೆಯೇ ಎಂಬ ಆತಂಕ ಎದುರಾಗಿದೆ.
ದಸರಾ ಸಂಪ್ರದಾಯದ ಭಾಗವಾಗಿರುವ ವಜ್ರಮುಷ್ಟಿ ಕಾಳಗ ನಿಗದಿತ ಸಮಯಕ್ಕೆ ನಡೆಯದಿದ್ದರೆ ಅಪಶಕುನವಾಗಬಹುದು ಎಂಬ ಆತಂಕವನ್ನು ಜಟ್ಟಿ ಜನಾಂಗದವರು ವ್ಯಕ್ತಪಡಿಸಿದ್ದಾರೆ. ಪಾರಂಪರಿಕ ಆಚರಣೆಗೆ ಸಂಬಂಧಿಸಿದ ಸಿದ್ಧತೆಗಳಲ್ಲಿನ ಈ ಅವ್ಯವಸ್ಥೆ ಅವರಲ್ಲಿ ತೀವ್ರ ಕಳವಳ ಮೂಡಿಸಿದೆ.
ದಸರಾ ಮಹೋತ್ಸವದ ಪ್ರಮುಖ ಪಾರಂಪರಿಕ ಆಚರಣೆಗಳಲ್ಲಿ ಒಂದಾದ ವಜ್ರಮುಷ್ಟಿ ಕಾಳಗಕ್ಕೆ ಸಂಬಂಧಿಸಿದ ವ್ಯವಸ್ಥೆಗಳು ಸಮಯಕ್ಕೆ ಸರಿಯಾಗಿ ನಡೆಯಬೇಕೆಂಬುದು ಜಟ್ಟಿ ಜನಾಂಗದವರ ಒತ್ತಾಯವಾಗಿದೆ.
Key words: Mysuru Dasara, preparations,Vajramushti,






