ಮೈಸೂರು,ಅಕ್ಟೋಬರ್,21,2026 (www.justkannada.in): ವಿಶ್ವ ವಿಖ್ಯಾತ ಮೈಸೂರು ದಸರಾದ ಪ್ರಮುಖ ಆಕರ್ಷಣೆ ಐತಿಹಾಸಿಕ ಜಂಬೂಸವಾರಿ ಮೆರವಣಿಗೆಗೆ ಕ್ಷಣಗಣನೆ ಆರಂಭವಾಗಿದ್ದು ಕಣ್ತುಂಬಿಕೊಳ್ಳಲು ಲಕ್ಷಾಂತರ ಜನರು ಕಾತರರಾಗಿದ್ದಾರೆ.
ಇಂದು ಸಂಜೆ 4.10ಕ್ಕೆ ಚಿನ್ನದ ಅಂಬಾರಿಯಲ್ಲಿ ವೀರಾಜಮಾನಳಾಗುವ ತಾಯಿ ಚಾಮುಂಡೇಶ್ವರಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಸಿಎಂ ಡಿಕೆ ಶಿವಕುಮಾರ್ ಜಂಬೂಸವಾರಿ ಮೆರವಣಿಗೆಗೆ ಚಾಲನೆ ನೀಡಲಿದ್ದಾರೆ. ಸಂಜೆ 04:10ರಿಂದ 04:35ರವರೆಗಿನ ಶುಭ ಮೀನ ಲಗ್ನದಲ್ಲಿ ಚಿನ್ನದ ಅಂಬಾರಿಗೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಇತರು ಗಣ್ಯರು ಪುಷ್ಪಾರ್ಚನೆ ಮಾಡುವ ಮೂಲಕ ಜಂಬೂ ಸವಾರಿಗೆ ಚಾಲನೆ ಸಿಗಲಿದೆ.
ಮೊದಲ ಬಾರಿಗೆ ಪ್ರಶಾಂತ ಆನೆ 750 ಕೆಜಿ ತೂಕದ ಚಿನ್ನದ ಅಂಬಾರಿ ಹೊತ್ತು ಮೆರವಣಿಗೆಯಲ್ಲಿ ಸಾಗಲಿದ್ದಾನೆ. ಕಲಾತಂಡಗಳು, ವಿವಿಧ ಇಲಾಖೆಯ ಸ್ತಬ್ದಚಿತ್ರಗಳು ಜಂಬೂಸವಾರಿ ಮೆರವಣಿಗೆಗೆ ಮೆರುಗು ಹೆಚ್ಚಿಸಲಿವೆ. 
ಜಂಬೂಸವಾರಿ ಮೆರವಣಿಗೆಗೆ ಚಾಲನೆಗೂ ಮುನ್ನ ಸಿಎಂ ಡಿ.ಕೆ. ಶಿವಕುಮಾರ್ ಅವರು ಅಂಬಾವಿಲಾಸ ಅರಮನೆ ಆವರಣದಲ್ಲಿ ಜೋಡಿ ನಂದಿಧ್ವಜ ಸ್ತಂಭಕ್ಕೆ ಪೂಜೆ ಸಲ್ಲಿಸುವ ಮೂಲಕ ಮೆರವಣಿಗೆಗೆ ಚಾಲನೆ ನೀಡಲಿದ್ದಾರೆ.
ಈ ಬಾರಿ ಚಿನ್ನದ ಅಂಬಾರಿ ಹೊರುವ ಪ್ರಮುಖ ಆಕರ್ಷಣೆಯಾಗಿರುವ ಪ್ರಶಾಂತ ಆನೆಗೆ ವಿಶೇಷ ಸಿದ್ಧತೆಗಳನ್ನು ಮಾಡಲಾಗುತ್ತಿದೆ. ಪ್ರಶಾಂತನಿಗೆ ಈ ಹಿಂದೆ 18 ಬಾರಿ ಮೆರವಣಿಗೆಯಲ್ಲಿ ಭಾಗವಹಿಸಿದ ಅನುಭವವಿದ್ದು ಅಂಬಾರಿ ಹೊರಲು ಸಜ್ಜಾಗುತ್ತಿದ್ದಾನೆ.











