ಮಂಡ್ಯ, ಅಕ್ಟೋಬರ್,17,2026 (www.justkannada.in): “ಮುಂದಿನ ಬಜೆಟ್ ನಲ್ಲಿ ಮೇಕೆದಾಟು ಅಣೆಕಟ್ಟು ಯೋಜನೆಗೆ ಸೂಕ್ತ ಅನುದಾನ ಮೀಸಲಿಡಲಾಗುವುದು. ಅರಣ್ಯ ಇಲಾಖೆಗೆ ಸೇರಿದ 5000 ಹೆಕ್ಟೇರ್ ಭೂಮಿಗೆ ಪರ್ಯಾಯ ಭೂಮಿಯನ್ನು ಒದಗಿಸಲು ಈಗಾಗಲೇ ವ್ಯವಸ್ಥೆ ಮಾಡಲು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಸಮಿತಿಯನ್ನು ರಚಿಸಲಾಗಿದೆ. ಭೂಮಿ ಪೂಜೆಗೆ ಸಿದ್ಧತೆಯನ್ನು ಮಾಡಿಕೊಳ್ಳಲಾಗುತ್ತಿದೆ” ಎಂದು ಸಿಎಂ ಡಿ ಕೆ ಶಿವಕುಮಾರ್ ಅವರು ತಿಳಿಸಿದರು.
ಕೆಆರ್ ಎಸ್ ನ ಬೃಂದಾವನ ಉದ್ಯಾನದಲ್ಲಿ ನಡೆದ ಕಾವೇರಿ ಆರತಿ ಕಾರ್ಯಕ್ರಮಕ್ಕೆ ಸಿಎಂ ಡಿಕೆ ಶಿವಕುಮಾರ್ ಅವರು ಚಾಲನೆ ನೀಡಿದರು.
“ಕಾವೇರಿ ಆರತಿಯು ಎರಡನೇ ವರ್ಷಕ್ಕೆ ಕಾಲಿಟ್ಟಿದ್ದು, ಉಪಕಾರ ಸ್ಮರಣೆ ಮಾಡಲು ಕಾವೇರಿ ಆರತಿ ಕಾರ್ಯಕ್ರಮವನ್ನು ಪ್ರಾರಂಭ ಮಾಡಲಾಯಿತು. ತಾಯಿ ಜನ್ಮ ನೀಡಿದರೆ ಕಾವೇರಿ ತಾಯಿ ಅನ್ನ ನೀಡುತ್ತಿದ್ದಾಳೆ. ಕಾವೇರಿ ತಾಯಿಯ ಮಡಿಲಲ್ಲಿ ಮಗು ಬೆಳೆದರೆ, ಇಡೀ ಕರುನಾಡು ಬೆಳೆಯುತ್ತದೆ. ನಾವು ಕಾವೇರಿಯ ಅಭಿವೃದ್ಧಿಗೆ, ಪ್ರತಿ ಹನಿ ಉಳಿಸಲು ಹೋರಾಟ ಮಾಡಿಕೊಂಡು ಬಂದಿದ್ದೇವೆ” ಎಂದರು.
“ಕಾವೇರಿ ನಮ್ಮ ಸಂಸ್ಕೃತಿ, ಪ್ರಕೃತಿ ಹಾಗೂ ನಮ್ಮ ಬದುಕಿನ ದೊಡ್ಡ ಶಕ್ತಿ. ಇದನ್ನು ಯಾರೂ ಅಲ್ಲಗಳೆಯಲು ಸಾಧ್ಯವಿಲ್ಲ. ನೀರು ಉಳಿದರೆ ನಾಡು ಉಳಿಯುತ್ತದೆ. ಕಾವೇರಿ ಉಳಿದರೆ ಕರುನಾಡು ಉಳಿಯುತ್ತದೆ ಎಂದು ನಾವೆಲ್ಲ ಒಪ್ಪಿಕೊಂಡಿದ್ದೇವೆ” ಎಂದು ಹೇಳಿದರು.
ಕಾವೇರಿ ಸಮೃದ್ಧಿಯ ಸಂಕೇತ
“ಚಾಮುಂಡೇಶ್ವರಿ ಶಕ್ತಿಯ ಸಂಕೇತವಾದರೆ ಕಾವೇರಿ ಸಮೃದ್ಧಿಯ ಸಂಕೇತ. ನಮ್ಮ ನಾಡಿನ ಸಂಸ್ಕೃತಿಗೆ ನಮನ ಸಲ್ಲಿಸಲು ಕಾವೇರಿ ಆರತಿ ಕಾರ್ಯಕ್ರಮವನ್ನು ಪ್ರಾರಂಭಿಸಲಾಯಿತು. ಮುಂದಿನ ದಿನಗಳಲ್ಲಿಯೂ ಎಲ್ಲಾ ಸರ್ಕಾರಗಳು, ಸಾರ್ವಜನಿಕರು, ಇಲಾಖೆಗಳು ಇದನ್ನು ಉಳಿಸಿ ಬೆಳೆಸಿಕೊಂಡು ಹೋಗಬೇಕು” ಎಂದರು.
“ಜಲ ಎಲ್ಲರ ಜೀವ. ಜೀವ ಜಲಕ್ಕೆ ನಮನ ಸಲ್ಲಿಸುವ ಕೆಲಸವನ್ನು ಮಾಡಬೇಕು, ಉಪಕಾರ ಸ್ಮರಣೆ ಸಲ್ಲಿಸಬೇಕು. ಕಾವೇರಿ ಹುಟ್ಟಿ, ಸಮುದ್ರ ಸೇರುವವರೆಗೂ ಅದೆಷ್ಟೋ ನಗರ, ಜನರು ಉದ್ಯಮಗಳಿಗೆ ರಕ್ಷಣೆಯಾಗಿದೆ” ಎಂದು ತಿಳಿಸಿದರು.
“ಕನ್ನಂಬಾಡಿ ಕಟ್ಟೆ 347 ಕಿ.ಮೀ ಉದ್ದ, 37147 ಎಕರೆ ಭೂಮಿಗೆ ನೀರಾವರಿಯು ಒದಗಿಸುತ್ತಿದೆ. ಹಿಂದೆ ನಾನು ಜಲ ಸಂಪನ್ಮೂಲ ಸಚಿವನಾದ್ದ ಸಂದರ್ಭದಲ್ಲಿ ಮಂಡ್ಯ ಹಾಗೂ ಮೈಸೂರು ಜಿಲ್ಲಾಧಿಕಾರಿಗಳಿಗೆ ಜವಾಬ್ದಾರಿ ನೀಡಿ ಅಳತೆ ಮಾಡುವ ಕೆಲಸವನ್ನು ವಹಿಸಲಾಗಿತ್ತು. ಈಗಾಗಲೇ ಇದರ ಗುರುತನ್ನು ಕೂಡ ಮಾಡಲಾಗಿದೆ. ಕಳೆದ ವರ್ಷ 341 ಟಿಎಂಸಿ ನೀರು ಸಮುದ್ರದ ಪಾಲಾಯಿತು. 177 ಟಿಎಂಸಿ ತಮಿಳುನಾಡಿಗೆ ಹರಿಸಬೇಕಿತ್ತು . ಈ ವರ್ಷ ದೇಶದಲ್ಲಿ ಭೀಕರ ಬರಗಾಲ ಎದುರಾಗಿದೆ ರಾಜ್ಯದಲ್ಲಿ ಕೃಷ್ಣ ಅಣೆಕಟ್ಟು ಬಿಟ್ಟರೆ ಬೇರೆ ಯಾವ ಅಣೆಕಟ್ಟು ತುಂಬಿಲ್ಲ” ಎಂದರು.
ಅಣೆಕಟ್ಟಿನ ಹೂಳು ತೆಗೆಸಲಾಗುವುದು
“ಕೇಂದ್ರ ಜಲಶಕ್ತಿ ಸಚಿವರನ್ನು ಭೇಟಿ ಮಾಡಿ ಆಂಧ್ರಪ್ರದೇಶ ತೆಲಂಗಾಣ ಹಾಗೂ ನಾನು ಸೇರಿ ಭೇಟಿ ಮಾಡಿದ ಸಂದರ್ಭದಲ್ಲಿ ಕಾವೇರಿ ಮತ್ತು ತುಂಗಭದ್ರ ಜಲಾಶಯಗಳಿಂದ ಹೂಳು ತೆಗೆಯಲು ಟೆಂಡರ್ ಕರೆಯಲು ಸೂಚಿಸಿದ್ದಾರೆ.ಆಂಧ್ರ ಪ್ರದೇಶ ಹಾಗೂ ತೆಲಂಗಾಣದಲ್ಲಿ ಈಗಾಗಲೇ ಹೂಳು ತೆಗೆಯುವ ಕಾರ್ಯಕ್ರಮ ಪ್ರಾರಂಭವಾಗಿದ್ದು, ಡ್ರಜ್ಜಿಂಗ್ ಮೆಶೀನ್ ತರಿಸಿ ಹೂಳು ತೆಗೆಸಿ, ಮರಳು ಹಾಗೂ ಮಣ್ಣನ್ನು ರೈತರಿಗೆ ಒದಗಿಸುವ ಕೆಲಸ ಮಾಡಲಾಗುತ್ತಿದೆ. ಸದ್ಯದಲ್ಲಿಯೇ ನಾನು ಹಾಗೂ ನೀರಾವರಿ ಸಚಿವರು ತೆಲಂಗಾಣಕ್ಕೆ ಭೇಟಿ ನೀಡಿ ಈ ಯೋಜನೆಯನ್ನು ವೀಕ್ಷಿಸಿ ನೀರು ವ್ಯರ್ಥವಾಗದಂತೆ ಪ್ರಯತ್ನ ಮಾಡಲಾಗುವುದು” ಎಂದರು.
ಪರಂಪರೆ ಕಾಪಾಡಲು ಕಾವೇರಿ ಆರತಿ ಕಾರ್ಯಕ್ರಮ
“ಕಳೆದ ವರ್ಷ ಕಾವೇರಿ ಆರತಿ ಕಾರ್ಯಕ್ರಮವನ್ನು ಪ್ರಾರಂಭಿಸಿದಾಗ ಹಲವಾರು ಟೀಕೆಗಳು ವ್ಯಕ್ತವಾಯಿತು. ಕೆಲವರು ನ್ಯಾಯಾಲಯಕ್ಕೂ ಹೋದರು. ಕಾವೇರಿ ಆರತಿ ಯೋಜನೆ ಅಡಿ 100 ಕೋಟಿ ಹಣವನ್ನು ಮೀಸಲಿಟ್ಟು, ಕೆಳ ಭಾಗದಲ್ಲಿ ತೆರೆದ ಸ್ಟೇಡಿಯಂ ನಿರ್ಮಿಸಿ ಪ್ರತಿ ವಾರ ಆರತಿ ನಡೆದು ಜನರಿಗೆ ಧಾರ್ಮಿಕ ಶ್ರದ್ಧೆ ಮೂಡಿಸಲು, ಪರಂಪರೆ ಕಾಪಾಡಲು ಪ್ರಯತ್ನಿಸಲಾಯಿತು.” ಎಂದರು
ಟೀಕೆಗಳನ್ನು ಸಂತೋಷದಿಂದ ಸ್ವೀಕರಿಸುತ್ತೇನೆ
“ನಾನು ಟೀಕೆಗಳನ್ನು ಸ್ವಾಗತಿಸುವವನು. ಟೀಕೆಗಳು ಸಾಯುತ್ತವೆ ಕೆಲಸಗಳು ಉಳಿಯುತ್ತವೆ ಎಂದು ನಂಬಿರುವವನು . ರಾಜಕಾರಣ ಮಾಡುವವರಿಗೆ ವೈರಿಗಳು ಇರಬೇಕು, ಟೀಕೆ ಮಾಡುವವರೂ ಇರಬೇಕು. ವೈರಿಗಳು ಇಲ್ಲದಿದ್ದರೆ ಎಚ್ಚರಿಕೆಯಿಂದ ಬದುಕು ಮತ್ತು ಆಳ್ವಿಕೆಯನ್ನು ನಡೆಸಲು ಸಾಧ್ಯವಿಲ್ಲ. ಟೀಕೆ, ಅವಹೇಳನಗಳನ್ನು ಸಂತೋಷದಿಂದ ಸ್ವೀಕರಿಸುತ್ತೇನೆ. ಬದುಕಿನಲ್ಲಿ ನನಗೆ ಕಷ್ಟವೂ, ಗೊತ್ತು ಸುಖವು ಗೊತ್ತು. ರಾಜ್ಯದ ಜನತೆಗೆ ಸೇವೆ ಮಾಡಲು ರಾಜ್ಯದ ಜನತೆ ನನ್ನ ಹಾಗೂ ಸಿದ್ದರಾಮಯ್ಯನವರ ನಾಯಕತ್ವದಲ್ಲಿ 136 ಸ್ಥಾನಗಳನ್ನು ಕೊಟ್ಟು ಸೇವೆ ಮಾಡುವ ಅವಕಾಶವನ್ನು ಕಲ್ಪಿಸಿದ್ದಾರೆ” ಎಂದರು. 
ರಾಜ್ಯದ ಅಭಿವೃದ್ಧಿಯನ್ನು ವಿರೋಧಿಸುವವರಿಗೆ ಕಾವೇರಿ ಸದ್ಬುದ್ಧಿ ಕೊಡಲಿ
“ರಾಜ್ಯದ ಅಭಿವೃದ್ಧಿಯನ್ನು ವಿರೋಧ ಮಾಡುವವರಿಗೆ ಕಾವೇರಿ ತಾಯಿ ಸದ್ಬುದ್ಧಿಯನ್ನು ಕೊಡಲಿ” ಎಂದರು.
ಎಷ್ಟು ಉಳಿ ಏಟು ಬಿದ್ದರೂ ಈ ಕಲ್ಲು ಜಗ್ಗಲು ಸಾಧ್ಯವಿಲ್ಲ
“ಹಿಂದೆ ಕಾಂಗ್ರೆಸ್ ಜೆಡಿಎಸ್ ಹಾಗೂ ಬಿಜೆಪಿ ಸರ್ಕಾರಗಳು 45 ಸಾವಿರ ಕೋಟಿ ರೂ.ಗಳಷ್ಟು ಸಾಲ ಮನ್ನಾ ಮಾಡಿದ್ದರು. ನಾನು ಗ್ಯಾರಂಟಿ ಯೋಜನೆಗಳ ಅಡಿ ಇದುವರೆಗೂ 160 ಕೋಟಿಗೂ ಹೆಚ್ಚು ಹಣವನ್ನು ನೇರವಾಗಿ ಕೊಟ್ಟು, ಜನರ ಬದುಕಿನಲ್ಲಿ ದೊಡ್ಡ ಬದಲಾವಣೆಯನ್ನು ತರಲಾಗಿದೆ. ಟೀಕೆ ಮಾಡುವವರು ಮಾಡಲಿ, ಅಸೂಯೆ ಪಡುವವರು ಪಟ್ಟುಕೊಳ್ಳಲಿ. ನನ್ನನ್ನು ಕೆಲವರು ಕನಕಪುರದ ಬಂಡೆ ಎಂದು ಕರೆಯುತ್ತಾರೆ. ಬಂಡೆ ಪ್ರಕೃತಿ, ಅದನ್ನು ಕಡೆದರೆ ಆಕೃತಿ, ಪೂಜಿಸಿದರೆ ಸಂಸ್ಕೃತಿ. ಕೆತ್ತನೆ ಮಾಡಿ ದೇವಿಯನ್ನು ರೂಪಿಸಿರುವುದಕ್ಕೆ ಪೂಜೆ ಮಾಡಲು ಸಾಧ್ಯವಾಗಿದೆ. ಎಷ್ಟು ಉಳಿ ಏಟು ಬಿದ್ದರೂ ಈ ಕಲ್ಲು ಜಗಲು ಸಾಧ್ಯವಿಲ್ಲ. ರಾಜ್ಯದ ಜನರ ಋಣವನ್ನು ತೀರಿಸಲು ಕಂಕಣಬದ್ಧನಾಗಿದ್ದೇನೆ. ಶಪಥ, ಸಂಕಲ್ಪವನ್ನು ಮಾಡಿದ್ದೇನೆ. ಮೇಕೆದಾಟು ಅಣೆಕಟ್ಟು ವಿಚಾರದಲ್ಲಿ ಪಾದಯಾತ್ರೆ ಕೈಗೊಂಡಾಗ ಅನೇಕರು ಇದು ಸಾಧ್ಯವೇ ಎಂದು ಪ್ರಶ್ನಿಸಿದ್ದರು. ಎಲ್ಲರ ಪ್ರಾರ್ಥನೆಯಿಂದ ನಮ್ಮ ಅ ವಧಿಯಲ್ಲಿಯೇ ಸುಪ್ರೀಂ ಕೋರ್ಟ್ ಅಣೆಕಟ್ಟು ಕಟ್ಟಲು ಅನುಮತಿಯನ್ನು ಕೊಟ್ಟಿದೆ” ಎಂದರು
ಕಟ್ಟಕಡೆಯ ರೈತನಿಗೆ ನೀರು ಒದಗಿಸಲಾಗುತ್ತಿದೆ
“ನಮ್ಮ ವಿಚಾರಗಳು ಜನರ ಬದುಕಿಗೋಸ್ಕರವಾಗಿದೆ. ಇಡೀ ವಿಶ್ವ ಇಂದು ಬೆಂಗಳೂರಿನತ್ತ ನೋಡುತ್ತಿದ್ದು ಬೆಂಗಳೂರಿಗೆ ಕಾವೇರಿ ನೀರು ಸರಬರಾಜು ಮಾಡುತ್ತಿದ್ದೇವೆ. ಈಗ 6 ನೇ ಹಂತವನ್ನು ತಲುಪಿದೆ. ರೈತರಿಗೆ ನೀರು ಕೊಡಲು ಕಿಂಚಿತ್ತು ಸಮಸ್ಯೆಯಾಗದಂತೆ ಕಟ್ಟ ಕಡೆಯ ರೈತನಿಗೆ ನೀರು ಒದಗಿಸಿಕೊಂಡು ಬರುತ್ತಿದ್ದೇವೆ” ಎಂದರು.
“ಕಾವೇರಿಗೆ ಆರತಿ ಬೆಳಗುತ್ತಿರುವುದು ನಮ್ಮ ಪುಣ್ಯ. ಪವಿತ್ರ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದು ಕೂಡ ಎಲ್ಲರ ಭಾಗ್ಯ”ಎಂದು ಹೇಳಿದರು
ಕಾವೇರಿ ಆರತಿ ಕರ್ನಾಟಕಕ್ಕೆ ಕೀರ್ತಿ
“ಮೈಸೂರಿನ ಶಕ್ತಿ ದೇವತೆ ಚಾಮುಂಡೇಶ್ವರಿಯ ಆಶೀರ್ವಾದ ಪಡೆಯಲು ಆರಾಧನೆ ನಡೆಸುತ್ತಿದ್ದೇವೆ. ಕಾವೇರಿ ಜಲಾನಯನ ಪ್ರದೇಶದಲ್ಲಿ 3.87 ಕೋಟಿ ಜನರಿಗೆ ಬದುಕು ನೀಡಿದೆ. ಕಾವೇರಿ ಆರತಿ ಕರ್ನಾಟಕಕ್ಕೆ ಕೀರ್ತಿ. ಮನುಷ್ಯತ್ವವನ್ನು ರಕ್ಷಣೆ ಮಾಡಲು ನಾವೆಲ್ಲರೂ ಸೇರಿದ್ದೇವೆ. ನೀರನ್ನು ಸೃಷ್ಟಿಸಲು ಸಾಧ್ಯವಿಲ್ಲ. ಭಗವಂತನಲ್ಲಿ ಪ್ರಾರ್ಥನೆ ಮಾಡಿರುವ ಫಲವಾಗಿ ಕಾವೇರಿ ತುಂಬಿ ರಾಜ್ಯಕ್ಕೆ ಶಕ್ತಿ ಕೊಡಲಿ. ಕೊಡಗಿನಲ್ಲಿ ಕಾವೇರಿ ಹುಟ್ಟಿ ಸಮುದ್ರ ಸೇರುವವರೆಗೆ ಲಕ್ಷಾಂತರ ಜನರಿಗೆ ಬದುಕು ನೀಡುತ್ತಿದ್ದಾಳೆ. ಕಾವೇರಿ ನಮ್ಮ ಬದುಕಿನೊಂದಿಗೆ ಬೆಸೆದುಕೊಂಡಿದೆ” ಎಂದರು.
Key words: Funds, construction, Mekedatu dam, upcoming budget, CM D.K. Shivakumar






