ಮೈಸೂರು, ಸೆಪ್ಟಂಬರ್,29, 2026 (www.justkannada.in): ಪ್ರೀತಿಸುವಂತೆ ನಿರಂತರವಾಗಿ ದುಂಬಾಲು ಬಿದ್ದಿದ್ದ ಯುವಕನೊಬ್ಬ ಯುವತಿಯನ್ನು ಪೆಟ್ರೋಲ್ ಸುರಿದು ತಬ್ಬಿಕೊಂಡು ಬೆಂಕಿ ಹಚ್ಚಿಕೊಂಡಿರುವ ಭೀಕರ ಘಟನೆ ಮೈಸೂರಿನ ವಿಜಯನಗರದಲ್ಲಿ ನಡೆದಿದೆ.
ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಹಲಗೂರು ಗ್ರಾಮದ ಚಂದನ್ (27) ಕೃತ್ಯ ಎಸಗಿದ ಯುವಕ ಎಂದು ಗುರುತಿಸಲಾಗಿದೆ. ಅದೇ ಗ್ರಾಮದ ಡಿಪ್ಲೊಮಾ ಎಂಜಿನಿಯರಿಂಗ್ ವಿದ್ಯಾರ್ಥಿನಿಯನ್ನು ಚಂದನ್ ಏಕಪಕ್ಷೀಯವಾಗಿ ಪ್ರೀತಿಸುತ್ತಿದ್ದ ಎನ್ನಲಾಗಿದೆ.
ವಿಜಯನಗರದಲ್ಲಿರುವ ಹಾಸ್ಟೆಲ್‌ನಿಂದ ಕಾಲೇಜಿಗೆ ತೆರಳುತ್ತಿದ್ದ ವಿದ್ಯಾರ್ಥಿನಿಯನ್ನು ಹಾಸ್ಟೆಲ್ ನಿಂದ ಅನತಿ ದೂರದಲ್ಲಿ ಚಂದನ್ ತಡೆದಿದ್ದಾನೆ. ಬಳಿಕ ಪ್ರೀತಿಸುವಂತೆ ಒತ್ತಾಯಿಸಿ, ಏಕಾಏಕಿ ಆಕೆಯ ಮೇಲೆ ಪೆಟ್ರೋಲ್ ಸುರಿದು, ತಾನೂ ಪೆಟ್ರೋಲ್ ಸುರಿದುಕೊಂಡು ಆಕೆಯನ್ನು ತಬ್ಬಿಕೊಂಡು ಬೆಂಕಿ ಹಚ್ಚಿಕೊಂಡಿದ್ದಾನೆ ಎನ್ನಲಾಗಿದೆ.
ಘಟನೆಯಿಂದ ಬೆಚ್ಚಿಬಿದ್ದ ಯುವತಿ ಚಂದನ್‌ನಿಂದ ತಪ್ಪಿಸಿಕೊಂಡಿದ್ದು, ಶೇ.20ರಷ್ಟು ಸುಟ್ಟ ಗಾಯಗಳಾಗಿವೆ. ಆಕೆಯನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಇತ್ತ ಚಂದನ್ ಗೆ ಶೇ.80ರಷ್ಟು ಸುಟ್ಟ ಗಾಯಗಳಾಗಿದ್ದು, ಮೈಸೂರಿನ ಕೆ.ಆರ್. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಆತನ ಸ್ಥಿತಿ ಗಂಭೀರವಾಗಿದ್ದು, ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾನೆ ಎಂದು ತಿಳಿದುಬಂದಿದೆ.
ಘಟನೆ ಸಂಬಂಧ ವಿಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.






