ಚಿತ್ರದುರ್ಗ, ಸೆಪ್ಟಂಬರ್,24,2026 (): ತಮಿಳುನಾಡಿಗೆ ಕಾವೇರಿ ನೀರು ಬಿಡುವ ವಿಚಾರವಾಗಿ ರಾಜ್ಯ ಸರ್ಕಾರ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಲಿದೆ ಎಂದು ಸಿಎಂ ಡಿ.ಕೆ ಶಿವಕುಮಾರ್ ತಿಳಿಸಿದರು.
ಚಿತ್ರದುರ್ಗದಲ್ಲಿ ಮಾತನಾಡಿದ ಸಿಎಂ ಡಿಕೆ ಶಿವಕುಮಾರ್ ಅವರು, ನೀರಿದ್ದರೆ ಬಿಡುತ್ತೇವೆ. ಆದರೆ ನಮಗೂ ಒಳಹರಿವು ನಿಂತುಹೋಗಿದೆ. ಮಳೆ ಕೂಡ ನಿಂತಿದೆ. ಈ ವಿಚಾರದಲ್ಲಿ ನಮ್ಮ ಮೇಲೆ ಸಾಕಷ್ಟು ಒತ್ತಡವಿದೆ. ನೀರಿನ ಪರಿಸ್ಥಿತಿಯನ್ನು ಪರಿಶೀಲಿಸಿ, ನೀರಾವರಿ ಸಚಿವರೊಂದಿಗೆ ಚರ್ಚಿಸಿದ ಬಳಿಕ ಮುಂದಿನ ಕ್ರಮದ ಬಗ್ಗೆ ತಿಳಿಸುತ್ತೇನೆ” ಎಂದು ಹೇಳಿದರು.
ರೈತರ ಹಿತ ಕಾಪಾಡುತ್ತೇವೆ
“ರಾಜ್ಯದಲ್ಲಿ ಬರಗಾಲದ ಪರಿಸ್ಥಿತಿ ನಿರ್ಮಾಣವಾಗಿರುವ ಹಿನ್ನೆಲೆಯಲ್ಲಿ ರೈತರಿಗೆ ಯಾವ ರೀತಿಯಲ್ಲಿ ನೆರವು ನೀಡಬೇಕು ಹಾಗೂ ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಯಾವ ರೀತಿಯ ಸಹಕಾರ ಅಗತ್ಯವಿದೆ ಎಂಬುದರ ಕುರಿತು ರೂಪುರೇಷೆ ಸಿದ್ಧಪಡಿಸಬೇಕಾಗಿದೆ. ಈ ವಿಚಾರಗಳ ಕುರಿತು ವಿಧಾನಸಭೆಯಲ್ಲಿಯೂ ಚರ್ಚೆ ನಡೆದಿದೆ. ಸರ್ಕಾರ ಅಗತ್ಯ ಕ್ರಮಗಳ ಬಗ್ಗೆ ಚರ್ಚಿಸಲಿದೆ” ಎಂದರು.
“ಸರ್ವಪಕ್ಷ ನಿಯೋಗದೊಂದಿಗೆ ಕೇಂದ್ರ ಸರ್ಕಾರದ ಗಮನ ಸೆಳೆಯುವ ವಿಚಾರದಲ್ಲಿ ವಿರೋಧ ಪಕ್ಷದ ನಾಯಕರು ಸಹಕಾರ ನೀಡುತ್ತಿರುವುದಕ್ಕೆ ಅಭಿನಂದನೆ ಸಲ್ಲಿಸುತ್ತೇನೆ” ಎಂದರು.
“ಕಸ್ತೂರಿ ರಂಗನ್ ವರದಿ ಹಾಗೂ ಪಶ್ಚಿಮ ಘಟ್ಟಗಳ ಸಂರಕ್ಷಣೆಗೆ ಸಂಬಂಧಿಸಿದ ವಿಚಾರದಲ್ಲಿ ಮಲೆನಾಡು ಮತ್ತು ಕರಾವಳಿ ಭಾಗದ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ರಾಜ್ಯ ಸರ್ಕಾರ ಕೈಗೊಂಡಿರುವ ನಿರ್ಣಯಕ್ಕೆ ವಿವಿಧ ಪಕ್ಷಗಳ ನಾಯಕರು ಸಹಮತ ವ್ಯಕ್ತಪಡಿಸಿದ್ದಾರೆ. ಸರ್ಕಾರ ರೈತರ ಹಿತಕ್ಕಾಗಿ ಕೆಲಸ ಮಾಡುತ್ತಿದೆ. ನಮ್ಮ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದೇವೆ. ರಾಜ್ಯದ ಜನರು ನಮ್ಮ ಮೇಲೆ ನಂಬಿಕೆ ಇಟ್ಟಿದ್ದಾರೆ. ಆ ನಂಬಿಕೆ ಉಳಿಸಿಕೊಂಡು ಜನಹಿತ ಕಾಪಾಡುವ ಕೆಲಸ ಮಾಡುತ್ತಿದ್ದೇವೆ ಎಂದು ಹೇಳಿದರು.
ಗ್ಯಾರಂಟಿ ಯೋಜನೆಗಳು ಬಡವರ ಪರವಾಗಿವೆ
ಗ್ಯಾರಂಟಿ ಯೋಜನೆಗಳ ಪರಿಷ್ಕೃರಣೆ ಬಗ್ಗೆ ಬಿಜೆಪಿ ನಾಯಕರ ಹೇಳಿಕೆ ಬಗ್ಗೆ ಕೇಳಿದಾಗ, “ಗ್ಯಾರಂಟಿ ಯೋಜನೆಗಳನ್ನು ಪರಿಷ್ಕರಿಸಿ, ಸೌಲಭ್ಯಗಳನ್ನು ಬಡವರಿಗೆ ಮಾತ್ರ ನೀಡುವಂತೆ ಬಿಜೆಪಿ ಶಾಸಕ ಸುರೇಶ್ ಗೌಡ ಸೇರಿದಂತೆ ಕೆಲವು ವಿರೋಧ ಪಕ್ಷಗಳ ಶಾಸಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ವಿವಿಧ ನಾಯಕರಿಗೆ ತಮ್ಮದೇ ಆದ ಅಭಿಪ್ರಾಯಗಳಿವೆ. ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರಲು ಸಾಧ್ಯವಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಬಿಜೆಪಿಯ ಹಲವು ಕೇಂದ್ರ ಸಚಿವರು ಹಾಗೂ ನಾಯಕರು ಈ ಹಿಂದೆ ಹೇಳಿದ್ದರೂ, ರಾಜ್ಯ ಸರ್ಕಾರ ಮಾತ್ರ ಬಡವರ ಪರವಾಗಿ ನೆರವು ನೀಡುವ ಕಾರ್ಯವನ್ನು ಮುಂದುವರಿಸಲಿದೆ” ಎಂದರು.
ಕೆಪಿಎಸ್‌ಸಿ ಪರೀಕ್ಷೆ: ಅರ್ಹರಿಗೆ ನ್ಯಾಯ ಸಿಗಬೇಕು
ಕೆಪಿಎಸ್ ಸಿ ವಿಚಾರವಾಗಿ ಕೇಳಿದ ಪ್ರಶ್ನೆಗೆ, “ಕೆಪಿಎಸ್‌ಸಿ ವಿಚಾರದಲ್ಲಿಯೂ ಹಲವು ಹಿರಿಯ ನಾಯಕರು ತಮ್ಮ ಅಭಿಪ್ರಾಯಗಳನ್ನು ಸರ್ಕಾರದ ಗಮನಕ್ಕೆ ತಂದಿದ್ದಾರೆ. ಉಗ್ರಪ್ಪ, ಬಿ ಎಲ್ ಶಂಕರ್, ಸುದರ್ಶನ್, ರಾಣಿ ಸತೀಶ್ ಸೇರಿದಂತೆ ಸುಮಾರು 20–30 ಮಂದಿ ನಾಯಕರು ಈ ಕುರಿತು ತಮ್ಮ ಅಭಿಪ್ರಾಯ ತಿಳಿಸಿದ್ದಾರೆ. ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರ ಹೇಳಿಕೆಯನ್ನೂ ಗಮನಿಸಿದ್ದೇನೆ” ಎಂದು ಹೇಳಿದರು.
“ಕೆಪಿಎಸ್‌ಸಿ ನೇಮಕಾತಿ ಹಾಗೂ ಪರೀಕ್ಷೆಗಳಿಗೆ ಸಂಬಂಧಿಸಿದಂತೆ ಕಾನೂನು ಚೌಕಟ್ಟನ್ನು ಪರಿಶೀಲಿಸಲಾಗುವುದು. ಪರೀಕ್ಷೆ ನಡೆಸುವ ಅಧಿಕಾರಿಗಳು ಹಾಗೂ ಸದಸ್ಯರು ಯಾವುದೇ ಒತ್ತಡಕ್ಕೆ ಒಳಗಾಗದೆ ವಿದ್ಯಾರ್ಥಿಗಳಿಗೆ ನ್ಯಾಯ ಒದಗಿಸುವುದು ಮುಖ್ಯ. ಒತ್ತಡಗಳನ್ನು ಮೀರಿ ಸ್ಪರ್ಧಾತ್ಮಕವಾಗಿ ಪರೀಕ್ಷೆ ಬರೆದು ಉತ್ತಮ ಅಂಕ ಗಳಿಸಿರುವವರಿಗೆ ನ್ಯಾಯ ಸಿಗಬೇಕು. ಪರೀಕ್ಷೆ ಮತ್ತು ಸಂದರ್ಶನವನ್ನು ಪರಿಶುದ್ಧವಾಗಿ ನಡೆಸುವುದು ಸಂಬಂಧಪಟ್ಟವರ ಜವಾಬ್ದಾರಿ. ಹಿಂದೆ ನಡೆದಿರುವ ಹಲವು ಘಟನೆಗಳ ಹಿನ್ನೆಲೆಯಲ್ಲಿ ಈ ಬಗ್ಗೆ ಕೆಲವರು ಸಲಹೆಗಳನ್ನು ನೀಡಿದ್ದಾರೆ. ಕಾನೂನು ಚೌಕಟ್ಟಿನಲ್ಲಿ ಎಲ್ಲವನ್ನೂ ಪರಿಶೀಲಿಸಿ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು” ಎಂದು ಹೇಳಿದರು.
“ವಿಧಾನ ಪರಿಷತ್ ಚುನಾವಣೆ ಇರುವ ಕಾರಣಕ್ಕೆ ಚುನಾವಣಾ ಆಯೋಗ ದಿನಾಂಕ ನಿಗದಿಪಡಿಸಿದೆ. ಈ ಹಿನ್ನೆಲೆಯಲ್ಲಿ ಸರ್ಕಾರಿ ಕಾರ್ಯಕ್ರಮಗಳನ್ನು ರದ್ದುಪಡಿಸಲಾಗಿದೆ. ಹಿರಿಯೂರು ಹಾಗೂ ಚಿತ್ರದುರ್ಗ ಭಾಗದಲ್ಲಿ ನಡೆದಿರುವ ಭದ್ರಾ ಮೇಲ್ದಂಡೆ ಕಾಮಗಾರಿಗಳು ಮತ್ತು ನೀರು ಹರಿಸಿದ ಹಿನ್ನೆಲೆಯಲ್ಲಿ ರೈತರು ಅಭಿನಂದನಾ ಕಾರ್ಯಕ್ರಮ ಆಯೋಜಿಸಿದ್ದರು” ಎಂದರು.
Key words: Cauvery water, Tamil Nadu, appeal, court, CM, D.K. Shivakumar






