ಬೆಂಗಳೂರು,ಸೆಪ್ಟಂಬರ್,24,2026 (www.justkannada.in) ರಾಜ್ಯದ ಕೈಗಾರಿಕಾ ವಲಯಕ್ಕೆ ಹೆಚ್ಚು ಬಂಡವಾಳ ಆಕರ್ಷಿಸಲು ಸಿಂಗಪುರ ಪ್ರವಾಸ ಕೈಗೊಂಡಿರುವ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ್ ಅವರು ತಕ್ರಾಲ್ ಕಾರ್ಪೊರೇಷನ್, ನಾರ್ಡಿಕ್ ಫ್ಲೋ ಕಂಟ್ರೋಲ್, ಜಾಪ್ಫಾ, ಎಸ್ಎಟಿಎಸ್ ಮತ್ತು ಎಸ್.ಟಿ ಎಂಜಿನಿಯರಿಂಗ್ ಕಂಪನಿಗಳ ಜತೆ ಮಾತುಕತೆ ನಡೆಸಿದ್ದಾರೆ. ಇದಕ್ಕೆ ಪೂರಕವಾಗಿ ಅಲ್ಲಿ ಸಕ್ರಿಯವಾಗಿರುವ ಸಿಂಗಪುರ್ ಭಾರತೀಯ ವಾಣಿಜ್ಯ ಮತ್ತು ಕೈಗಾರಿಕಾ ಒಕ್ಕೂಟದ (ಎಸ್ಐಸಿಸಿಐ) ಪ್ರತಿನಿಧಿಗಳೊಂದಿಗೂ ಅವರು ವಿಚಾರ ವಿನಿಮಯ ನಡೆಸಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿರುವ ಸಚಿವ ಎಂ.ಬಿ ಪಾಟೀಲ್ ಅವರು, ಎಸ್.ಟಿ. ಟ್ರಿಗ್ನೊಮೇಟ್ರಿ ವೈಮಾಂತರಿಕ್ಷ ಕ್ಷೇತ್ರದಲ್ಲಿ ಹೆಸರು ಮಾಡಿದ್ದು, ನಿರ್ವಹಣೆ ಮತ್ತು ದುರಸ್ತಿಯಲ್ಲಿ (ಎಂಆರ್ ಒ) ಪ್ರಪಂಚದ ದೊಡ್ಡ ಕಂಪನಿಯಾಗಿದೆ. ಸಂಸ್ಥೆಯು ಭಾರತದಲ್ಲಿ ನೆಲೆಯೂರಲು ಬಯಸಿದ್ದು, ರಾಜ್ಯದ ಏರೋಸ್ಪೇಸ್ ವ್ಯವಸ್ಥೆ ಮತ್ತು ನೀತಿಯನ್ನು ಮನದಟ್ಟು ಮಾಡಿಕೊಡಲಾಗಿದೆ ಎಂದಿದ್ದಾರೆ.
ಈಗಾಗಲೇ ಬೆಂಗಳೂರಿನಲ್ಲಿ ಕಾರ್ಗೋ ನಿರ್ವಹಣೆ, ಶೀತಲಗೃಹಗಳು, ಏರ್ ಪೋರ್ಟ್ ಲಾಜಿಸ್ಟಿಕ್ಸ್ ಮತ್ತು ಉಗ್ರಾಣಗಳಲ್ಲಿ ಕ್ರಿಯಾಶೀಲವಾಗಿರುವ ಎಸ್ಎಟಿಎಸ್ ತನ್ನ ಸಾಮರ್ಥ್ಯ ವಿಸ್ತರಣೆಗೆ ಆಸಕ್ತಿ ವ್ಯಕ್ತಪಡಿಸಿದೆ. ಈ ಸಂಬಂಧ ಈಗಾಗಲೇ ಬಿಐಎಎಲ್ ಜತೆ ಚರ್ಚೆ ಪ್ರಗತಿಯಲ್ಲಿದೆ ಎಂದು ಅವರು ಹೇಳಿದ್ದಾರೆ.
ಎಸ್ಎಟಿಎಸ್ ಕೂಡ ನಮ್ಮಲ್ಲಿ ಸುಸಜ್ಜಿತ ತರಬೇತಿ ಅಕಾಡೆಮಿ ಸ್ಥಾಪಿಸುವ ಒಲವು ವ್ಯಕ್ತಪಡಿಸಿದೆ. ಇದರ ಮೂಲಕ ತನ್ನ ವೈಮಾನಿಕ ಮತ್ತು ಲಾಜಿಸ್ಟಿಕ್ಸ್ ಚಟುವಟಿಕೆಗಳಿಗೆ ಬೇಕಾದ ಕೌಶಲ್ಯಗಳನ್ನು ಅದು ಒದಗಿಸಲಿದೆ ಎಂದು ಸಚಿವ ಎಂ.ಬಿ ಪಾಟೀಲ್ ಅವರು ಮಾಹಿತಿ ನೀಡಿದ್ದಾರೆ.
ಪಶು ಆಹಾರ ತಯಾರಿಕೆ ಮತ್ತು ಆಹಾರ ಸಂಸ್ಕರಣೆ ಕ್ಷೇತ್ರದ ಜಾಪ್ಫಾ ಕಂಪನಿಯು ರಾಜ್ಯದಲ್ಲಿ ಫೀಡ್ ಮಿಲ್ ಮತ್ತು ಆಹಾರ ಸಂಸ್ಕರಣೆ ಸ್ಥಾವರ ನಿರ್ಮಾಣಕ್ಕೆ ಆಸಕ್ತಿ ತಾಳಿದೆ. ಇದಕ್ಕೆ ರಾಜ್ಯದಲ್ಲಿ ಇರುವ ಸೂಕ್ತ ಸ್ಥಳಗಳ ಕುರಿತು ಚರ್ಚಿಸಲಾಗಿದೆ ಎಂದು ಅವರು ನುಡಿದಿದ್ದಾರೆ.
ವಾಲ್ವ್ ಮತ್ತು ಸಾಗರ ವಾಹನೋದ್ಯಮದಲ್ಲಿ ಹೆಸರಾಗಿರುವ ನಾರ್ಡಿಕ್ ಫ್ಲೋ ಕಂಟ್ರೋಲ್ ಜತೆ ಕೂಡ ರಾಜ್ಯಕ್ಕೆ ಭೇಟಿ ನೀಡಿ, ನಮ್ಮಲ್ಲಿರುವ ತಯಾರಿಕಾ ಮತ್ತು ಎಂಜಿನಿಯರಿಂಗ್ ಪರಿವ್ಯವಸ್ಥೆಯ ಅಧ್ಯಯನ ಮಾಡುವಂತೆ ಕೋರಲಾಗಿದೆ ಎಂದು ಸಚಿವ ಎಂ.ಬಿ ಪಾಟೀಲ ವಿವರಿಸಿದ್ದಾರೆ.
ಈಗಾಗಲೇ ಬೆಂಗಳೂರಿನಲ್ಲಿ ನೆಲೆ ಹೊಂದಿರುವ ತಕ್ರಾಲ್ ಕಾರ್ಪೊರೇಷನ್, ಡ್ರೋನ್ ಕ್ಷೇತ್ರದಲ್ಲಿ ಸ್ಕೈಲಾರ್ಕ್ ಡ್ರೋನ್ಸ್ ಮೂಲಕ ಮಾಡಿರುವ ಹೂಡಿಕೆ ಕುರಿತು ಮಾಹಿತಿ ಹಂಚಿಕೊಂಡಿದೆ. ಇಲ್ಲಿ ಹೆಚ್ಚಿನ ಸಹಭಾಗಿತ್ವ ಕುರಿತು ಚರ್ಚಿಸಲಾಗಿದೆ. ತಮ್ಮ ಒಂದು ಕಂಪನಿಯು ಕರ್ನಾಟಕದಲ್ಲಿ ಉತ್ಪಾದನಾ ಘಟಕ ಸ್ಥಾಪಿಸುವ ಆಸಕ್ತಿ ಹೊಂದಿರುವ ವಿಚಾರವನ್ನು ಗಮನಕ್ಕೆ ತಂದಿದೆ ಎಂದು ಸಚಿವ ಎಂ.ಬಿ ಪಾಟೀಲ್ ನುಡಿದಿದ್ದಾರೆ.
ಮಾತುಕತೆಯಲ್ಲಿ ತಕ್ರಾಲ್ ಕಂಪನಿಯ ಸತ್ಬೀರ್ ಸಿಂಗ್ ಮತ್ತು ಸತ್ಪಾಲ್ ಸಿಂಗ್, ನಾರ್ಡಿಕ್ ಸಮೂಹದ ಡೋರ್ಕಾಸ್ ಟಿಯೊ, ಜಾಪ್ಫಾ ಪ್ರತಿನಿಧಿಗಳಾದ ಬಿಲ್ಲಿ ಥಾಮ್, ಸಿಂಥಾ ಲಿಮ್, ಎಸ್ಎಟಿಎಸ್ ಸಿಇಒ ಬಾಬ್ ಚೀ, ವೆಂಡಿ ಲೋ, ಯಿನ್ ಫನ್ ಥಿಮ್, ಎಸ್ ಟಿ ಎಂಜಿನಿಯರಿಂಗ್ ಪರವಾಗಿ ಅದರ ಮುಖ್ಯಸ್ಥ ಕೆವಿನ್ ಚೌ ಮಾತುಕತೆಗಳಲ್ಲಿ ಭಾಗವಹಿಸಿದ್ದರು.
ರಾಜ್ಯ ಸರಕಾರದ ನಿಯೋಗದಲ್ಲಿ ಕೈಗಾರಿಕಾ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್ ಮತ್ತಿತರು ಉಪಸ್ಥಿತರಿದ್ದರು.
Key words: Minister, M.B. Patil, Singapore, tour







