ಮೈಸೂರು,ಸೆಪ್ಟಂಬರ್,12,2026 (www.justkannada.in): ಸತೀಶ್ ಜಾರಕಿಹೊಳಿ ವಿರುದ್ಧದ ಜಾರಿ ನಿರ್ದೇಶನಾಲಯದ (ED) ಕಾರ್ಯಾಚರಣೆಗೆ ಮೈಸೂರಿನಲ್ಲಿ ಸಿಕ್ಕಿದ್ದ ಎನ್ನಲಾದ ರಹಸ್ಯ ಡೈರಿಯೇ ಪ್ರಮುಖ ಕಾರಣ ಎಂಬ ಮಾಹಿತಿ ಇದೀಗ ಮುನ್ನೆಲೆಗೆ ಬಂದಿದೆ.
ಮೂರು ತಿಂಗಳ ಹಿಂದೆಯೇ ಬಲೆ ಬೀಸಿದ್ದ ED ಅಧಿಕಾರಿಗಳು, ಜೂನ್ 26ರಂದು ಮೈಸೂರಿನ ದಟ್ಟಗಳ್ಳಿಯಲ್ಲಿರುವ ಸತೀಶ್ ಜಾರಕಿಹೊಳಿ ಅವರ ಬಾಮೈದ ಮಂಜುನಾಥ್ ನಿವಾಸದ ಮೇಲೆ ದಾಳಿ ನಡೆಸಿದ್ದರು. ಎರಡು ದಿನಗಳ ಕಾಲ ನಡೆದ ತಲಾಶ್ ವೇಳೆ ಡೈರಿ ಸೇರಿದಂತೆ ಹಲವು ಮಹತ್ವದ ದಾಖಲೆಗಳನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದರು ಎನ್ನಲಾಗಿದೆ.
ಡೈರಿಯಲ್ಲಿದ್ದ ಹಲವು ಸ್ಫೋಟಕ ಮಾಹಿತಿಗಳು ಅಧಿಕಾರಿಗಳನ್ನೇ ಬೆಚ್ಚಿಬೀಳಿಸಿದ್ದವು ಎಂಬ ಮಾತು ಕೇಳಿಬರುತ್ತಿದೆ. ಮೈಸೂರು ಮನೆಯಲ್ಲಿ ನೂರಾರು ಬಾರ್ ಲೈಸೆನ್ಸ್ ಗಳು, ಬೆಳಗಾವಿ, ಗೋವಾ ಹಾಗೂ ಮಹಾರಾಷ್ಟ್ರದಲ್ಲಿನ ಆಸ್ತಿಗಳ ವಿವರಗಳು ಪತ್ತೆಯಾಗಿದ್ದವು ಎನ್ನಲಾಗಿದೆ.
ಅಲ್ಲದೆ, ಕರ್ನಾಟಕ–ಕೇರಳ ಗಡಿಯ ಬಾವಲಿ ಚೆಕ್ ಪೋಸ್ಟ್ ಬಳಿ ಅಕ್ರಮ ಮದ್ಯದಂಗಡಿ ವ್ಯವಹಾರಕ್ಕೆ ಸಂಬಂಧಿಸಿದ ಮಾಹಿತಿಯೂ ಡೈರಿಯಲ್ಲಿ ದಾಖಲಾಗಿತ್ತು ಎನ್ನಲಾಗುತ್ತಿದೆ.
ಎರಡು ದಿನಗಳ ತಲಾಶ್ ಬಳಿಕ ಡೈರಿ ಹಾಗೂ ದಾಖಲೆಗಳನ್ನು ತಮ್ಮೊಂದಿಗೆ ಕೊಂಡೊಯ್ದಿದ್ದ ED ಅಧಿಕಾರಿಗಳು, ಇದೀಗ ಅದರಲ್ಲಿನ ಮಾಹಿತಿಯ ಆಧಾರದಲ್ಲಿ ಮುಂದಿನ ತನಿಖೆ ನಡೆಸುತ್ತಿದ್ದಾರೆ ಎನ್ನಲಾಗಿದೆ.
ಮೈಸೂರಿನಲ್ಲಿ ಸಿಕ್ಕ ಡೈರಿ ಇದೀಗ ರಾಜಕೀಯ ವಲಯದಲ್ಲಿ ಭಾರೀ ಕುತೂಹಲಕ್ಕೆ ಕಾರಣವಾಗಿದೆ






