ಮೈಸೂರು,ಸೆಪ್ಟಂಬರ್,12,2026 (www.justkannada.in): ಗಣೇಶ ಹಬ್ಬ ಆಚರಣೆ ವೇಳೆ ಕಠಿಣ ಷರತ್ತುಗಳನ್ನ ವಿಧಿಸಲಾಗುತ್ತಿದೆ. ಇದು ಸರಿಯಲ್ಲ. ರಾಜ್ಯದಲ್ಲಿರುವುದು ಹಿಂದೂ ವಿರೋಧಿ ಸರ್ಕಾರ ಎಂದು ಮೈಸೂರು-ಕೊಡಗು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ತಿಳಿಸಿದರು.
ಮೈಸೂರಿನಲ್ಲಿ ಮಾತನಾಡಿದ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಗಣೇಶ ಕೂರಿಸೋದಕ್ಕೆ ಮೆರವಣಿಗೆ ಮಾಡೋದಕ್ಕೆ ಷರತ್ತುಗಳು ಹೊಸದಲ್ಲ. ಕಳೆದ 3 ವರ್ಷಗಳಿಂದಲೂ ಈ ಸರ್ಕಾರ ಇದನ್ನೇ ಮಾಡಿಕೊಂಡು ಬಂದಿದೆ. ಹಿಂದೂಗಳು ಹಬ್ಬ ಆಚರಿಸಲು ಕಠಿಣ ಷರತ್ತನ್ನು ಹಾಕುತ್ತಾರೆ. ಇದು ಸರಿಯಲ್ಲ. ತಿ.ನರಸೀಪುರದಲ್ಲಿ ಮಸೀದಿ ರೋಡ್ ನಲ್ಲಿ ಮೆರವಣಿಗೆ ಹೋಗಬೇಡಿ ಅಂತಾರೆ. ಎಲ್ಲಾ ಬೀದಿಗಳಲ್ಲಿ ಮೆರವಣಿಗೆ ಮಾಡಬಹುದು. ದೇವಸ್ಥಾನ ಇದೆ ಮೆರವಣಿಗೆ ಹೋಗದು ಬೇಡ, ಮಸೀದಿ ಇದೆ ಮೆರವಣಿಗೆ ಹೋಗೋದು ಬೇಡ ಅನ್ನೋದು ಸರಿಯಲ್ಲ. ಮಸೀದಿಗೋಸ್ಕರ ಆ ರಸ್ತೆಯಲ್ಲೇ ಹೋಗಬೇಡಿ ಅನ್ನೋದು ಸೂಕ್ತವಲ್ಲ. ಇವರೇ ಜನರಲ್ಲಿ ಇಲ್ಲದ ಭಾವನೆ ತುಂಬುತ್ತಾರೆ. ಚಾಮುಂಡಿ ಬೆಟ್ಟದ ವಿಚಾರದಲ್ಲೂ ಹೀಗೆ ನಡೆದುಕೊಂಡರು. ಚಾಮುಂಡಿ ಹಿಂದೂಗಳದ್ದಲ್ಲ. ಜಾತ್ಯಾತೀತ ಅಂದರು. ಈ ಸರ್ಕಾರಗಳಿಂದ ನಾವು ಬೇರೇನು ನಿರೀಕ್ಷೆ ಮಾಡಲು ಸಾಧ್ಯವಿಲ್ಲ ಎಂದರು.
ವಿರೋಧದ ನಡುವೆಯೂ ಕಂಬಳ ಆಯೋಜನೆ
ಮೈಸೂರು ದಸರಾದಲ್ಲಿ ಕಂಬಳ ಆಯೋಜನೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಂಸದ ಯದುವೀರ್, ಕಂಬಳಕ್ಕೆ ನಾವು ವಿರೋಧಿಗಳಲ್ಲ. ಆದರೆ ದಸರಾದಲ್ಲಿ ಬೇಡ ಅಂತ ಹೇಳಿದವು. ವಿರೋಧದ ನಡುವೆಯೂ ಕಂಬಳ ಮಾಡುತ್ತಿದ್ದಾರೆ. ಕರಾವಳಿ ಭಾಗದ ಅವಿಭಾಜ್ಯ ಅಂಗ ಕಂಬಳ . ನಾವು ಕೂಡ ಅದನ್ನು ಗೌರವದಿಂದ ಕಾಣುತ್ತೇವೆ. ಮೈಸೂರಿನಲ್ಲಿ ಕಂಬಳ ತಂದು ಮೈಸೂರು ಹಾಗೂ ಕರಾವಳಿ ನಡುವೆ ಭಿನ್ನಾಭಿಪ್ರಾಯ ತರುವ ಯತ್ನ ಇದಾಗಿದೆ ಎಂದು ಟೀಕಿಸಿದರು.
ದಸರಾದಲ್ಲಿ ಚಲನಚಿತ್ರೋತ್ಸವ ರದ್ದು ಖಂಡನೀಯ
ದಸರಾದಲ್ಲಿ ಚಲನಚಿತ್ರೋತ್ಸವ ರದ್ದು ಮಾಡಿರುವ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಂಸದ ಯದುವೀರ್, ದಸರಾದಲ್ಲಿ ಚಲನಚಿತ್ರೋತ್ಸವ ರದ್ದು ಮಾಡಿರೋದು ಖಂಡನೀಯ. ಎಲ್ಲರೂ ಕೂಡ ಚಲನಚಿತ್ರ ನೋಡುತ್ತಿದ್ದರು. ಹೊಸ ಪ್ರೇಕ್ಷಕರು ನಿರ್ದೇಶಕರಿಗೆ ಅವಕಾಶ ಸಿಕ್ಕಿತ್ತು. ಹೀಗಾಗಿ ದಸರಾದಲ್ಲಿ ಚಲನಚಿತ್ರೋತ್ಸವ ರದ್ದು ಮಾಡಿರೋದು ಸರಿಯಲ್ಲ ಎಂದು ಆಕ್ಷೇಪಿಸಿದರು.
ಕಸ್ತೂರಿ ರಂಗನ್ ವರದಿಗೆ ಪರಿಹಾರ ಬೇಕಿದೆ, ಹೋರಾಟ ಅಥವಾ ವಿರೋಧ ಅಲ್ಲ
ಕಸ್ತೂರಿ ರಂಗನ್ ವರದಿ ವಿರೋಧಿಸಿ ಕೊಡಗಿನಲ್ಲಿ ಪ್ರತಿಭಟನೆ ವಿಚಾರ ಕುರಿತು ಮಾತನಾಡಿದ ಸಂಸದ ಯದುವೀರ್, ಕಸ್ತೂರಿ ರಂಗನ್ ವರದಿ ವಿಚಾರದಲ್ಲಿ ಜನರ ಪರ ನಾವು ಇದ್ದೇವೆ. ಕರಡು ಅಧಿಸೂಚನೆ ಅನುಷ್ಠಾನ ಮಾಡಲು ಸಾಧ್ಯವಿಲ್ಲ. ಹೀಗಾಗಿ ನಾವು ಕೂಡ ಸರ್ಕಾರದ ಪರವಿದ್ದೇವೆ. ಇದು 7 ನೇ ಕರಡು ಅಧಿಸೂಚನೆ. ಬಹುಶಃ 8. 9ನೇ ಕರಡು ಅಧಿಸೂಚನೆಯು ಬರಬಹುದು. ಈ ಬಗ್ಗೆ ರಾಜ್ಯ ಸರ್ಕಾರ ಜನರ ಗ್ರಾಮ ಸಭೆಗಳನ್ನು ಮಾಡಿ ಅಭಿಪ್ರಾಯ ಸಂಗ್ರಹಿಸಬೇಕು. ವರದಿ ನೀಡಬೇಕು. ಈ ಬಗ್ಗೆ ರಾಜ್ಯ ಸರ್ಕಾರ ಏನು ಮಾಡುತ್ತಿಲ್ಲ. ಕೇವಲ ವಿರೋಧ ಮಾಡೋದು, ರಾಜ್ಯ ಸರ್ಕಾರ ಸಲಹೆಗಳನ್ನೇ ಕೊಡುತ್ತಿಲ್ಲ. ಕಸ್ತೂರಿ ರಂಗನ್ ವರದಿಗೆ ಪರಿಹಾರ ಬೇಕಿದೆ. ಹೋರಾಟ ಅಥವಾ ವಿರೋಧ ಅಲ್ಲ ಎಂದು ರಾಜ್ಯ ಸರ್ಕಾರದ ನಿಲುವಿನ ವಿರುದ್ಧ ಸಂಸದ ಯದುವೀರ್ ಕಿಡಿ ಕಾರಿದರು.







