ಕೆ.ಶೆಟ್ಟಿಹಳ್ಳಿ ಆರೋಗ್ಯ ಕೇಂದ್ರದ ಕಾರ್ಯವೈಖರಿಗೆ ಜಪಾನ್ ತಂಡ ಮೆಚ್ಚುಗೆ — ಹೊಸ ತಂತ್ರಜ್ಞಾನದ ಲಸಿಕಾ ವ್ಯವಸ್ಥೆ ಪರಿಚಯ
ಮಂಡ್ಯ, ಆ.೨೮,೨೦೨೬ : ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕೆ.ಶೆಟ್ಟಿಹಳ್ಳಿ ಗ್ರಾಮ ಇದೀಗ ಅಂತಾರಾಷ್ಟ್ರೀಯ ಗಮನ ಸೆಳೆದಿದೆ. ಗ್ರಾಮದಲ್ಲಿ ಆರೋಗ್ಯ ಇಲಾಖೆಯ ಕಾರ್ಯಕ್ರಮಗಳ ಅನುಷ್ಠಾನ ಹಾಗೂ HPV, TT ಲಸಿಕಾ ಅಭಿಯಾನಕ್ಕೆ ಕೈಗೊಂಡಿರುವ ಸಿದ್ಧತೆಗಳನ್ನು ಪರಿಶೀಲಿಸಲು ಜಪಾನ್‌ನ 30 ಮಂದಿಯ ನಿಯೋಗ ಕೆ.ಶೆಟ್ಟಿಹಳ್ಳಿಗೆ ಭೇಟಿ ನೀಡಿದೆ.

ಸುಜುಕಿ ಸಂಸ್ಥೆಯ ಸಿಇಒ ತೋಷಿಹಿರೋ ಸುಜುಕಿ ನೇತೃತ್ವದ ಜಪಾನ್ ತಂಡ ಆಗಸ್ಟ್ 28ರಂದು ಕೆ.ಶೆಟ್ಟಿಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ, ಅಲ್ಲಿನ ಆರೋಗ್ಯ ಸೌಲಭ್ಯಗಳು, ಲಸಿಕಾ ವ್ಯವಸ್ಥೆ ಹಾಗೂ ವೈದ್ಯಕೀಯ ಸಿಬ್ಬಂದಿಯ ಕಾರ್ಯವೈಖರಿ ಕುರಿತು ಮಾಹಿತಿ ಪಡೆದುಕೊಂಡಿತು.
ಆರೋಗ್ಯ ಕೇಂದ್ರದ ವೈದ್ಯರು ಹಾಗೂ ಸಿಬ್ಬಂದಿಯೊಂದಿಗೆ ಸಂವಾದ ನಡೆಸಿದ ನಿಯೋಗ, ಗ್ರಾಮೀಣ ಭಾಗದಲ್ಲಿ ಆರೋಗ್ಯ ಸೇವೆಗಳನ್ನು ಜನರಿಗೆ ತಲುಪಿಸುವ ವಿಧಾನ, ಲಸಿಕಾ ಕಾರ್ಯಕ್ರಮಗಳ ಅನುಷ್ಠಾನ ಹಾಗೂ ಸಾರ್ವಜನಿಕರ ಸ್ಪಂದನೆ ಕುರಿತು ಮಾಹಿತಿ ಪಡೆದಿದೆ.
ಶಾಲೆಯಲ್ಲಿ HPV, TT ಲಸಿಕಾ ಅಭಿಯಾನದ ಪ್ರಾತ್ಯಕ್ಷಿಕೆ
ಆರೋಗ್ಯ ಕೇಂದ್ರದ ಭೇಟಿಯ ಬಳಿಕ ಜಪಾನ್ ನಿಯೋಗ ಕೆ.ಶೆಟ್ಟಿಹಳ್ಳಿ ಹೈಯರ್ ಪ್ರೈಮರಿ ಹಾಗೂ ಹೈಸ್ಕೂಲ್‌ಗೆ ಭೇಟಿ ನೀಡಿತು. ಇಲ್ಲಿ HPV, TT ಲಸಿಕಾ ಅಭಿಯಾನದ ಪ್ರಾತ್ಯಕ್ಷಿಕೆ, ಲಸಿಕೆ ನೀಡುವ ಪ್ರಕ್ರಿಯೆ ಹಾಗೂ ಲಸಿಕೆಯ ಕುರಿತು ಕೈಗೊಳ್ಳಲಾಗುತ್ತಿರುವ ಜಾಗೃತಿ ಚಟುವಟಿಕೆಗಳ ಬಗ್ಗೆ ಅಧಿಕಾರಿಗಳು ನಿಯೋಗಕ್ಕೆ ವಿವರಿಸಿದರು.

ಆರೋಗ್ಯ ಮತ್ತು ಶಿಕ್ಷಣ ಇಲಾಖೆಯ ಅಧಿಕಾರಿಗಳ ಸಮನ್ವಯದಲ್ಲಿ ಕಾರ್ಯಕ್ರಮ ರೂಪಿಸಲಾಗಿದ್ದು, ಅನ್ವಯವಾಗುವ ಮಾರ್ಗಸೂಚಿಗಳು ಹಾಗೂ ಅಗತ್ಯ ಸುರಕ್ಷತಾ ಕ್ರಮಗಳನ್ನು ಪಾಲಿಸಿಕೊಂಡು ಲಸಿಕಾ ಅಭಿಯಾನ ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ.
ಶೇ.100ರಷ್ಟು ಕಾರ್ಯಕ್ರಮಗಳ ಅನುಷ್ಠಾನವೇ ಆಯ್ಕೆಗೆ ಕಾರಣ!
ಕೆ.ಶೆಟ್ಟಿಹಳ್ಳಿ ಪಿಎಚ್‌ಸಿಯನ್ನು ಜಪಾನ್ ನಿಯೋಗದ ಭೇಟಿಗೆ ಆಯ್ಕೆ ಮಾಡಿರುವುದರ ಹಿಂದೆ ಆರೋಗ್ಯ ಇಲಾಖೆಯ ಕಾರ್ಯಕ್ರಮಗಳ ಪರಿಣಾಮಕಾರಿ ಅನುಷ್ಠಾನ ಪ್ರಮುಖ ಕಾರಣ ಎನ್ನಲಾಗಿದೆ.
ಈ ಕುರಿತು ಜಸ್ಟ್ ಕನ್ನಡ ಜೊತೆ ಮಾತನಾಡಿದ ಪಿಡಿಒ ಡಾ. ಶೋಭಾರಾಣಿ,
“ಆರೋಗ್ಯ ಇಲಾಖೆಯ ಎಲ್ಲಾ ಕಾರ್ಯಕ್ರಮಗಳು ಶೇ.100ರಷ್ಟು ಯಶಸ್ವಿಯಾಗಿ ಜಾರಿಯಾಗುತ್ತಿರುವ ಕಾರಣ ಕೆ.ಶೆಟ್ಟಿಹಳ್ಳಿ ಪಿಎಚ್‌ಸಿಯನ್ನು ಆಯ್ಕೆ ಮಾಡಲಾಗಿದೆ. ಇಲ್ಲಿನ ವೈದ್ಯರು ಹಾಗೂ ಸಿಬ್ಬಂದಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಗ್ರಾಮಸ್ಥರ ಮನವೊಲಿಸಿ ಪ್ರತಿಯೊಂದು ಆರೋಗ್ಯ ಕಾರ್ಯಕ್ರಮವನ್ನು ಶೇ.100ರಷ್ಟು ಅನುಷ್ಠಾನಗೊಳಿಸಲಾಗುತ್ತಿದೆ,” ಎಂದು ತಿಳಿಸಿದ್ದಾರೆ.
ಹಳೇ ಲಸಿಕಾ ಪದ್ಧತಿಗೆ ಗುಡ್‌ಬೈ — ಅಡ್ವಾನ್ಸ್ ಸಿಸ್ಟಂ!
ಇನ್ನು ಲಸಿಕಾ ಕಾರ್ಯಕ್ರಮಗಳ ನಿರ್ವಹಣೆಯಲ್ಲೂ ಹೊಸ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲಾಗುತ್ತಿದೆ.
ಈ ಹಿಂದೆ ಲಸಿಕೆಗಳನ್ನು ನೀಡಲು ಸಾಂಪ್ರದಾಯಿಕ ವ್ಯವಸ್ಥೆಯನ್ನು ಅನುಸರಿಸಲಾಗುತ್ತಿತ್ತು. ಆದರೆ ಈ ವ್ಯವಸ್ಥೆಯಲ್ಲಿ ಕೆಲವು ಮಿತಿಗಳಿದ್ದ ಹಿನ್ನೆಲೆಯಲ್ಲಿ ಇದೀಗ ಅಡ್ವಾನ್ಸ್ ಮೊಬೈಲ್ ವ್ಯಾಕ್ಸಿನೇಷನ್ ಸಿಸ್ಟಂ ಜಾರಿಗೆ ತರಲು ಮುಂದಾಗಲಾಗಿದೆ.
ಮಣಿಪಾಲ್ ಸಂಸ್ಥೆ ಮೊಬೈಲ್ ವ್ಯಾಕ್ಸಿನೇಷನ್ ಯೂನಿಟ್ ಒದಗಿಸಿದೆ. ಚಾರ್ಜ್ ಮಾಡಬಹುದಾದ ಈ ಯೂನಿಟ್ ಕನಿಷ್ಠ 78 ಗಂಟೆಗಳವರೆಗೆ ಚಾರ್ಜ್ ಉಳಿಸಿಕೊಳ್ಳುವ ಸಾಮರ್ಥ್ಯ ಹೊಂದಿದೆ ಎನ್ನಲಾಗಿದ್ದು, ವಿದ್ಯುತ್ ಸಂಪರ್ಕದ ಸಮಸ್ಯೆ ಇರುವ ಸಂದರ್ಭದಲ್ಲೂ ಲಸಿಕೆ ಸಂಗ್ರಹ ಹಾಗೂ ವಿತರಣಾ ವ್ಯವಸ್ಥೆಗೆ ನೆರವಾಗಲಿದೆ.
ಇದರ ಮತ್ತೊಂದು ವಿಶೇಷತೆ ಎಂದರೆ ಸೋಲಾರ್ ಪ್ಯಾನಲ್ ಮೂಲಕವೂ ಮರುಚಾರ್ಜ್ ಮಾಡಿಕೊಳ್ಳುವ ವ್ಯವಸ್ಥೆ. ಗ್ರಾಮೀಣ ಹಾಗೂ ದೂರದ ಪ್ರದೇಶಗಳಲ್ಲಿ ಲಸಿಕಾ ಕಾರ್ಯಕ್ರಮಗಳನ್ನು ನಿರಂತರವಾಗಿ ನಡೆಸಲು ಈ ತಂತ್ರಜ್ಞಾನ ಸಹಕಾರಿಯಾಗಲಿದೆ.
ಮಂಡ್ಯದ ಗ್ರಾಮದಿಂದ ಜಪಾನ್‌ಗೆ ತಲುಪಿದ ಆರೋಗ್ಯ ಮಾದರಿ!
ಒಟ್ಟಿನಲ್ಲಿ, ಸಾಮಾನ್ಯ ಗ್ರಾಮೀಣ ಆರೋಗ್ಯ ಕೇಂದ್ರವೊಂದು ಆರೋಗ್ಯ ಇಲಾಖೆಯ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಮೂಲಕ ಇದೀಗ ಜಪಾನ್ ನಿಯೋಗದ ಗಮನ ಸೆಳೆದಿದೆ.
ಒಂದೆಡೆ HPV, TT ಲಸಿಕೆ ಕುರಿತು ಮಕ್ಕಳಿಗೆ ಹಾಗೂ ಪೋಷಕರಿಗೆ ಜಾಗೃತಿ ಮೂಡಿಸುವ ಪ್ರಯತ್ನ, ಮತ್ತೊಂದೆಡೆ ಲಸಿಕಾ ವ್ಯವಸ್ಥೆಯಲ್ಲಿ ಆಧುನಿಕ ತಂತ್ರಜ್ಞಾನ ಅಳವಡಿಕೆಯ ಸಿದ್ಧತೆ — ಕೆ.ಶೆಟ್ಟಿಹಳ್ಳಿಯ ಆರೋಗ್ಯ ಮಾದರಿ ಇದೀಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಗೆ ಕಾರಣವಾಗಿದೆ.
ಗ್ರಾಮೀಣ ಭಾಗದಲ್ಲೂ ಆರೋಗ್ಯ ಸೇವೆಗಳನ್ನು ಶೇ.100ರಷ್ಟು ಪರಿಣಾಮಕಾರಿಯಾಗಿ ಜಾರಿಗೊಳಿಸಿದರೆ, ಅಂತಹ ಮಾದರಿಗಳು ಜಾಗತಿಕ ಮಟ್ಟದಲ್ಲೂ ಗಮನ ಸೆಳೆಯಬಹುದು ಎಂಬುದಕ್ಕೆ ಕೆ.ಶೆಟ್ಟಿಹಳ್ಳಿಯ ಈ ಭೇಟಿ ಸಾಕ್ಷಿಯಾಗಿದೆ.
Key words: Japan Delegation, Visits, K. Shettihalli, Mandya

ENGLISH SUMMARY:
Japan Delegation Visits K. Shettihalli in Mandya
A 30-member Japanese delegation, led by Toshihiro Suzuki, CEO of Suzuki, visited K. Shettihalli in Srirangapatna taluk, Mandya district, on August 28. The team visited the K. Shettihalli Primary Health Centre, interacted with doctors and healthcare staff, and reviewed healthcare facilities and vaccination programmes.
Later, the delegation visited the local school, where it witnessed a demonstration of the HPV, TT vaccination campaign and received information on vaccination procedures and awareness activities.

PDO Dr. Shobharani said the PHC was selected because health department programmes are being implemented with 100% success, with strong support from doctors, staff and villagers.
A new advanced mobile vaccination unit is also being introduced with support from Manipal. The rechargeable unit can operate for up to 78 hours and can also be recharged using solar panels, strengthening vaccination services in rural areas.







