ಮೈಸೂರು, ಆಗಸ್ಟ್,26, 2026 (www.justkannada.in): ವಿದ್ಯುತ್ ಸುರಕ್ಷತಾ ಕ್ರಮಗಳು, ವಿದ್ಯುತ್ ಅಪಘಾತ ತಡೆಯುವಿಕೆ ಹಾಗೂ ಅಂದಾಜು ಪಟ್ಟಿ ತಯಾರಿಸುವ ಕುರಿತಂತೆ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ(ಸೆಸ್ಕ್) ವತಿಯಿಂದ ನಿಗಮದ ವಿವಿಧ ಕಾರ್ಯ ಮತ್ತು ಪಾಲನಾ ಶಾಖೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಎಲ್ಲಾ ಶಾಖಾಧಿಕಾರಿಗಳಿಗೆ ಒಂದು ದಿನದ ತರಬೇತಿ ನೀಡಲಾಯಿತು.
ನಗರದ ಜೆಎಲ್‌ಬಿ ರಸ್ತೆಯಲ್ಲಿರುವ ರೋಟರಿ ಸಭಾಂಗಣದಲ್ಲಿ ನಡೆದ ಮೊದಲನೇ ತಂಡದ ತರಬೇತಿ ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡಿದ್ದ ಬೆಸ್ಕಾಂ ನಿವೃತ್ತ ಉಪ ಪ್ರಧಾನ ವ್ಯವಸ್ಥಾಪಕ ಎ. ರಮೇಶ್ ಅವರು, “ಸ್ವಯಂ ಸುರಕ್ಷತೆಯೊಂದಿಗೆ ವಿದ್ಯುತ್ ಗ್ರಾಹಕರು, ಸಾರ್ವಜನಿಕರು, ಪ್ರಾಣಿಗಳು ಹಾಗೂ ಸೆಸ್ಕ್ ನ ಆಸ್ತಿಗಳ ಸುರಕ್ಷತೆಯನ್ನು ಹೇಗೆ ಕಾಪಾಡಬೇಕು ಹಾಗೂ ಇದಕ್ಕೆ ಸೆಸ್ಕ್‌ನ ಶಾಖಾಧಿಕಾರಿಗಳು ಹೆಚ್ಚಿನ ನಿಗಾವಹಿಸುಬೇಕೆಂದು ತಿಳಿಸಿದರು. ಹಿಂದಿನ ವರ್ಷಗಳ ಅಂಕಿ ಅಂಶಗಳನ್ನು ಅವಲೋಕಿಸಿದಾಗ, ಇತ್ತೀಚಿನ ದಿನಗಳಲ್ಲಿ ವಿದ್ಯುತ್ ಅಪಘಾತಗಳ ಪ್ರಮಾಣದಲ್ಲಿ ಗಣನೀಯವಾಗಿ ಇಳಿಕೆಯಾಗಿದ್ದರೂ ಸಹ ವಿದ್ಯುತ್ ಅವಘಡಗಳನ್ನು ಶೂನ್ಯವಾಗಿಸಲು ಸಾಧ್ಯವಾಗಿಲ್ಲ. ಈ ನಿಟ್ಟಿನಲ್ಲಿ ಸುರಕ್ಷತಾ ವಿಧಾನಗಳನ್ನು ಸರಿಯಾಗಿ ಪಾಲನೆ ಮಾಡಬೇಕಿದ್ದು, ಸ್ವಯಂ ಸುರಕ್ಷತೆಯ ಜೊತೆಗೆ ಗ್ರಾಹಕರು, ಸಾರ್ವಜನಿಕರು, ಸಹೋದ್ಯೋಗಿಗಳು, ಪ್ರಾಣಿಗಳ ಸುರಕ್ಷತೆಯೊಂದಿಗೆ ಕಂಪನಿಯ ಸುರಕ್ಷತೆಯ ಬಗ್ಗೆ ನಿಗಾವಹಿಸಬೇಕಿದೆ ಎಂದು ತಿಳಿಸಿದರು.
ವಿದ್ಯುತ್ ಅವಘಡಗಳ ಪ್ರಮಾಣವನ್ನು ತಡೆಗಟ್ಟುವ ನಿಟ್ಟಿನಲ್ಲಿ ಅನುಸರಿಸಬೇಕಾದ ಕ್ರಮಗಳೊಂದಿಗೆ ಗ್ರಾಹಕರಿಗೆ ಸ್ಟಾರ್ ರೇಟಿಂಗ್ ಹೊಂದಿರುವ ಗುಣಮಟ್ಟದ ವಿದ್ಯುತ್ ಉಪಕರಣಗಳ ಬಳಕೆ ಬಗ್ಗೆ ತಿಳುವಳಿಕೆ ಹಾಗೂ ಅದರಿಂದಾಗುವ ಅನುಕೂಲದ ಬಗ್ಗೆ ಜಾಗೃತಿ ಮೂಡಿಸಬೇಕಿದೆ. ವಿದ್ಯುತ್ ಸುರಕ್ಷತೆ ಕಾಪಾಡುವುದರೊಂದಿಗೆ ಅಂದಾಜು ಪಟ್ಟಿಯನ್ನು ಸಮರ್ಪಕ ರೀತಿಯಲ್ಲಿ ಮಾಡಬೇಕಿದೆ, ಇದಕ್ಕಾಗಿ ಕೈಗೊಳ್ಳಬೇಕಾದ ಕ್ರಮಗಳ ಕುರಿತಂತೆ ಪ್ರಾತ್ಯಕ್ಷಿಕೆಯ ಮೂಲಕ ಮಾಹಿತಿ ನೀಡಿದರು.
ಸೆಸ್ಕ್ ತರಬೇತಿ ಶಾಖೆಯ ಉಪ ಪ್ರಧಾನ ವ್ಯವಸ್ಥಾಪಕರಾದ ಎಂ.ವೈ. ಹೇಮಾ ಅವರು ಮಾತನಾಡಿ, ಅಪಘಾತಗಳು ಸಂಭವಿಸಿದ ಬಳಿಕ ಪರಿಹಾರ ಕಂಡುಕೊಳ್ಳುವುದಕ್ಕಿಂತ, ಅಪಘಾತಗಳು ಸಂಭವಿಸದಂತೆ ಮುನ್ನೆಚ್ಚರಿಕೆ ವಹಿಸುವುದು ಅತೀ ಮುಖ್ಯ. ಈ ತತ್ವವನ್ನು ಪ್ರತಿಯೊಬ್ಬರೂ ತಮ್ಮ ಕಾರ್ಯವೈಖರಿಯಲ್ಲಿ ಅಳವಡಿಸಿಕೊಳ್ಳಬೇಕಿದೆ. ವಿದ್ಯುತ್ ಕಾಮಗಾರಿಗಳ ಸಂದರ್ಭದಲ್ಲಿ ವೇಗಕ್ಕಿಂತಲೂ ಸುರಕ್ಷತೆಗೆ ಆದ್ಯತೆ ನೀಡಿ, ಅಗತ್ಯ ಸುರಕ್ಷತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದರು. ಅದೇ ರೀತಿಯಲ್ಲಿ ಅಂದಾಜು ಪಟ್ಟಿಯನ್ನು ಸಿದ್ಧಪಡಿಸುವ ಸಂದರ್ಭದಲ್ಲಿ ಅಂದಾಜು ಪಟ್ಟಿ ಪ್ರಮಾಣಕ್ಕಿಂತ ನಿಖರತೆಗೆ ಹೆಚ್ಚಿನ ಮಹತ್ವ ನೀಡಬೇಕಿದೆ. ಅಂದಾಜು ಪಟ್ಟಿ ರೂಪಿಸುವಾಗ ಸಣ್ಣ ವ್ಯತ್ಯಾಸವಾದರೂ ನಿಗಮಕ್ಕೆ ಕೋಟ್ಯಂತರ ರೂ.ಗಳ ವ್ಯತ್ಯಾಸ ಉಂಟಾಗಲಿದೆ, ಹೀಗಾಗಿ ಇದನ್ನು ಪರಿಶೀಲಿಸುವ ಜವಾಬ್ದಾರಿ ಅಧಿಕಾರಿಗಳ ಮೇಲಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಸೆಸ್ಕ್ ತರಬೇತಿ ಶಾಖೆಯ ಸಹಾಯಕ ಪ್ರಧಾನ ವ್ಯವಸ್ಥಾಪರಾದ ಜ್ಯೋತಿ.ಎನ್ ರವರು ಉಪಸ್ಥಿತರಿದ್ದರು.
Key words: CESC, training, electrical safety, prevention, electrical accidents







