ಮೈಸೂರು: ಅ.11,2026 (www.justkannada.in): ಮೈಸೂರು ದಸರಾ ಮಹೋತ್ಸವ 2026ರ ಲಲಿತ ಕಲೆ ಮತ್ತು ಕರಕುಶಲ ಶಿಬಿರವನ್ನು ಕನ್ನಡ ಮತ್ತು ಸಂಸ್ಕೃತಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸಚಿವ ಶಿವರಾಜ್ ಎಸ್ ತಂಗಡಗಿ ಅವರು ಚಾಲನೆ ನೀಡಿದರು.
ಇಂದು ಚಾಮರಾಜೇಂದ್ರ ಸರ್ಕಾರಿ ದೃಶ್ಯಕಲಾ ಕಾಲೇಜು (ಕಾವಾ) ವತಿಯಿಂದ ಆಯೋಜಿಸಿದ ಲಲಿತ ಕಲೆ ಮತ್ತು ಕರಕುಶಲ ಕಾರ್ಯಕ್ರಮಗಳ ಶಿಬಿರ ಹಾಗೂ ರಾಷ್ಟ್ರ ಮಟ್ಟದ ಕರಕುಶಲ ಕಲಾವಿದರ ಕಲಾಕೃತಿಗಳ ಪ್ರದರ್ಶನವನ್ನು ಅಧಿಕಾರಿಗಳೊಡನೆ ವೀಕ್ಷಿಸಿದರು.
ನಂತರ ಅವರು ಮಾತನಾಡಿ 1913 ರಲ್ಲಿ ತಾಂತ್ರಿಕ ಶಿಕ್ಷಣ ಶಾಲೆ ಹಾಗೂ ಸಂಸ್ಥೆಯಾಗಿ ಪ್ರಾರಂಭಗೊಂಡು, ಸ್ವಾತಂತ್ರ್ಯದ ನಂತರ ದೃಶ್ಯಕಲೆ ಮತ್ತು ಶಿಕ್ಷಣವನ್ನು ಉನ್ನತೀಕರಿಸಿ, 1989 ರಲ್ಲಿ ಶ್ರೀ ಜಯಚಾಮರಾಜೇಂದ್ರ ದೃಶ್ಯಕಲಾ ಅಕಾಡೆಮಿ ಪ್ರಾರಂಭವಾಯಿತು. ಲಲಿತಕಲೆ ಮತ್ತು ಕರಕುಶಲ ಕಲಾವಿದರಿಗೆ, ಕಲೆಗೆ ಪ್ರೋತ್ಸಾಹ ನೀಡುವ ಕೆಲಸವನ್ನು ಸರ್ಕಾರ ಮಾಡುತ್ತಾ ಬಂದಿದೆ ಎಂದರು.
ವಿದ್ಯಾರ್ಥಿಗಳಿಗೆ ಕನಿಷ್ಠ 750 ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ 1000 ಮಾಸಿಕ ಸಹಾಯಧನ ಭರಿಸುವ ಕೆಲಸ ಮಾಡಲಾಗುತ್ತಿದೆ. ಇಲ್ಲಿ ತರಬೇತಿ ಪಡೆದ ವಿದ್ಯಾರ್ಥಿಗಳು ಮಾಧ್ಯಮ ಕ್ಷೇತ್ರ ಹಾಗೂ ವನ್ಯಜೀವಿ ಛಾಯಾಗ್ರಹಣ ಮುಂತಾದ ಕ್ಷೇತ್ರಗಳಲ್ಲಿ ಉತ್ತಮ ಕೆಲಸ ಕಂಡುಕೊಳ್ಳುತ್ತಿದ್ದಾರೆ ಎಂದು ಹೇಳಿದರು
ಈ ಸಂಸ್ಥೆಯಲ್ಲಿ ಹುದ್ದೆಗಳ ನೇಮಕಾತಿಯ ಅಗತ್ಯವಿದೆ ಸರ್ಕಾರದ ಮೀಸಲಾತಿಗೆ ಸಂಬಂಧಿಸಿದ ಕೆಲವು ಗೊಂದಲಗಳಿದ್ದವು, ಅವುಗಳಿಗೆ ಈಗ ಪರಿಹಾರ ಕಂಡುಕೊಳ್ಳಲಾಗಿದೆ.ಇಲಾಖೆಯ ಕಾರ್ಯದರ್ಶಿಗಳೊಂದಿಗೆ ಮಾತುಕತೆ ನಡೆಸಿ, ಆದಷ್ಟು ಬೇಗ ಡಿಪಿಆರ್ ಮೂಲಕ ಹುದ್ದೆಗಳ ಸೃಷ್ಟಿ ಮತ್ತು ನೇಮಕಾತಿ ಪ್ರಕ್ರಿಯೆಯನ್ನು ಭರವಸೆಯಿಂದ ತ್ವರಿತಗೊಳಿಸಲಾಗುವುದು ಎಂದು ಹೇಳಿದರು.






