ಮೈಸೂರು, AUG.12,2026: ಪಾದಚಾರಿ ಮಾರ್ಗಗಳ ಒತ್ತುವರಿ ತೆರವು ಕಾರ್ಯಾಚರಣೆ ನಡೆಯುತ್ತಿರುವ ಬೆನ್ನಲ್ಲೇ, ಇದೀಗ ವಾಹನ ನಿಲುಗಡೆ ಸ್ಥಳಗಳನ್ನೂ ಕೆಲ ಅಂಗಡಿಕಾರರು ತಮ್ಮ ಸ್ವಂತ ಜಾಗದಂತೆ ಬಳಸುತ್ತಿರುವ ಆರೋಪ ಕೇಳಿಬಂದಿದೆ.
ಮೈಸೂರಿನ ಅರಸು ರಸ್ತೆ, ಶಿವರಾಂಪೇಟೆ ಹಾಗೂ ಕೆ.ಟಿ. ಸ್ಟ್ರೀಟ್ ಸೇರಿದಂತೆ ಪ್ರಮುಖ ವಾಣಿಜ್ಯ ಪ್ರದೇಶಗಳಲ್ಲಿ ಅಂಗಡಿ ಮುಂಭಾಗದ ಪಾರ್ಕಿಂಗ್ ಜಾಗಕ್ಕೆ ಮೆಟಲ್ ಸ್ಟ್ಯಾಂಡ್‌ಗಳನ್ನು ಅಡ್ಡವಾಗಿ ಇಟ್ಟು ವಾಹನ ನಿಲುಗಡೆಗೆ ನಿರ್ಬಂಧಿಸುತ್ತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಇಂತಹದ್ದೇ ಘಟನೆಯೊಂದರಲ್ಲಿ, ಪಾರ್ಕಿಂಗ್ ಜಾಗಕ್ಕೆ ಅಡ್ಡಿಪಡಿಸಿದ್ದನ್ನು ಪ್ರಶ್ನಿಸಿದ ಸಾರ್ವಜನಿಕರೊಂದಿಗೆ ಅಂಗಡಿ ಮಾಲೀಕ ಅನುಚಿತವಾಗಿ ವರ್ತಿಸಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ವಿಡಿಯೋ ವೈರಲ್ ಆಗುತ್ತಿದ್ದಂತೆ ಮೈಸೂರು ನಗರಪಾಲಿಕೆ ಎಚ್ಚೆತ್ತುಕೊಂಡಿದ್ದು, ಘಟನೆ ಕುರಿತು ನಗರಪಾಲಿಕೆ ಆಯುಕ್ತೆ ಸವಿತಾ ಅವರು ಸಂಬಂಧಪಟ್ಟ ವಲಯಾಧಿಕಾರಿಗೆ ( ಝೋನಲ್ ಅಧಿಕಾರಿಗೆ -6) ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ಈ ಬಗ್ಗೆ ಜಸ್ಟ್ ಕನ್ನಡ ಜತೆ ಮಾತನಾಡಿದ ಪಾಲಿಕೆ ಆಯುಕ್ತ ಸವಿತಾ ಅವರು ಹೇಳಿದಿಷ್ಟು..
ಘಟನಾ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ, ಸಾರ್ವಜನಿಕರೊಂದಿಗೆ ಅನುಚಿತವಾಗಿ ವರ್ತಿಸಿರುವ ವ್ಯಾಪಾರಿಯಿಂದ ಕ್ಷಮೆಯಾಚನೆ ಪಡೆಯುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಜತೆಗೆ, ಆತನ ಅಂಗಡಿಯ ವ್ಯಾಪಾರ ಪರವಾನಗಿ ಹಾಗೂ ಸಂಬಂಧಿತ ದಾಖಲೆಗಳನ್ನು ಪರಿಶೀಲಿಸಿ ಆತನಿಗೆ ನೋಟಿಸ್ ನೀಡುವಂತೆ ಆದೇಶಿಸಲಾಗಿದೆ.

“ರಸ್ತೆ, ಪಾದಚಾರಿ ಮಾರ್ಗ ಮತ್ತು ಸಾರ್ವಜನಿಕ ಪಾರ್ಕಿಂಗ್ ಜಾಗ ಯಾರೊಬ್ಬರ ಖಾಸಗಿ ಆಸ್ತಿಯಲ್ಲ” ಎಂಬ ಸಂದೇಶವನ್ನು ಪಾಲಿಕೆ ನೀಡಿದ್ದು, ಸಾರ್ವಜನಿಕ ಸ್ಥಳಗಳನ್ನು ಅಕ್ರಮವಾಗಿ ಆಕ್ರಮಿಸುವವರ ವಿರುದ್ಧ ಕ್ರಮ ಕೈಗೊಳ್ಳುವ ಸೂಚನೆ ನೀಡಿದೆ.
ಲಾಸ್ಟ್ ಪಂಚ್ :
ಪಾದಚಾರಿ ಮಾರ್ಗ ಒತ್ತುವರಿ ತೆರವುಗೊಳಿಸುತ್ತಿರುವ ನಗರಪಾಲಿಕೆಗೆ ಇದೀಗ ಪಾರ್ಕಿಂಗ್ ಜಾಗದ ಒತ್ತುವರಿಯೂ ಹೊಸ ಸವಾಲಾಗಿದೆ. ಅಂಗಡಿ ಮುಂದೆ ಮೆಟಲ್ ಸ್ಟ್ಯಾಂಡ್, ಬ್ಯಾರಿಕೇಡ್ ಅಥವಾ ಇತರ ವಸ್ತುಗಳನ್ನಿಟ್ಟು ಸಾರ್ವಜನಿಕರಿಗೆ ವಾಹನ ನಿಲ್ಲಿಸಲು ಅವಕಾಶ ನೀಡದಿರುವ ಪದ್ಧತಿಗೆ ಕಡಿವಾಣ ಹಾಕಬೇಕೆಂಬ ಒತ್ತಾಯವೂ ಕೇಳಿಬಂದಿದೆ.
ಈ ಕುರಿತು ಜಸ್ಟ್ ಕನ್ನಡಕ್ಕೆ ಮಾಹಿತಿ ನೀಡಿರುವ ನಗರಪಾಲಿಕೆ ಆಯುಕ್ತೆ ಸವಿತಾ, ಸಾರ್ವಜನಿಕರಿಗೆ ತೊಂದರೆ ಉಂಟುಮಾಡುವ ಇಂತಹ ಅಕ್ರಮ ಅಡಚಣೆಗಳ ವಿರುದ್ಧ ನಿಯಮಾನುಸಾರ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
Key words: Mysuru, Parking Spaces Encroached, Shopkeeper’s Misbehavior, Goes Viral, MCC

SUMMARY:
Mysuru: Parking Spaces Encroached, Shopkeeper’s Misbehavior Goes Viral
Mysuru civic authorities have acted after a video showing a shopkeeper allegedly misbehaving with the public over a parking space went viral.

The shop had reportedly placed a metal stand to block vehicles from parking in a public parking area. MCC Commissioner Savita has directed the concerned Zonal Officer to inspect the spot, obtain an apology from the shopkeeper, and verify his trade licence and documents. Similar parking obstructions are reportedly common on Arasu Road, Shivaram pet and K.T. Street.
The MCC has warned against encroachment of public spaces and obstruction of parking areas.







