Tuesday, August 11, 2026

BDA Apartments

Home Front Page ಅಧಿಕಾರ ಒಂದು ಶಕ್ತಿಯ ಸಂಕೇತವಲ್ಲ. ಅದು ಜನ ಸೇವೆ ಮಾಡಲು ದೊರೆತಿರುವ ಸುವರ್ಣ ಅವಕಾಶ- ಸಿಎಂ...

ಅಧಿಕಾರ ಒಂದು ಶಕ್ತಿಯ ಸಂಕೇತವಲ್ಲ. ಅದು ಜನ ಸೇವೆ ಮಾಡಲು ದೊರೆತಿರುವ ಸುವರ್ಣ ಅವಕಾಶ- ಸಿಎಂ ಡಿ.ಕೆ ಶಿವಕುಮಾರ್

ಬೆಂಗಳೂರು, ಆಗಸ್ಟ್, 11,2026 (www.justkannada.in): ಅಧಿಕಾರ ಒಂದು ಶಕ್ತಿಯ ಸಂಕೇತವಲ್ಲ. ಅದು ಜನ ಸೇವೆ ಮಾಡಲು ದೊರೆತಿರುವ ಸುವರ್ಣ ಅವಕಾಶ. ಈ ಅವಕಾಶವನ್ನು ನ್ಯಾಯಯುತವಾಗಿ ಬಳಸಿಕೊಂಡು ಜನಸೇವೆ ಮಾಡಬೇಕು ಎಂದು ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ತಿಳಿಸಿದರು.

ಇಂದು ಕರ್ನಾಟಕ ಸರ್ಕಾರದ ನೌಕರರೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಮುಖ್ಯಮಂತ್ರಿಗಳ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಸರ್ಕಾರಿ ನೌಕರಿ ಸಿಕ್ಕಿರುವುದು ನಿಮ್ಮ ಸೌಭಾಗ್ಯ. ಇದನ್ನು ಉತ್ತಮ ರೀತಿಯಲ್ಲಿ ಬಳಸಿಕೊಂಡು ಜನರ ಸೇವೆ ಮಾಡಬೇಕು. ಕೆಂಗಲ್ ಹನುಮಂತಯ್ಯ ಅವರು ಖೈದಿ ಗಳಿಂದ ವಿಧಾನಸೌಧವನ್ನು ಕಟ್ಟಿಸಿದರು. ಈ ವಿಧಾನಸೌಧ ಇರುವುದು ಜನರ ಸೇವೆ ಮಾಡಲು ಎಂದರು.

ಸರ್ಕಾರಿ ನೌಕರರು ಸರ್ಕಾರ ಮತ್ತು ಜನರ ನಡುವೆ ಒಂದು ದೊಡ್ಡ ಸೇತುವೆಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. 7 ಕೋಟಿ ಜನರ ನಡುವೆ 5.5 ಲಕ್ಷ  ಸರ್ಕಾರಿ ನೌಕರರು ಇದ್ದೀರಿ. ಇದು ನಿಮ್ಮ ಅದೃಷ್ಟ ಎಂದು ಭಾವಿಸಿ. ಸರ್ಕಾರಿ ನೌಕರರು ಉತ್ತವಾಗಿ ಸೇವೆ ಮಾಡಿದ್ದರಿಂದ ಇಂದು ಕರ್ನಾಟಕ ಉತ್ತಮ ಆಡಳಿತಕ್ಕೆ ಹೆಸರುವಾಸಿಯಾಗಿದೆ ಎಂದರು.

ಕರ್ನಾಟಕ ಸರ್ವ ಜನಾಂಗದ ಶಾಂತಿಯ ತೋಟ. ಕರ್ನಾಟಕದಲ್ಲಿ ಯುವ ಜನತೆ ಹೆಚ್ಚು ಇದೆ. ಈ ಯುವಜನತೆಯನ್ನು ಉತ್ತಮ ರೀತಿಯಲ್ಲಿ ಬಳಸಿಕೊಳ್ಳಬೇಕಿದೆ. ನಮ್ಮಲ್ಲಿ ಇರುವ ತಂತ್ರಜ್ಞಾನ ಬೇರೆಲ್ಲೂ ಇಲ್ಲ. ಬೆಂಗಳೂರು  ತಂತ್ರಜ್ಞಾನಕ್ಕೆ ಹೆಸರುವಾಸಿಯಾಗಿದೆ ಎಂದು ತಿಳಿಸಿದರು.

ಸರ್ಕಾರಿ ನೌಕರರು ತಾವು ಕೆಲಸ ಮಾಡುವ ಕೇಂದ್ರ ಸ್ಥಾನದಲ್ಲಿ ಕಡ್ಡಾಯವಾಗಿ ವಾಸವಿರಬೇಕು. ನೌಕರರು ಕ್ಷೇತ್ರ ಭೇಟಿ ಮಾಡಿ ಜನರ ಸಮಸ್ಯೆಗಳನ್ನು ಬಗೆಹರಿಸಬೇಕು.  ಇದರಿಂದ ಸಾರ್ವಜನಿಕರಿಗೆ ಸುಲಭವಾಗಿ ದೊರೆಯಲು ಸಾಧ್ಯವಾಗುತ್ತದೆ. ತಾವು ನಿಸ್ವಾರ್ಥ ಜನ ಸೇವೆ ಮಾಡಬೇಕು. ಕಾನೂನು ಬಿಟ್ಟು ಕೆಲಸ ಮಾಡಿ ಎಂದು ಹೇಳುವುದಿಲ್ಲ. ಕಾನೂನು ಚೌಕಟ್ಟಿನಲ್ಲಿ ಕೆಲಸ ಮಾಡಬೇಕು ಭ್ರಷ್ಟಾಚಾರ ಮುಕ್ತ ಆಡಳಿತ ನೀಡುವುದು ನಮ್ಮ ಸರ್ಕಾರದ ಆಧ್ಯತೆ ಎಂದರು.

ಜನರ ಸೇವೆ ಮಾಡಲು ಪ್ರಜಾ ಸೇವಾ ಇಲಾಖೆಯನ್ನು ಪ್ರಾರಂಭಿಸಲಾಗಿದೆ. ಮಂತ್ರಿಗಳು ಮೊದಲ ಮತ್ತು ಮೂರನೇ ಶನಿವಾರ ತಾಲ್ಲೂಕು ಮಟ್ಟದಲ್ಲಿ ಪ್ರಜಾ ಸೇವೆ ಸಭೆಗಳನ್ನು ನಡೆಸಬೇಕು. ಇಲ್ಲಿ ಸ್ಥಳೀಯವಾಗಿ ಇರುವ ಸಮಸ್ಯೆಗಳನ್ನು ಬಗೆಹರಿಸುವ ಕೆಲಸವನ್ನು ಮಾಡಬೇಕು. ಪ್ರತಿ ಪಂಚಾಯತ್ ಮಟ್ಟದಲ್ಲಿ ಭಾರತ್ ಜೋಡೋ ಯುವಕರ ಸಂಘಗಳನ್ನು ಪ್ರಾರಂಬಿಸಲಾಗುತ್ತದೆ. ಪ್ರತಿ ಸಂಘಕ್ಕೆ 10 ಲಕ್ಷ ಅನುಧಾನ ನೀಡಿ, ಯುವ ಜನತೆಯನ್ನು ಉತ್ತೇಜನ ನೀಡಿ ಅವರ ಪ್ರತಿಭೆಯನ್ನು ಬಳಸಿಕೊಳ್ಳಲಾಗುವುದು ಎಂದರು.

ಗ್ರಾಮೀಣ ಭಾಗದ 1.1 ಕೋಟಿ ಜನರಿಗೆ ಹಾಗೂ ಬೆಂಗಳೂರಿನ 25 ಲಕ್ಷ ಜನರಿಗೆ  ಅವರ ನಿವೇಶನ ಖಾತೆಗಳನ್ನು ಅವರ ಮನೆ ಬಾಗಿಲಿಗೆ ತಲುಪಿಸುವ ಕೆಲಸವನ್ನು ಮಾಡಲು ಕ್ರಮವಹಿಸಲಾಗಿದೆ. ಇದು ಸರ್ಕಾರದ 6 ನೇ ಭೂ ಗ್ಯಾರೆಂಟಿ ಯೋಜನೆಯಾಗಿದೆ. ಎಸ್ ಐಆರ್ ಪ್ರಕ್ರಿಯೆ ಶೇಕಡಾ 100 ರಷ್ಟು ಆಗಬೇಕು. ಯಾವುದೇ ಅರ್ಹ ಮತದಾರರು ಮತಪಟ್ಟಿಯಿಂದ ಹೊರ ಉಳಿಯಬಾರದು. ಈ ನಿಟ್ಟಿನಲ್ಲಿ ಅಧಿಕಾರಿಗಳು ಕಾರ್ಯ ನಿರ್ವಹಿಸಬೇಕು. ನಿವೇಶನ ರಹಿತರಿಗೆ ನಿವೇಶನ ನೀಡಲು ಅಗತ್ಯ ಭೂ ಪ್ರದೇಶವನ್ನು ಗುರುತಿಸಿ ವರದಿ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಉಪ ಮುಖ್ಯಮಂತ್ರಿ ಡಾ. ಜಿ ಪರಮೇಶ್ವರ್ ಅವರು ಮಾತನಾಡಿ ತುಮಕೂರು ಜಿಲ್ಲೆಯಲ್ಲಿ ಬರ ಪ್ರವಾಸ ಕಳೆದ ಎರಡು ದಿನಗಳಿಂದ ಹಮ್ಮಿಕೊಳ್ಳಲಾಗಿದೆ. ನಮ್ಮ ಸರ್ಕಾರವನ್ನು ಜನರ ಬಳಿಗೆ ತೆಗೆದುಕೊಂಡು ಹೋಗಲು ಪ್ರಜಾ ಸೇವಾ ಇಲಾಖೆಯನ್ನು ಪ್ರಾರಂಭಿಸಲಾಗಿದೆ. ಇದರಿಂದ ಜನರು ತಮ್ಮ ಸಮಸ್ಯೆಯನ್ನು ಹೇಳಿಕೊಳ್ಳಲು ಹಾಗೂ ಪರಿಹಾರ ಕಂಡುಕೊಳ್ಳಲು ಅನುಕೂಲವಾಗುತ್ತದೆ ಎಂದರು.

ಭಾರತ್ ಜೋಡೋ ಸಂಘಗಳನ್ನು ಮಾಡಲು ಮುಖ್ಯಮಂತ್ರಿಗಳು ಯೋಜನೆ ರೂಪಿಸಿದ್ದಾರೆ. ಪ್ರತಿ ಸಂಘಕ್ಕೆ 10 ಲಕ್ಷಗಳ ಅನುಧಾನ ನೀಡಲಾಗುವುದು. ಈ ಸಂಘಗಳು ಯಾವುದೇ ಜಾತಿ, ಧರ್ಮ ಬೇಧವಿಲ್ಲದೆ ಎಲ್ಲರೂ ಒಂದೇ ಎಂಬ ಸಂದೇಶವನ್ನು ಸಾರುತ್ತವೆ. ಪ್ರತಿ ಗ್ರಾಮ ಪಂಚಾಯತಿ ಅಲ್ಲಿ ಒಂದು ಸಂಘ ಮಾಡಬೇಕು. ಪ್ರತಿ ಸಂಘದಲ್ಲಿ 150 ರಿಂದ 200 ಯುವ ಸದಸ್ಯರು ಇರಬೇಕು. ಇದರಲ್ಲಿ ಎಲ್ಲಾ ಜಾತಿ ಧರ್ಮದವರು ಇರಬೇಕು. ಇದರಲ್ಲಿ ,15 ಜನರನ್ನು ಕಚೇರಿ ಸಿಬ್ಬಂಧಿಗಳು ಇರಬೇಕು.  ಸಾಂಸ್ಕೃತಿಕ ಕಾರ್ಯಕ್ರಮಗಳು, ರಾಷ್ಟ್ರೀಯ ಹಬ್ಬಗಳನ್ನು ಎಲ್ಲರೂ ಸೇರಿ ವಿಜೃಂಭಣೆಯಿಂದ ಆಚರಣೆ ಮಾಡಬೇಕು. ಜನರಲ್ಲಿ ಸಾಮರಸ್ಯ ಬೆಳೆಸಬೇಕು. ಮಾದಕ ವ್ಯಸನಕ್ಕೆ ಯುವ ಜನತೆ ಒಳಗಾಗಂತೆ ಅರಿವು ಮೂಡಿಸಬೇಕು ಎಂದು ಮಾಹಿತಿ ನೀಡಿದರು.

ಗ್ರಾಮೀಣ ಪ್ರದೇಶದಲ್ಲಿ ಹಲವಾರು ಸಮಸ್ಯೆ ಗಳನ್ನು ಜನರು ಅನುಭವಿಸುತ್ತಿದ್ದಾರೆ. ಕುಡಿಯುವ ನೀರಿನ ಸಮಸ್ಯೆ, ವಸತಿ ಸಮಸ್ಯೆ, ಸರ್ಕಾರಿ ಸೌಲಭ್ಯಗಳನ್ನು ಪಡೆದುಕೊಳ್ಳಲು ಮಾಹಿತಿ ಕೊರತೆ ಮುಂತಾದ ಸಮಸ್ಯೆಗಳಿವೆ. ಈ ಬಾರಿ ಮಳೆ ಕೊರತೆ ಉಂಟಾಗಿ ರೈತರ ಬೆಳೆ ನಷ್ಟ ಆಗಿವೆ. ಮಳೆ ಕೊರತೆಯಿಂದ ಹಲವಾರು ಬೋರ್ವೆಲ್ ಗಳು ಬತ್ತಿ ಹೋಗಿದ್ದು ಕುಡಿಯುವ ನೀರಿನ ಕೊರತೆ ಇದ್ದು ಈ ಅತಿ ದೊಡ್ಡ ಸವಾಲನ್ನು ಎದುರಿಸಬೇಕಿದೆ.

ರೈತರು ಬೆಳೆ ನಷ್ಟದಿಂದ ಪಾರಾಗಲು ಬೆಳೆ ವಿಮೆ ಮಾಡಿಸಬೇಕು. ಬೆಳೆ ವಿಮೆ ಮಾಡಿಸಿದ ರೈತರಿಗೆ ನ್ಯಾಯಬದ್ಧ ಪರಿಹಾರವನ್ನು ನೀಡುತ್ತಿಲ್ಲ. ಈ ಸಂಬಂಧ ವಿಮಾ ಕಂಪನಿಗಳೊಂದಿಗೆ ಸಭೆ ನಡೆಸಿ ಸೂಚನೆ ನೀಡಲಾಗುವುದು. ಜನರು ಗುಳೆ ಹೋಗುವುದನ್ನು ತಡೆಯಲು ವಿ ಬಿ  ರಾಮ್ ಜಿ ಯೋಜನೆಯಡಿ ಕೆಲಸವನ್ನು ನೀಡುವ ಕಾರ್ಯ ಮಾಡಲಾಗುತ್ತಿದೆ ಎಂದರು.

ಗೃಹ ಸಚಿವಪ್ರಿಯಾಂಕ ಖರ್ಗೆ ಅವರು ಮಾತನಾಡಿ ಬರ ಸಂದರ್ಭದಲ್ಲಿ ಕುಡಿಯುವ ನೀರಿನ ಪೂರೈಕೆಗೆ ಇರುವ ಬೋರ್ವೆಲ್ ಗಳನ್ನು ರಿ ಡ್ರಿಲ್ ಮಾಡಬೇಕು. ನಂತರ ಖಾಸಗಿ ಕೊಳವೆ ಬಾವಿಗಳನ್ನು ಬಾಡಿಗೆಗೆ ಪಡೆದುಕೊಳ್ಳಬೇಕು. ಇದು ಸಾಧ್ಯವಾಗದೇ ಇದ್ದಾಗ ಹೊಸ ಕೊಳವೆ ಬಾವಿಗಳನ್ನು ಕೊರೆಸಬೇಕು. ಅನಿವಾರ್ಯ ಸಂಧರ್ಭದಲ್ಲಿ  ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಬೇಕು. ಪೊಲೀಸ್ ಇಲಾಖೆಯ ವತಿಯಿಂದ ಪ್ರತಿ ತಾಲ್ಲೂಕು ಹೋಬಳಿ ಮಟ್ಟದಲ್ಲಿ ನಶಾ ಮುಕ್ತ ಅಭಿಯಾನ ಕಾರ್ಯಕ್ರಮಗಳನ್ನು ನಡೆಸಬೇಕು. ರೌಡಿಸಂ ನ್ನು ಮಟ್ಟ ಹಾಕುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಕಾರ್ಯ ನಿರ್ವಹಿಸಬೇಕು ಎಂದು ಸೂಚನೆ ನೀಡಿದರು.

ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರು ಮಾತನಾಡಿ,  ಮುಖ್ಯಮಂತ್ರಿಗಳು ಪ್ರಜಾ ಸೇವಾ ಇಲಾಖೆ ರಚಿಸಿದ್ದಾರೆ. ಅದರಂತೆ ಜನರ ಸಮಸ್ಯೆ ಬಗೆಹರಿಸಲು ಈಗಾಗಲೇ ಸಭೆ ನಡೆಸಲಾಗಿದೆ. ರಾಜ್ಯದಲ್ಲಿ 166 ತಾಲ್ಲೂಕುಗಳಲ್ಲಿ ಮಳೆ ಕೊರತೆ ಆಗಿ ನೀರಿನ ಸಮಸ್ಯೆ ಆಗಿದೆ. ಕುಡಿಯುವ ನೀರಿನ ಬಳಕೆಗೆ ಪ್ರತಿ ವಿಧಾನ ಸಭಾ ಕ್ಷೇತ್ರಕ್ಕೆ ತಲಾ ಇಂದು ಕೋಟಿ ಅನುಧಾನ ನೀಡಲಾಗಿದೆ. ಪ್ರತಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ವಿ ಬಿ ರಾಮ್ ಜಿ ಯೋಜನೆ ಜಾರಿಗೆ ತರಲಾಗಿದೆ. ಮಾನವ ದಿನಗಳನ್ನು ಸೃಜಿಸಿ ಗ್ರಾಮೀಣ  ಜನರಿಗೆ ಕೆಲಸ ನೀಡಲು ರಾಜ್ಯ ಮತ್ತು ಕೇಂದ್ರ ಸರ್ಕಾರದಿಂದ 10 ಸಾವಿರ ಕೋಟಿ ಅನುಧಾನ ನೀಡಲಾಗಿದೆ ಎಂದು ಮಾಹಿತಿ ನೀಡಿದರು.

Key words: Power, symbol of strength, serve, people, CM D.K. Shivakumar