ಬೆಂಗಳೂರು, ಆಗಸ್ಟ್ 10,2026 (www.justkannada.in): ತಮಿಳುನಾಡಿಗೆ ಕಾವೇರಿ ನೀರು ಬಿಡುವಂತೆ ಆದೇಶಿಸಿದ ಕಾವೇರಿ ನೀರು ನಿರ್ವಹಣಾ ಸಮಿತಿ ಆದೇಶವನ್ನ ಖಂಡಿಸಿ ಆಗಸ್ಟ್ 13 ರಂದು ಕರೆ ನೀಡಲಾಗಿದ್ದ ಕರ್ನಾಟಕ ಬಂದ್ ರದ್ದಾಗುವ ಸಾಧ್ಯತೆ ಇದೆ.
ರಾಜ್ಯದಲ್ಲಿ ಉತ್ತಮ ಮಳೆಯಾಗುತ್ತಿದ್ದು ಈಗಾಗಲೇ ಕಬಿನಿ ಜಲಾಶಯ ಭರ್ತಿಯಾಗಿದೆ. ಕೆಆರ್ ಎಸ್ ಜಲಾಶಯಕ್ಕೆ ನೀರು ಹರಿದು ಬರುತ್ತಿದೆ. ಈ ಹಿನ್ನೆಲೆಯಲ್ಲಿ ಕಾವೇರಿ ಸಮಸ್ಯೆ ಸದ್ಯಕ್ಕೆ ತೀವ್ರವಾಗಿಲ್ಲ ಎಂಬ ಕಾರಣ ನೀಡಿ, ಕೆಲ ಕನ್ನಡ ಪರ ಹಾಗೂ ರೈತಪರ ಸಂಘಟನೆಗಳು ಬಂದ್‌ನಿಂದ ಹಿಂದೆ ಸರಿಯುವ ಸೂಚನೆ ನೀಡಿವೆ.
ಸಾರಾ ಗೋವಿಂದು ಅವರು ಬಂದ್‌ಗೆ ತಮ್ಮ ಬೆಂಬಲವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಮತ್ತೊಂದೆಡೆ, ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ನಾರಾಯಣ ಗೌಡ ಅವರು ಈಗಾಗಲೇ, ‘ಬಂದ್‌ಗೆ ಬೆಂಬಲ ನೀಡುವುದಿಲ್ಲ’ ಎಂದು ಹಿಂದೆ ಸರಿದಿದ್ದಾರೆ. ಪ್ರವೀಣ್ ಶೆಟ್ಟಿ ಬಣ ಕೂಡ ಬಂದ್‌ನಿಂದ ಹಿಂದೆ ಸರಿಯುವ ಸಾಧ್ಯತೆ ಇದೆ ಎನ್ನಲಾಗಿದೆ. ಇನ್ನು ಓಲಾ-ಉಬರ್ ಅಸೋಸಿಯೇಷನ್‌ನಿಂದಲೂ ಇದುವರೆಗೆ ಬಂದ್‌ಗೆ ಬೆಂಬಲ ವ್ಯಕ್ತವಾಗಿಲ್ಲ. ಬಂದ್ ನಡೆಸುವುದರಿಂದ ರಾಜ್ಯದ ಆರ್ಥಿಕ ಚಟುವಟಿಕೆಗಳಿಗೆ ಹೊಡೆತ ಬೀಳುವುದಲ್ಲದೆ, ದಿನಗೂಲಿ ಕಾರ್ಮಿಕರು, ರೈತರು, ಬೀದಿ ಬದಿ ವ್ಯಾಪಾರಿಗಳು ಹಾಗೂ ಹೋಟೆಲ್ ಉದ್ಯಮವನ್ನೇ ಅವಲಂಬಿಸಿರುವವರಿಗೆ ಸಮಸ್ಯೆಯಾಗಲಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
ಈ ಹಿನ್ನೆಲೆಯಲ್ಲಿ ಆಗಸ್ಟ್ 13ರಂದು ಕರೆ ನೀಡಲಾಗಿರುವ ಕರ್ನಾಟಕ ಬಂದ್ ರದ್ದಾಗುವ ಸಾಧ್ಯತೆ ಇದೆ. ಆದರೆ ಅಂತಿಮ ನಿರ್ಧಾರವನ್ನ ವಾಟಾಳ್ ನಾಗರಾಜ್ ಅವರ ನೇತೃತ್ವದಲ್ಲಿ ಕನ್ನಡಪರ ಸಂಘಟನೆಗಳು ಕೈಗೊಳ್ಳಬೇಕಿದೆ.
Key words: Karnataka bandh, August 13, likely, cancel







