ಮೈಸೂರು,ಆಗಸ್ಟ್,7,2026 (www.justkannada.in): ಇಂದು ಕೊನೆಯ ಆಷಾಢ ಶುಕ್ರವಾರ ಹಿನ್ನೆಲೆಯಲ್ಲಿ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಸಂಭ್ರಮ ಮನೆ ಮಾಡಿದ್ದು ತಾಯಿ ಚಾಮುಂಡೇಶ್ವರಿ ದರ್ಶನಕ್ಕಾಗಿ ಚಾಮುಂಡಿ ಬೆಟ್ಟಕ್ಕೆ ಭಕ್ತಗಣವೇ ಹರಿದು ಬಂದಿದೆ.
ಆಷಾಢ ಮಾಸದಲ್ಲಿ ತಾಯಿ ಚಾಮುಂಡೇಶ್ವರಿ ದರ್ಶನ ಪಡೆದರೆ ಸಕಲವೂ ಸಿದ್ದಿಯಾಗತ್ತೆ ಎಂಬ ನಂಬಿಕೆ ಇದ್ದು ನಾಡಿನ ನಾನಾ ಮೂಲಗಳಿಂದ ಭಕ್ತರು ಚಾಮುಂಡಿ ಬೆಟ್ಟಕ್ಕೆ ಆಗಮಿಸಿ ದೇವರ ದರ್ಶನ ಪಡೆಯುತ್ತಿದ್ದಾರೆ.
ಚಾಮುಂಡಿ ಬೆಟ್ಟದಲ್ಲಿ ವಿವಿಧ ಬಗೆಯ ಹೂವುಗಳಿಂದ ಪುಷ್ಪಾಲಂಕಾರ ಮಾಡಲಾಗಿದ್ದು, ತಾಯಿ ಚಾಮುಂಡೇಶ್ವರಿ ಮಹಾಲಕ್ಷ್ಮಿ ಅಲಂಕಾರದಲ್ಲಿ ಆಕಾಶ ನೀಲಿ ಬಣ್ಣದ ಸೀರೆಯಲ್ಲಿ ಕಂಗೊಳಿಸುತ್ತಿದ್ದಾಳೆ. ಬೆಳಿಗ್ಗೆ 3 ಗಂಟೆಗೆ ಪೂಜೆ ಪುನಸ್ಕಾರ ನೆರವೇರಿದ್ದು 5.30 ಗಂಟೆಯಿಂದ ಭಕ್ತರಿಗೆ ದರ್ಶನಕ್ಕೆ ಅವಕಾಶ ನೀಡಲಾಗಿದೆ.
ಚಾಮುಂಡಿ ಬೆಟ್ಟಕ್ಕೆ ಖಾಸಗಿ ವಾಹನಗಳಿಗೆ ನಿರ್ಬಂಧ ವಿಧಿಸಲಾಗಿದ್ದು, ಲಲಿತಾ ಮಹಲ್ ಗ್ರೌಂಡ್ ನಿಂದ ಸರ್ಕಾರಿ ಬಸ್ ವ್ಯವಸ್ಥೆ ಮಾಡಲಾಗಿದೆ. ಎಲ್ಲರಿಗೂ ಬಸ್ ನಲ್ಲಿ ಉಚಿತ ಪ್ರಯಾಣಕ್ಕೆ ಅನುವು ಮಾಡಿಕೊಡಲಾಗಿದೆ. ಧರ್ಮ ದರ್ಶನ ಹಾಗೂ 2 ಸಾವಿರ ರೂಪಾಯಿ ಟಿಕೆಟ್ ಪಡೆದು ದರ್ಶನ ಪಡೆಯಬಹುದಾಗಿದೆ. 2 ಸಾವಿರ ರೂಪಾಯಿ ಟಿಕೆಟ್ ಖರೀದಿ ಮಾಡಿದವರಿಗೆ ಎಸಿ ಬಸ್ ಹಾಗೂ ಅರ್ಧಗಂಟೆಯಲ್ಲಿ ತಾಯಿ ಚಾಮುಂಡೇಶ್ವರಿ ದರ್ಶನ ಸಿಗಲಿದ್ದು ದರ್ಶನದ ಜೊತೆಗೆ ಪ್ರಸಾದದ ಕಿಟ್ ವಿತರಣೆ ಮಾಡಲಾಗುತ್ತಿದೆ. ಕಿಟ್ ನಲ್ಲಿ ವಾಟರ್ ಬಾಟಲ್, ಲಾಡು ಪ್ರಸಾದ, ಚಾಮುಂಡೇಶ್ವರಿ ವಿಗ್ರಹ ಹಾಗೂ ಕುಂಕುಮ ಲಭ್ಯವಿರಲಿದೆ.
ಚಾಮುಂಡಿ ಬೆಟ್ಟದ ಸುತ್ತಲೂ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದ್ದು, ವಿವಿಐಪಿ ಗಳಿಗೆ 6 ಗಂಟೆಯಿಂದ 10 ಗಂಟೆಯವರೆಗೆ ಮಾತ್ರ ದರ್ಶನಕ್ಕೆ ಅವಕಾಶ ನೀಡಲಾಗಿದೆ. 10 ಗಂಟೆಯ ನಂತರ ಬಂದ್ರೆ 2 ಸಾವಿರ ಟಿಕೆಟ್ ಕ್ಯೂ ಅಥವಾ ಧರ್ಮ ದರ್ಶನದಲ್ಲಿ ದರ್ಶನ ಪಡೆಯಲು ಸೂಚನೆ ನೀಡಲಾಗಿದೆ.
Key words: Last Ashada, devotees, Mysore, Chamundi Hills






