ಬೆಂಗಳೂರು,ಆಗಸ್ಟ್,6,2026 (www.justkannada.in): ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದಿನಕ್ಕೊಂದು ಹೊಸ ತಿರುವು ಸಿಗುತ್ತಿದೆ. ಇದೀಗ ಪ್ರಕರಣದ 14ನೇ ಆರೋಪಿ ಪ್ರದೋಷ್ ಶಾಕಿಂಗ್ ನಿರ್ಧಾರ ಕೈಗೊಂಡಿದ್ದಾರೆ. ಅವರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದು, ತಮ್ಮನ್ನು ಮಾಫಿ ಸಾಕ್ಷಿಯನ್ನಾಗಿ ಪರಿಗಣಿಸುವಂತೆ ಮನವಿ ಮಾಡಿದ್ದಾರೆ.
ಪ್ರಕರಣದ ಸಂಪೂರ್ಣ ಸತ್ಯವನ್ನು ಬಹಿರಂಗಪಡಿಸುವುದಾಗಿ ಕೋರಿದ್ದಾರೆ. ತಮ್ಮನ್ನು ಕ್ಷಮಿಸುವಂತೆ ಕೋರ್ಟ್‌ಗೆ ಶರಣಾಗಿದ್ದಾರೆ. ಈ ಹೊಸ ಬೆಳವಣಿಗೆಯು ದರ್ಶನ್ ಗ್ಯಾಂಗ್ ಗೆ ಭಾರಿ ಆಘಾತ ತಂದೊಡ್ಡಿದೆ.
ಕೋರ್ಟ್ ಗೆ ಪ್ರದೋಷ್ ವಿಶೇಷ ಮನವಿ
ಪ್ರದೋಷ್ ಪರ ವಕೀಲರು 59ನೇ ಸಿಸಿಹೆಚ್ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. ವಿಚಾರಣೆ ವೇಳೆ ದರ್ಶನ್ ಇರುವ ಕೊಠಡಿ ಬಿಟ್ಟು ತಮ್ಮನ್ನು ಪ್ರತ್ಯೇಕ ಜೈಲು ಕೊಠಡಿಯಿಂದ ಹಾಜರುಪಡಿಸಬೇಕು ಎಂದು ಮನವಿ ಮಾಡಿದ್ದಾರೆ. ದರ್ಶನ್ ಬೆದರಿಕೆ ಹಾಕುವುದು ಅಥವಾ ಪ್ರಭಾವ ಬೀರುವ ಸಾಧ್ಯತೆ ಇರುವುದರಿಂದ ಈ ಭದ್ರತಾ ಮನವಿ ಸಲ್ಲಿಸಲಾಗಿದೆ. ಅರ್ಜಿಯ ವಿಚಾರಣೆ ನಡೆಸಿದ ಕೋರ್ಟ್, ಪ್ರಾಸಿಕ್ಯೂಷನ್ ತನ್ನ ನಿಲುವು ತಿಳಿಸುವಂತೆ ಸೂಚಿಸಿದೆ.
ದರ್ಶನ್ ಮತ್ತು ಪವಿತ್ರಾ ಗೌಡಗೆ ಸಂಕಷ್ಟ
ಈ ಪ್ರಕರಣದಲ್ಲಿ ನಟಿ ಪವಿತ್ರಾ ಗೌಡ ಮೊದಲನೇ ಆರೋಪಿ (A1) ಆಗಿದ್ದರೆ, ನಟ ದರ್ಶನ್ ಎರಡನೇ ಆರೋಪಿ (A2) ಆಗಿದ್ದಾರೆ. ಈಗ ಪ್ರದೋಷ್ ಮಾಫಿ ಸಾಕ್ಷಿಯಾಗಲು ಮುಂದಾಗಿರುವುದು ನಟ ದರ್ಶನ್ ಗೆ ದೊಡ್ಡ ಮುಳ್ಳಾಗುವ ಸಾಧ್ಯತೆಯಿದೆ. ಪ್ರದೋಷ್ ನೀಡುವ ಹೇಳಿಕೆಗಳು ಈ ಪ್ರಕರಣದ ತನಿಖೆಯಲ್ಲಿ ಅತ್ಯಂತ ನಿರ್ಣಾಯಕವಾಗಲಿವೆ.
ಮಾಫಿ ಸಾಕ್ಷಿಯಾಗಿ ಪ್ರದೋಷ್ ಸತ್ಯ ಬಿಚ್ಚಿಟ್ಟರೆ, ಪ್ರಕರಣದ ಪ್ರಮುಖ ರೂವಾರಿಗಳಿಗೆ ಕಾನೂನಿನ ಕುಣಿಕೆ ಇನ್ನಷ್ಟು ಬಿಗಿಯಾಗಲಿದೆ. ಈ ಅರ್ಜಿ ಸಿನಿಮಾ ವಲಯದಲ್ಲಿ ತೀವ್ರ ಕುತೂಹಲ ಮೂಡಿಸಿದೆ. ಈ ವಿಷಯದಲ್ಲಿ ನ್ಯಾಯಾಲಯ ಪ್ರಾಸಿಕ್ಯೂಷನ್ ಅಭಿಪ್ರಾಯ ಕೇಳಿದೆ.
ಕೃಪೆ
ಟಿವಿ9
Key words: Renukaswamy, Murder case, actor, Darshan, Pradosh, court, pardon witness







