ಮೈಸೂರು, ಆಗಸ್ಟ್,3:,2026 (www.justkannada.in): ಸಚಿವ ಸ್ಥಾನ ಸಿಗದ ಹಿನ್ನೆಲೆಯಲ್ಲಿ ಕಾಂಗ್ರೆಸ್ ನ ಹಿರಿಯ ಮುಖಂಡ ಹಾಗೂ ಸಚಿವ ಸ್ಥಾನದ ಆಕಾಂಕ್ಷಿ ತನ್ವೀರ್ ಸೇಠ್ ಪಕ್ಷದ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. “ನನ್ನ ಆಸೆ ನಿರಾಸೆಯಾಗಿದೆ. ಹೈಕಮಾಂಡ್ ನೀಡಿದ್ದ ಭರವಸೆ ಹುಸಿಯಾಗಿದೆ. ಈಗ ನನ್ನ ಮುಂದಿನ ನಡೆ ಕಾರ್ಯಕರ್ತರ ತೀರ್ಮಾನಕ್ಕೆ ಬದ್ಧ” ಎಂದು ಸ್ಪಷ್ಟಪಡಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, “ರಾಹುಲ್ ಗಾಂಧಿ ಕುರಿತು ಹೇಳಲಾದ ಒಂದೇ ಒಂದು ಪದಕ್ಕೆ ರಾಜಣ್ಣ ಅವರು ಸ್ಥಾನ ಕಳೆದುಕೊಂಡರು. ಆದರೆ ಪಕ್ಷದ ವಿರುದ್ಧ ಬಹಿರಂಗವಾಗಿ ಮಾತನಾಡಿದವರ ವಿರುದ್ಧ ಯಾವುದೇ ಕ್ರಮವಾಗಲಿಲ್ಲ. ಜಮೀರ್ ಅಹ್ಮದ್ ಮಾತ್ರವಲ್ಲ, ಹಲವರು ಪಕ್ಷದ ವರ್ಚಸ್ಸನ್ನು ಕಡೆಗಣಿಸಿದ್ದಾರೆ” ಎಂದು ಪರೋಕ್ಷವಾಗಿ ಅಸಮಾಧಾನ ಹೊರಹಾಕಿದರು.
“ನಾನು ಯಾರ ವಿರುದ್ಧವೂ ವೈಯಕ್ತಿಕವಾಗಿ ಮಾತನಾಡುವುದಿಲ್ಲ. ಅದಕ್ಕೂ ಒಂದು ಕಾಲ ಬರುತ್ತದೆ. ನನ್ನ ಕೋಪ, ನೋವು ಮತ್ತು ಬೇಸರವನ್ನು ಯಾವುದೇ ಪದಗಳಲ್ಲಿ ವ್ಯಕ್ತಪಡಿಸದೆ ಕಾಂಗ್ರೆಸ್ ಪಕ್ಷದ ಶಿಸ್ತಿನ ಸಿಪಾಯಿಯಾಗಿ ಉಳಿದಿದ್ದೇನೆ” ಎಂದರು.
“ಯಾವುದೇ ನಿಗಮ-ಮಂಡಳಿ ಸ್ಥಾನವೂ ಬೇಡ ಎಂದು ಹೇಳಿದ್ದೆ. ಎರಡೂವರೆ ವರ್ಷದ ಬಳಿಕ ಸಚಿವ ಸ್ಥಾನ ಸಿಗುತ್ತದೆ ಎಂಬ ಭರವಸೆ ನೀಡಲಾಗಿತ್ತು. ಆದರೆ ಆ ವಿಶ್ವಾಸವನ್ನು ಪಕ್ಷವೇ ಹುಸಿಗೊಳಿಸಿದೆ. ನಮ್ಮ ಜಿಲ್ಲೆಯವರೇ ಮುಖ್ಯಮಂತ್ರಿ ಆಗಿರುವ ಕಾರಣ ಸಚಿವ ಸ್ಥಾನ ನೀಡಲು ಸಾಧ್ಯವಿಲ್ಲ ಎಂದು ಹೇಳಿದಾಗಲೂ ಮೌನವಾಗಿದ್ದೆ” ಎಂದು ಬೇಸರ ವ್ಯಕ್ತಪಡಿಸಿದರು.
“ದೆಹಲಿ ಹೋಗಿ ಲಾಬಿ ಮಾಡಲಿಲ್ಲ, ಈಗಲೂ ಮಾಡುವುದಿಲ್ಲ. ಪಕ್ಷ ನಮ್ಮನ್ನು ಕಡೆಗಣಿಸಿದೆ. ನನ್ನ ಅವಕಾಶ ತಪ್ಪಲು ರಾಜ್ಯದ ಕೆಲ ನಾಯಕರ ಕೈವಾಡವಿದೆ. ಹೈಕಮಾಂಡ್‌ನಿಂದ ನನಗೆ ಯಾವುದೇ ಅನ್ಯಾಯವಾಗಿಲ್ಲ, ತಪ್ಪು ರಾಜ್ಯ ನಾಯಕರಿಂದಾಗಿದೆ. ಯಾರಿಂದ ಅವಕಾಶ ತಪ್ಪಿದೆ ಎಂಬುದು ಶೀಘ್ರದಲ್ಲೇ ಬಹಿರಂಗವಾಗಲಿದೆ” ಎಂದು ಎಚ್ಚರಿಕೆ ನೀಡಿದರು.
ಮೈಸೂರು ನಗರ ಹಾಗೂ ಜಿಲ್ಲೆಗೆ ಸೇವೆ ಮಾಡುವ ಅವಕಾಶ ಕಸಿದುಕೊಳ್ಳಲಾಗಿದೆ ಎಂದು ಆರೋಪಿಸಿದ ಅವರು, “ಅಭಿಮಾನಿಗಳು ರಾಜೀನಾಮೆ ನೀಡುವಂತೆ ಒತ್ತಾಯಿಸುತ್ತಿದ್ದಾರೆ. ಕಾರ್ಯಕರ್ತರ ಜೊತೆ ಚರ್ಚಿಸಿ ಮುಂದಿನ ತೀರ್ಮಾನ ಕೈಗೊಳ್ಳುತ್ತೇನೆ. ಪಕ್ಷದ ಮೇಲೆ ಇದ್ದ ನಂಬಿಕೆ ಕುಸಿದಿದೆ” ಎಂದು ಹೇಳಿದರು.
ರಾಜಕಾರಣದ ಮೌಲ್ಯಗಳ ಮೇಲೂ ಪ್ರಶ್ನೆ ಎತ್ತಿದ ತನ್ವೀರ್ ಸೇಠ್, “ಮಗು ಅತ್ತರೆ ಮಾತ್ರ ತಾಯಿ ಹಾಲು ಕೊಡುತ್ತಾಳೆ ಎಂಬ ಪರಿಸ್ಥಿತಿ ರಾಜಕಾರಣದಲ್ಲೂ ಬಂದಿದೆಯೇ ಎಂಬ ಅನುಮಾನ ಮೂಡಿದೆ. ರಾಜಕಾರಣ ಯಾವ ದಿಕ್ಕಿನಲ್ಲಿ ಸಾಗುತ್ತಿದೆ ಎಂಬುದನ್ನು ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿದೆ” ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ENGLISH SUMMARY…
Tanveer Sait Expresses Strong Discontent Over Cabinet Snub
Mysuru, Aug. 3: Senior Congress leader and ministerial aspirant Tanveer Sait voiced strong disappointment after being denied a cabinet berth, saying his “trust has been betrayed.” He claimed he was assured an opportunity after two-and-a-half years but was overlooked. Sait said he would abide by the decision of party workers regarding his next political move, while maintaining that he remains a disciplined Congress worker. He also alleged that state leaders, not the high command, were responsible for denying him the ministerial post.
#TanveerSait #Congress #KarnatakaPolitics #CabinetExpansion #Mysuru #PoliticalNews #JustKannada
Key words: Mysore, Tanveer Sait, Expresses, Strong Discontent, Over, Cabinet Snub






