ವರ್ಷದೊಳಗೆ ಮೈಸೂರು ಸುತ್ತಮುತ್ತಲ ಬಡಾವಣೆಗಳಿಗೆ ಕಾವೇರಿ ನೀರು: ಶಾಸಕ ಜಿ.ಟಿ ದೇವೇಗೌಡ

ಮೈಸೂರು,ಜುಲೈ,6,2026 (www.justkannada.in): ನಗರದ ಸುತ್ತಮುತ್ತಲಿನಲ್ಲಿರುವ ಎಲ್ಲ  ಪಟ್ಟಣ ಪಂಚಾಯಿತಿಗಳು ಹಾಗೂ ನಗರಸಭೆ  ವ್ಯಾಪ್ತಿಗೆ ಬರುವ ಬಡಾವಣೆಗಳಿಗೆ  ಇನ್ನೊಂದು ವರ್ಷದಲ್ಲಿ ಕಾವೇರಿ -ಕಬಿನಿ ನೀರು ವಿತರಣೆ ಮಾಡಲಾಗುವುದು ಎಂದು ಮಾಜಿ ಸಚಿವ, ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ. ಟಿ. ದೇವೇಗೌಡ ತಿಳಿಸಿದರು.

ಯಡಹಳ್ಳಿ ಮುಖ್ಯರಸ್ತೆಯ ಲಿಂಗಾಂಬುದಿಯ  ಕೆಬಿಎಲ್  ಸೆಂಚುರಿ ಫೇಸ್ -1 ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘ  ತಮ್ಮ ಬಡಾವಣೆಯಲ್ಲಿ ಆಯೋಜಿಸಿದ್ದ ಹಸಿರು ಹಬ್ಬ-ಗಿಡ ನೆಡುವ ಕಾರ್ಯಕ್ರಮದಲ್ಲಿ ಶಾಸಕ ಜಿ.ಟಿ ದೇವೇಗೌಡ ಅವರು ಮಾತನಾಡಿದರು.

ಮೈಸೂರು ಹಾಗೂ ಸುತ್ತಮುತ್ತಲಿನ ಎಲ್ಲ ಮುಡಾ ಹಾಗೂ ಖಾಸಗಿ ಡೆವಲಪರ್ಸ್ ಅಭಿವೃದ್ಧಿ ಪಡಿಸಿರುವ ವಸತಿ ಪ್ರದೇಶಗಳಿಗೆ ಕುಡಿಯುವ ನೀರು ಸರಬರಾಜು ಮಾಡಲು ಸಮೃದ್ಧ ನೀರಿದೆ. ಆದರೆ, ನೀರು ಸರಬರಾಜು ವಿತರಣೆ ಮಾಡುವ ಜಾಲ ಬಲಗೊಂಡಿಲ್ಲ. ಈ ಎಲ್ಲವೂ ಮೈಸೂರು ಮಹಾನಗರ ಪಾಲಿಗೆ ವ್ಯಾಪ್ತಿಗೆ ಸೇರಿದ್ದರೆ, ಮೂಲ ಸೌಕರ್ಯಗಳ ಲಭ್ಯತೆ ಸಮಸ್ಯೆ ಎದುರಾಗುತ್ತಿರಲಿಲ್ಲ. ಕಾರಣಾಂತರಗಳಿಂದ ಅದು ಅಗಲಿಲ್ಲ. ಆದರೆ ಈಗ ನಗರದ ಸುತ್ತಮುತ್ತಲಿನ ಪ್ರದೇಶಗಳನ್ನು ಪಟ್ಟಣ ಪಂಚಾಯಿತಿ ಹಾಗೂ ನಗರ ಸಭೆ ವ್ಯಾಪ್ತಿಗೆ ತಂದಿರುವುದರಿಂದ ಒಂದಿಷ್ಟು ಅನುಕೂಲವಾಗಿದೆ. ಕನಿಷ್ಠ  ಈ ಬಡಾವಣೆಯಲ್ಲಿ  ವಾಸಿಸುತ್ತಿರುವ ನಿವಾಸಿಗಳಿಗೆ ಕುಡಿಯುವ ನೀರು, ಯುಜಿಡಿ ಹಾಗೂ ವಿದ್ಯುತ್ ಸೌಲಭ್ಯವನ್ನು ಕಲ್ಪಿಸಿಕೊಡಲಾಗುತ್ತಿದೆ ಎಂದರು.

ಕೆಬಿಎಲ್  ಸೆಂಚುರಿ ಫೇಸ್ -1ಗೆ ಕುಡಿಯುವ ನೀರು ವ್ಯವಸ್ಥೆ ಕಲ್ಪಿಸಿಕೊಡಬೇಕೆಂಬ ಸ್ಥಳೀಯ ನಿವಾಸಿಗಳ ಬೇಡಿಕೆಗೆ ಪ್ರತಿಕ್ರಿಯಿಸಿದ ಅವರು, ಮುಂದಿನ ವರ್ಷದೊಳಗೆ ಈ ಸೌಲಭ್ಯವನ್ನು ಎಲ್ಲ ಕಡೆಯೂ ಒದಗಿಸಲಾಗುವುದು ಎಂದರು.

ಕೆಬಿಎಲ್ ಸೆಂಚುರಿ ನಿವಾಸಿಗಳು ಸ್ವಯಂಪ್ರೇರಣೆಯಿಂದ ತಮ್ಮ ಬಡಾವಣೆಯ ಉದ್ಯಾನ ಹಾಗೂ ರಸ್ತೆಗಳಲ್ಲಿ ಗಿಡ ನೆಡುತ್ತಿರುವುದನ್ನು ಶ್ಲಾಘಿಸಿದ ಜಿಟಿ ದೇವೇಗೌಡರು, ಎಲ್ಲ ಬಡಾವಣೆಗಳಿಗೂ ಇದೊಂದು ಮಾದರಿ ನಡೆ ಎಂದರು.  20 ವರ್ಷಗಳ ಹಿಂದೆ ತಾವು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದಾಗ ಒಂದೇ ದಿನ ಲಕ್ಷ ಗಿಡ ನೆಡುವ ಕಾರ್ಯಕ್ರಮ ಆಯೋಜಿಸಿದ್ದನ್ನು ಸ್ಮರಿಸಿಕೊಂಡರು.

ಮುಡಾ ಮಾಜಿ ಅಧ್ಯಕ್ಷ ಎಚ್.ವಿ ರಾಜೀವ್ ಮಾತನಾಡಿ, “ಗಿಡ ನೆಡುವ ಹವ್ಯಾಸವೇ ಒಂದು ರೀತಿಯ ಒತ್ತಡ ನಿವಾರಕ ಥೆರಪಿ ಇದ್ದಂತೆ. ಪ್ರತಿಯೊಬ್ಬರು ಗಿಡ ನೆಡುವ, ಸಾಕು ಪ್ರಾಣಿಗಳನ್ನು ಸಾಕುವ ಇಲ್ಲವೇ ಒಳ್ಳೆಯ ಅಭಿರುಚಿಯನ್ನು ಬೆಳಸಿಕೊಳ್ಳುವುದು ದೈಹಿಕ ಹಾಗೂ ಮಾನಸಿಕ ಆರೋಗ್ಯಕ್ಕೆ ಒಳ್ಳೆಯದು ಎಂದರು.

ಶ್ರೀರಾಂಪುರ ಪಟ್ಟಣ ಪಂಚಾಯಿತಿ ಮುಖ್ಯ ಅಧಿಕಾರಿ ಶ್ರೀಧರ್, ಹಸಿರು ಮೈಸೂರು ತಂಡದ ಸುಬ್ರಹ್ಮಣ್ಯ ಸ್ವಾಮಿ ಅವರು ಮಾತನಾಡಿದರು.

ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಸಿದ್ದನಾಯಕ, ಗೌರವಾಧ್ಯಕ್ಷ ಗೋವಿಂದಪ್ಪ, ಪದಾಧಿಕಾರಿಗಳಾದ ಪ್ರಸಾದ್, ರಾಘವೇಂದ್ರ,  ಮಹೇಶ್ ಮತ್ತಿತರರು ಹಾಜರಿದ್ದರು.

Key words: Cauvery water,  Mysore, surrounding areas, MLA, GT Deve Gowda