ವಿದ್ಯುತ್‌ ಪರಿವರ್ತಕಗಳ ಬ್ಯಾಂಕ್‌ ಸ್ಥಾಪನೆ: ಟ್ರಾನ್ಸ್‌ ಫಾರ್ಮರ್‌ ಗಳ ತುರ್ತು ನಿರ್ವಹಣೆಗೆ ‘ಸೆಸ್ಕ್‌’ ಸಜ್ಜು

ಮೈಸೂರು, ಮೇ, 25, 2026 (www.justkannada.in):  ಗ್ರಾಹಕರಿಗೆ ಅಡಚಣೆರಹಿತ ವಿದ್ಯುತ್‌ ಪೂರೈಕೆ ಮಾಡುವ ಉದ್ದೇಶದಿಂದ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ(ಸೆಸ್ಕ್‌) ಅಗತ್ಯ ಕ್ರಮವಹಿಸಿದೆ. ಇದಕ್ಕಾಗಿ ಪ್ರತಿಯೊಂದು ತಾಲೂಕುಗಳಲ್ಲಿ ವಿದ್ಯುತ್‌ ಪರಿವರ್ತಕಗಳ ಬ್ಯಾಂಕ್‌ ಸ್ಥಾಪಿಸಿ, ಹೆಚ್ಚುವರಿ ಟ್ರಾನ್ಸ್‌ಫಾರ್ಮರ್‌ ಗಳನ್ನು ಸಂಗ್ರಹಿಸಿಕೊಳ್ಳಲಾಗಿದೆ.

ಈ ಕುರಿತು ಪ್ರಕಟಣೆ ಹೊರಡಿಸಿರುವ ಅಧಿಕಾರಿಗಳು, ಸೆಸ್ಕ್‌ ವ್ಯಾಪ್ತಿಗೆ ಒಳಪಡುವ ಮೈಸೂರು, ಮಂಡ್ಯ, ಚಾಮರಾಜನಗರ, ಕೊಡಗು ಹಾಗೂ ಹಾಸನ ಜಿಲ್ಲೆಗಳ ಎಲ್ಲಾ ತಾಲೂಕುಗಳಲ್ಲಿರುವ ಟ್ರಾನ್ಸ್‌ ಫಾರ್ಮರ್‌ಗಳ ಸಂಖ್ಯೆಗೆ ಅನುಗುಣವಾಗಿ ಹೆಚ್ಚುವರಿ ಟ್ರಾನ್ಸ್‌ ಫಾರ್ಮರ್‌ ಗಳನ್ನು ನಿಗಮದ ವಿವಿಧ ದಾಸ್ತಾನು ಕೇಂದ್ರಗಳಲ್ಲಿ ಬಫರ್‌ ಸ್ಟಾಕ್‌ಗಳನ್ನು ಸಂಗ್ರಹಿಸಿ ಇರಿಸಲಾಗಿದೆ. ಇದರಿಂದ ತಾಲೂಕಿನ ಯಾವುದೇ ಪ್ರದೇಶದಲ್ಲಿರುವ ವಿದ್ಯುತ್‌ ಪರಿವರ್ತಕಗಳಲ್ಲಿ ದೋಷ ಉಂಟಾದರೂ ತ್ವರಿತವಾಗಿ ಬದಲಾವಣೆ ಅಥವಾ ದುರಸ್ತಿ ಕಾರ್ಯಕೈಗೊಳ್ಳಲು ಅನುಕೂಲವಾಗಲಿದೆ ಎಂದು ಹೇಳಿದ್ದಾರೆ.

ಮುಂದಿನ ದಿನಗಳಲ್ಲಿ ಮುಂಗಾರು ಕೂಡ ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ ಮಳೆ ಹಾಗೂ ಗಾಳಿಯಿಂದಾಗಿ ಕೆಲವು ಕಡೆಗಳಲ್ಲಿ ಟ್ರಾನ್ಸ್‌ ಫಾರ್ಮರ್‌ ಗಳಿಗೆ ಹಾನಿಯಾಗುವ ಸಾಧ್ಯತೆಯೂ ಹೆಚ್ಚಾಗಿರುವುದರಿಂದ, ಅವುಗಳನ್ನು ಶೀಘ್ರವಾಗಿ ದುರಸ್ತಿ ಮಾಡಿ ವಿದ್ಯುತ್‌ ಪೂರೈಕೆಯಲ್ಲಿ ವ್ಯತ್ಯಯವಾಗದಂತೆ ಕ್ರಮವಹಿಸಲು ಸೆಸ್ಕ್‌ ಸನ್ನದ್ಧವಾಗಿದೆ. ಆದ್ದರಿಂದ ಸಾರ್ವಜನಿಕರು ಮತ್ತು ರೈತರು ಟ್ರಾನ್ಸ್‌ ಫಾರ್ಮರ್‌ ಗಳಲ್ಲಿ ದೋಷ ಕಂಡುಬಂದಲ್ಲಿ ತಕ್ಷಣವೇ ಸೆಸ್ಕ್‌ 24*7 ಸಹಾಯವಾಣಿ 1912 ಅಥವಾ ಸಮೀಪದ ಸೇವಾ ಕೇಂದ್ರಗಳಿಗೆ ಮಾಹಿತಿ ನೀಡುವಂತೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ(ಸೆಸ್ಕ್‌) ವ್ಯಾಪ್ತಿಯಲ್ಲಿನ ನಗರ ಅಥವಾ ಗ್ರಾಮೀಣ ಪ್ರದೇಶಗಳ ಗ್ರಾಹಕರು ಯಾವುದೇ ವಿದ್ಯುತ್‌ ಸಂಪರ್ಕದ ಮಾಹಿತಿಗಾಗಿ ಚಾವಿಸನಿನಿ(ಸೆಸ್ಕ್)‌ ಉಪವಿಭಾಗ/ವಿಭಾಗದ ಅಧಿಕಾರಿಗಳನ್ನು ಸಂಪರ್ಕಿಸಬಹುದಾಗಿದೆ.

ಜಿಲ್ಲಾವಾರು ಸಹಾಯವಾಣಿ ಸಂಖ್ಯೆಗಳು:

ಕೊಡಗು – 18005990061

ಮೈಸೂರು – 18005990062

ಚಾಮರಾಜನಗರ – 18005990063

ಮಂಡ್ಯ – 18005990064

ಹಾಸನ – 18005990065

Key words: power transformers, bank,  CESC, Mysore