ಮೈಸೂರು, ಮೇ 19,2026: ಮೈಸೂರು ವಿಶ್ವವಿದ್ಯಾನಿಲಯದ ಘಟಿಕೋತ್ಸವದ ಪದವಿ ಪ್ರಮಾಣಪತ್ರ ಶುಲ್ಕ ಪಾವತಿಸಲು ಕೊನೆಯ ದಿನ ಮೇ 19 ಹಾಗೂ 20 ಎಂದು ತಿಳಿದ ವಿದ್ಯಾರ್ಥಿಗಳು, ಮಂಗಳವಾರ ಕ್ರಾಫರ್ಡ್ ಭವನದ ಆವರಣದಲ್ಲಿರುವ ಎಸ್‌ಬಿಐ ಬ್ಯಾಂಕ್ ಎದುರು ಭಾರೀ ಸಂಖ್ಯೆಯಲ್ಲಿ ಜಮಾಯಿಸಿ ಪರದಾಡಿದ ಘಟನೆ ನಡೆದಿದೆ.
ಚಾಮರಾಜನಗರ, ಮಂಡ್ಯ, ಹಾಸನ ಸೇರಿದಂತೆ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ 2023, 2024 ಮತ್ತು 2025ನೇ ಸಾಲಿನ ವಿದ್ಯಾರ್ಥಿಗಳು ಪದವಿ ಪ್ರಮಾಣಪತ್ರಕ್ಕಾಗಿ ನಿಗದಿಪಡಿಸಿರುವ ₹2,840 ಶುಲ್ಕ ಪಾವತಿಸಲು ಬೆಳಗ್ಗಿನಿಂದಲೇ ಬ್ಯಾಂಕ್ ಮುಂದೆ ಉದ್ದ ಸಾಲಿನಲ್ಲಿ ನಿಂತಿದ್ದರು. ಶುಲ್ಕ ಪಾವತಿಸಲು ಇನ್ನೆರಡು ದಿನ ಮಾತ್ರ ಬಾಕಿಯಿದೆ ಎಂಬ ಆತಂಕದಿಂದ ವಿದ್ಯಾರ್ಥಿಗಳು ಬ್ಯಾಂಕ್ ಮುಂದೆ ಮುಗಿಬಿದ್ದ ದೃಶ್ಯ ಕಂಡುಬಂದಿತು.

ಈ ವೇಳೆ ವಿವಿ ಆಡಳಿತದ ವಿರುದ್ಧ ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದರು. “ಆನ್‌ಲೈನ್ ಮೂಲಕವೇ ಪದವಿ ಪ್ರಮಾಣಪತ್ರ ಪಡೆಯಲು ₹2,840 ಶುಲ್ಕ ಏಕೆ ವಿಧಿಸಲಾಗಿದೆ” ಎಂದು ಪ್ರಶ್ನಿಸಿದ ವಿದ್ಯಾರ್ಥಿಗಳು, ಸರಿಯಾದ ಮಾಹಿತಿ ನೀಡದೇ ಕೊನೆಯ ದಿನಾಂಕದ ಬಗ್ಗೆ ಆತಂಕ ಉಂಟು ಮಾಡಲಾಗಿದೆ ಎಂದು ದೂರಿದರು.

ಎಲ್ಲಾ ವಿದ್ಯಾರ್ಥಿಗಳು ಒಂದೇ ಎಸ್‌ಬಿಐ ಶಾಖೆಯಲ್ಲಿ ಶುಲ್ಕ ಪಾವತಿಸಬೇಕಾದ ಅನಿವಾರ್ಯತೆ ಇರುವುದರಿಂದ ಗೊಂದಲ ಮತ್ತು ಒತ್ತಡ ಹೆಚ್ಚಾಗಿದೆ ಎಂದು ವಿದ್ಯಾರ್ಥಿಗಳು ಅಸಮಾಧಾನ ವ್ಯಕ್ತಪಡಿಸಿದರು. ವಿವಿಧ ಜಿಲ್ಲೆಗಳಲ್ಲಿ ಅಥವಾ ಬೇರೆ ಎಸ್‌ಬಿಐ ಶಾಖೆಗಳಲ್ಲಿಯೂ ಶುಲ್ಕ ಪಾವತಿಸಲು ಅವಕಾಶ ಕಲ್ಪಿಸಬೇಕಿತ್ತು ಎಂದು ಅವರು ಆಗ್ರಹಿಸಿದರು.
ಮೈಸೂರು ವಿಶ್ವವಿದ್ಯಾನಿಲಯ ವ್ಯಾಪ್ತಿಯ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಅನುಭವಿಸುತ್ತಿರುವ ತೊಂದರೆ ಬಗ್ಗೆ ಮಾಹಿತಿ ಪಡೆದ ವಿವಿ ಆಡಳಿತ ಮಂಡಳಿ, ಪದವಿ ಪ್ರಮಾಣಪತ್ರ ಶುಲ್ಕ ಪಾವತಿಸಲು ನೀಡಿದ್ದ ಗಡುವನ್ನು ಮೇ 27ರವರೆಗೆ ವಿಸ್ತರಿಸಿದೆ.
key words: Mysore University, Students Rush, to Pay, Convocation Certificate Fee

SUMMARY:
Mysore University Students Rush to Pay Convocation Certificate Fee
Mysuru, May 19: Hundreds of students gathered at the SBI branch located inside Crawford Hall premises of the University of Mysore on Tuesday to pay the convocation degree certificate fee, fearing that May 19 and 20 were the last dates for payment.

Students from Chamarajanagar, Mandya, Hassan and other districts, belonging to the 2023, 2024 and 2025 batches, stood in long queues to pay the prescribed fee of ₹2,840 for obtaining their degree certificates. Many students expressed anger over the university administration’s handling of the process.







